
ಅಹ್ಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸುತ್ತಿರುವ ಭಾರತ 2ನೇ ದಿನದಾಟದ ಅಂತ್ಯಕ್ಕೆ 286 ರನ್ ಗಳ ಮುನ್ನಡೆ ಕಾಯ್ದುಕೊಂಡಿದೆ.
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಅಹಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಸಂಪೂರ್ಣ ಹಿಡಿತ ಸಾಧಿಸಿದ್ದು, 2ನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 448/5 ಗಳಿಸಿ 286 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ.
ಎರಡನೇ ದಿನದಾಟದಲ್ಲೂ ವಿಂಡೀಸ್ ಬೌಲರ್ ಗಳ ಬೆವರಿಳಿಸಿದ ಭಾರತೀಯ ಬ್ಯಾಟರ್ ಗಳು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಭಾರತೀಯ ಬ್ಯಾಟರ್ ಗಳ ಅಬ್ಬರದ ನಡುವೆ ವಿಂಡೀಸ್ ಬೌಲರ್ ಗಳು ವಿಕೆಟ್ ಗಾಗಿ ಅಕ್ಷರಶಃ ಪರದಾಡಿದರು.
ಎರಡನೇ ದಿನದಾಟದಲ್ಲಿ ಇಡೀ ದಿನ ಬೌಲಿಂಗ್ ಮಾಡಿದ ವಿಂಡೀಸ್‌ಗೆ ಭಾರತದ ಮೂವರು ಬ್ಯಾಟರ್‌ಗಳನ್ನು ಮಾತ್ರ ಔಟ್ ಮಾಡಲು ಸಾಧ್ಯವಾಯಿತು.
ಒಂದೇ ದಿನ 3 ಶತಕ
ಇನ್ನು ಭಾರತದ ಬ್ಯಾಟಿಂಗ್ ಎಷ್ಟು ಪ್ರಭಾವಿಯಾಗಿತ್ತು ಎಂದರೆ ಇಂದು ಒಂದೇ ದಿನ ಭಾರತದ ಮೂವರು ಬ್ಯಾಟರ್ ಗಳು ಶತಕ ಸಿಡಿಸಿದ್ದಾರೆ. ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ ಅರ್ಧಶತಕ ಸಿಡಿಸಿ ಅಜೇಯರಾಗಿ ಉಳಿದಿದ್ದ ಕೆಎಲ್ ರಾಹುಲ್ ಎರಡನೇ ದಿನದಾಟದ ಮೊದಲ ಸೆಷನ್‌ನಲ್ಲೇ ಶತಕ ಸಿಡಿಸಿದರು.
2ನೇ ದಿನದಾಟದ ಮೊದಲ ಇನಿಂಗ್ಸ್‌ನಲ್ಲಿ ರೋಸ್ಟನ್ ಚೇಸ್ ಬೌಲಿಂಗ್ ವೇಳೆ ಸಿಂಗಲ್ ತೆಗೆದುಕೊಳ್ಳುವ ಮೂಲಕ ಶತಕ ಸಿಡಿಸಿದರು. ಇದು ಅವರ ವೃತ್ತಿ ಜೀವನದಲ್ಲಿ ಭಾರತದಲ್ಲಿ ದಾಖಲಾದ 2ನೇ ಶತಕವಾಗಿದೆ.
ದ್ರುವ್ ಜುರೆಲ್-ರವೀಂದ್ರ ಜಡೇಜಾ ದ್ವಿಶತಕ ಜೊತೆಯಾಟ
ರಾಹುಲ್ ಮತ್ತು ಗಿಲ್ ಔಟಾದ ಬಳಿಕ ಜೊತೆಗೂಡಿದ ದ್ರುವ್ ಜುರೆಲ್ ಮತ್ತು ರವೀಂದ್ರ ಜಡೇಜಾ ಜೋಡಿ ಕೂಡ ದ್ವಿಶತಕ ಜೊತೆಯಾಟವಾಡಿತು. 331 ಎಸೆತಗಳಲ್ಲಿ ಈ ಜೋಡಿ 206 ಕಲೆ ಹಾಕಿದ್ದು, ಈ ಪೈಕಿ ಜುರೆಲ್ 111 ರನ್ ಮತ್ತು ರವೀಂದ್ರ ಜಡೇಜಾ 91 ರನ್ ಸಿಡಿಸಿದ್ದರು.
ಜುರೆಲ್ 210 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 15 ಬೌಂಡರಿಗಳ ಸಹಿತ 125ರನ್ ಪೇರಿಸಿದರೆ, ರವೀಂದ್ರ ಜಡೇಜಾ 176 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 6 ಬೌಂಡರಿ ಸಹಿತ ಅಜೇಯ 104 ರನ್ ಗಳಿಸಿ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಅಂತಿಮವಾಗಿ ಭಾರತ ತಂಡ 2ನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 448 ರನ್ ಗಳಿಸಿದ್ದು, ಮೊದಲ ಇನ್ನಿಂಗ್ಸ್ ನಲ್ಲಿ 286 ರನ್ ಮುನ್ನಡೆ ಸಾಧಿಸಿದೆ. ಅಜೇಯ 104 ರನ್ ಗಳಿಸಿರುವ ರವೀಂದ್ರ ಜಡೇಜಾ ಮತ್ತು 9 ರನ್ ಗಳಿಸಿರುವ ವಾಷಿಂಗ್ಟನ್ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
Advertisement