
ಅಹ್ಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಅಬ್ಬರ ಮುಂದುವರೆದಿದ್ದು, ಪ್ರಮುಖವಾಗಿ ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ.
ಹೌದು.. ಸ್ಪಿನ್ನರ್ ಆಗಿ ಟೆಸ್ಟ್ ವೃತ್ತಿಜೀವನವನ್ನು ಪ್ರಾರಂಭಿಸಿದ್ದ ರವೀಂದ್ರ ಜಡೇಜಾ, ಇದೀಗ ಭಾರತ ತಂಡಕ್ಕೆ ಪ್ರಮುಖ ಆಲ್‌ರೌಂಡರ್ ಆಗಿ ತಮ್ಮ ಮೌಲ್ಯವನ್ನು ಸಾಬೀತುಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.
ಸಾಕಷ್ಟು ಸರಣಿಗಳಲ್ಲಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಸಾಬೀತು ಮಾಡಿರುವ ರವೀಂದ್ರ ಜಡೇಜಾ ಇದೀಗ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದ 85 ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ರವೀಂದ್ರ ಜಡೇಜಾ ಅಮೋಘ ಶತಕ ಸಿಡಿಸುವ ಮೂಲಕ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ರವೀಂದ್ರ ಜಡೇಜಾ 176 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 6 ಬೌಂಡರಿ ಸಹಿತ ಅಜೇಯ 104 ರನ್ ಗಳಿಸಿ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇನ್ನು ಈ ಶತಕದ ಬೆನ್ನಲ್ಲೇ ಜಡೇಜಾ ಅಪರೂಪದ ದಾಖಲೆಗೂ ಪಾತ್ರರಾಗಿದ್ದು, ಆದರೆ ಈ ದಾಖಲೆ ಅವರ ಶತಕದ್ದಲ್ಲ... ಬದಲಿಗೆ ಅವರ ಬ್ಯಾಟ್ ನಿಂದ ಬಂದ ಸಿಕ್ಸರ್ ಗಳಿಂದ...
ಸಿಕ್ಸರ್ ದಾಖಲೆ, ಎಲೈಟ್ ಗ್ರೂಪ್ ಸೇರ್ಪಡೆ
ಇಂದಿನ ಇನ್ನಿಂಗ್ಸ್ ನಲ್ಲಿ ರವೀಂದ್ರ ಜಡೇಜಾ ಬರೊಬ್ಬರಿ 5 ಸಿಕ್ಸರ್ ಗಳನ್ನು ಸಿಡಿಸಿದ್ದು ಆ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ ಸಿಕ್ಸರ್ ಗಳ ಸಂಖ್ಯೆಯನ್ನು 78ಕ್ಕೆ ಏರಿಕೆ ಮಾಡಿಕೊಂಡರು. ಅಂತೆಯೇ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಪರ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ಗಳ ಪಟ್ಟಿಯಲ್ಲಿ ಇದೀಗ ರವೀಂದ್ರ ಜಡೇಜಾ 5ನೇ ಆಟಗಾರರಾಗಿದ್ದಾರೆ.
ಅಗ್ರಸ್ಥಾನದಲ್ಲಿ ರಿಷಬ್ ಪಂತ್
ಇನ್ನು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಪರ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ಗಳ ಪಟ್ಟಿಯಲ್ಲಿ ರಿಷಬ್ ಪಂತ್ ಅಗ್ರಸ್ಥಾನದಲ್ಲಿದ್ದು, ಪಂತ್ 90 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. 2ನೇ ಸ್ಥಾನದಲ್ಲಿ ವಿರೇಂದ್ರ ಸೆಹ್ವಾಗ್ ಇದ್ದು, ಸೆಹ್ವಾಗ್ ಕೂಡ 90 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. 88 ಸಿಕ್ಸರ್ ಸಿಡಿಸಿರುವ ಮಾಜಿ ನಾಯಕ ರೋಹಿತ್ ಶರ್ಮಾ 3ನೇ ಸ್ಥಾನದಲ್ಲಿದ್ದು, 78 ಸಿಕ್ಸರ್ ಗಳೊಂದಿಗೆ ಎಂಎಸ್ ಧೋನಿ ಮತ್ತು ರವೀಂದ್ರ ಜಡೇಜಾ ನಂತರದ ಸ್ಥಾನಗಳಲ್ಲಿದ್ದಾರೆ.
Advertisement