ಮೈದಾನದಲ್ಲೇ ಹೈಡ್ರಾಮಾ: ರನೌಟ್ ಆಗಿ ಕ್ರೀಸ್ ತೊರೆಯದ ಪಾಕ್ ಬ್ಯಾಟರ್ Muneeba Ali, ಬಲವಂತವಾಗಿ ಹೊರಗಟ್ಟಿದ ಅಂಪೈರ್ ಗಳು, ಆಗಿದ್ದೇನು?

ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 247 ರನ್ ಕಲೆಹಾಕಿದ್ದರು.
pakistan Batter Muneeba Ali dismissed in controversial fashion
ಮುನೀಬಾ ಅಲಿ ರನೌಟ್ ವಿವಾದ
Updated on

ಕೊಲಂಬೋ: ಮಹಿಳಾ ಏಕದಿನ ವಿಶ್ವಕಪ್​ನ ಭಾರತ ಮತ್ತು ಪಾಕಿಸ್ತಾನ ತಂಡಗಳ ಪಂದ್ಯ ನಿರೀಕ್ಷೆಯಂತೆಯೇ ಹಲವು ಹೈಡ್ರಾಮಾಗಳಿಗೆ ಸಾಕ್ಷಿಯಾಗಿದ್ದು, ಪ್ರಮುಖವಾಗಿ ಪಾಕ್ ಬ್ಯಾಟರ್ ಮನೀಬಾ ಅಲಿ (Muneeba Ali)ಯನ್ನು ಅಂಪೈರ್ ಗಳೇ ಮೈದಾನದಿಂದ ಹೊರಗಟ್ಟಿದ ಪ್ರಸಂಗ ಕೂಡ ನಡೆದಿದೆ.

ಹೌದು.. ಮಹಿಳಾ ಏಕದಿನ ವಿಶ್ವಕಪ್​ನ 6ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿದ್ದವು. ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 247 ರನ್ ಕಲೆಹಾಕಿದ್ದರು.

ಈ ಸಾಮಾನ್ಯ ಗುರಿಯನ್ನು ಬೆನ್ನು ಹತ್ತಿದ ಪಾಕಿಸ್ತಾನ ವನಿತೆಯರ ತಂಡ 43 ಓವರ್ ನಲ್ಲಿ 159 ರನ್ ಗೆ ಆಲೌಟ್ ಆಯಿತು. ಆ ಮೂಲಕ ಭಾರತದ ಎದುರು 88 ರನ್ ಗಳ ಹೀನಾಯ ಸೋಲು ಕಂಡಿತು.

ಮುನಿಬಾ ಅಲಿ ವಿವಾದಾತ್ಮಕ ರನೌಟ್

ಚೇಸಿಂಗ್ ವೇಳೆ ಪಾಕಿಸ್ತಾನ ನಿಧಾನಗತಿಯ ಬ್ಯಾಟಿಂಗ್ ಮಾಡಿತು. ಆರಂಭದಿಂದಲೂ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದ್ದ ಪಾಕ್ ಬ್ಯಾಟರ್ ಗಳು ರನ್ ಗಳಿಸಲು ತಿಣುಕಾಡಿದರು. ಇದೇ ಹಂತದಲ್ಲಿ ಪಾಕ್ ಬ್ಯಾಟರ್ ರನೌಟ್ ಗೆ ಬಲಿಯಾಗಿದ್ದು ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

pakistan Batter Muneeba Ali dismissed in controversial fashion
ಏಕದಿನ ವಿಶ್ವಕಪ್: "Bh***diki ಕಣ್ಣು ತೋರಿಸ್ತಾಳೆ': ಪಾಕ್ ಸ್ಪಿನ್ನರ್ ವಿರುದ್ಧ ಹರ್ಮನ್ ಪ್ರೀತ್ ಕೌರ್ ಕೆಂಡ

ಆಗಿದ್ದೇನು?

ಭಾರತ ನೀಡಿದ್ದ 248 ರನ್ ಗಳ ಗುರಿಯನ್ನು ಬೆನ್ನತ್ತಲು ಆಗಮಿಸಿದ ಪಾಕಿಸ್ತಾನ್ ತಂಡವು 4 ಓವರ್​ನಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಪಾಕಿಸ್ತಾನದ ಆರಂಭಿಕ ಆಟಗಾರ್ತಿ ಮುನೀಬಾ ಅಲಿ ವಿವಾದಾತ್ಮಕ ರನೌಟ್ ಗೆ ತುತ್ತಾಗಿದ್ದರು. ನಾಲ್ಕನೇ ಓವರ್​ನ ಕೊನೆಯ ಎಸೆತದಲ್ಲಿ ಚೆಂಡು ಮುನೀಬಾ ಪ್ಯಾಡ್ ಸವರಿ ಸಾಗಿತು. ಇತ್ತ ಟೀಮ್ ಇಂಡಿಯಾ ಆಟಗಾರ್ತಿಯರು ಎಲ್​ಬಿಡಬ್ಲ್ಯೂಗೆ ಮನವಿ ಮಾಡಿದ್ದರು. ಆದರೆ ಅಂಪೈರ್ ಔಟ್ ನೀಡಿರಲಿಲ್ಲ.

ಇದರ ನಡುವೆ ದೀಪ್ತಿ ಶರ್ಮಾ ಚೆಂಡನ್ನು ವಿಕೆಟ್​ಗೆ ಎಸೆದರು. ಚೆಂಡು ವಿಕೆಟ್​ಗೆ ತಾಗುವ ಮುನ್ನವೇ ಮುನೀಬಾ ಅಲಿ ಕ್ರೀಸ್​ಗೆ ಒಳಗೆ ಬ್ಯಾಟ್ ಇಟ್ಟಿದ್ದರು. ಆದರೆ ಚೆಂಡು ವಿಕೆಟ್​ಗೆ ತಗುಲುವ ಹೊತ್ತಿಗೆ ಬ್ಯಾಟ್ ಮೇಲೆದ್ದು ಗಾಳಿಯಲ್ಲಿತ್ತು. ಹೀಗಾಗಿ ಮುನೀಬಾ ಕ್ರೀಸ್​ ನಿಂದ ಹೊರಗಿದ್ದರು.

ಅಲ್ಲದೆ ಕ್ರೀಸ್​ನಲ್ಲಿಟ್ಟ ಬ್ಯಾಟ್ ಅನ್ನು ಮೇಲೆಕ್ಕೆತ್ತಿದ್ದರು. ಮೊದಲಿಗೆ ಬ್ಯಾಟ್ ಕ್ರೀಸ್​ನಲ್ಲಿಟ್ಟ ಕಾರಣ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರು. ಆದರೆ ಮರು ಪರಿಶೀಲನೆ ವೇಳೆ ಚೆಂಡು ತಗುಲಿದಾಗ ಅವರು ಬ್ಯಾಟ್ ಮೇಲೆತ್ತಿರುವುದು ಗೋಚರಿಸಿತು. ಹೀಗಾಗಿ ಮೂರನೇ ಅಂಪೈರ್ ತನ್ನ ತೀರ್ಪು ಬದಲಿಸಿ ಔಟ್ ಎಂದರು. ಅಂದರೆ ಮುನೀಬಾ ಅಲಿ ಕ್ರೀಸ್​ನಲ್ಲಿ ಬ್ಯಾಟ್ ಇಟ್ಟರೂ, ರನೌಟ್ ಆಗಿ ಹೊರ ನಡೆಯಬೇಕಾಯಿತು.

pakistan Batter Muneeba Ali dismissed in controversial fashion
Women's World cup 2025: ಪಾಕಿಸ್ತಾನ ವಿರುದ್ಧ ಭಾರತ 88 ರನ್ ಗೆಲುವು

ಕ್ರೀಸ್ ತೊರೆಯಲು ನಿರಾಕರಿಸಿದ ಮುನೀಬಾ

ಇನ್ನು ಮೊದಲು ಮೂರನೇ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ ಕಾರಣ ಮುನೀಬಾ ಕ್ರೀಸ್ ತೊರೆದಿರಲಿಲ್ಲ. ಆದರೆ ಬಳಿಕ ಮರುಶೀಲಿಸಿದ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಈ ವೇಳೆ ಮುನೀಬಾ ಅಂಪೈರ್ ಗಳ ಜೊತೆ ವಾಗ್ವಾದ ಮಾಡಿದರು. ಅಷ್ಟು ಹೊತ್ತಿಗಾಗಲೇ ಪಾಕ್ ನ ಮತ್ತೊರ್ವ ಬ್ಯಾಟರ್ ಕ್ರೀಸ್ ಗೆ ಬಂದಿದ್ದರು. ಹೀಗಾಗಿ ಅಂಪೈರ್ ಗಳು ಬಲವಂತವಾಗಿ ಮುನೀಬಾರನ್ನು ಕ್ರೀಸ್ ತೊರೆಯುವಂತೆ ಸೂಚಿಸಿದರು. ಬಳಿಕ ಬೇರೆ ದಾರಿಯಿಲ್ಲದೇ ಮುನೀಬಾ ಕ್ರೀಸ್ ತೊರೆದರು.

ಐಸಿಸಿ ನಿಯಮ ಹೇಳೋದೇನು?

ಐಸಿಸಿ ರನೌಟ್ ನಿಯಮದ ಪ್ರಕಾರ, ಬ್ಯಾಟರ್‌ನ ದೇಹದ ಅಥವಾ ಬ್ಯಾಟ್‌ನ ಕೆಲವು ಭಾಗವು ಪಾಪಿಂಗ್ ಕ್ರೀಸ್‌ನ ಹಿಂದೆಯಿದ್ದರೆ, ಅವರನ್ನು ಕ್ರೀಸ್​ನಿಂದ ಹೊರಗಿದ್ದಾರೆಂದು ಪರಿಗಣಿಸಲಾಗುತ್ತದೆ. ಅದಾಗ್ಯೂ, ಒಬ್ಬ ಬ್ಯಾಟರ್ ತನ್ನ ಮೈದಾನದ ಕಡೆಗೆ ಮತ್ತು ಅದರಾಚೆಗೆ ಓಡುವಾಗ ಅಥವಾ ಡೈವಿಂಗ್ ಮಾಡುವಾಗ ಮತ್ತು ಅವನ/ಅವಳ ದೇಹದ ಅಥವಾ ಬ್ಯಾಟ್‌ನ ಕೆಲವು ಭಾಗವನ್ನು ಪಾಪಿಂಗ್ ಕ್ರೀಸ್‌ನ ಆಚೆಗೆ ನೆಲಕ್ಕೆ ತಾಗಿ ಆ ಬಳಿಕ ಅವನ/ಅವಳ ದೇಹದ ಅಥವಾ ಬ್ಯಾಟ್‌ನ ಯಾವುದೇ ಭಾಗದ ನಡುವೆ ಸಂಪರ್ಕ ತಪ್ಪಿದರೆ, ಅವರನ್ನು ಕ್ರೀಸ್​ನಿಂದ ಹೊರಗೆ ಇದ್ದಾರೆ ಎಂದು ಎಂದು ಪರಿಗಣಿಸಲಾಗುವುದಿಲ್ಲ.

ಅಂದರೆ ರನ್ ಓಡುವಾಗ ಬ್ಯಾಟರ್​ನ ಬ್ಯಾಟ್​ನ ಅಥವಾ ದೇಹದ ಭಾಗ ಕ್ರೀಸ್​ ಒಳಗೆ ಒಮ್ಮೆ ತಲುಪಿ ಆ ಬಳಿಕ ಬ್ಯಾಟ್ ಅಥವಾ ದೇಹವು ಗಾಳಿಯಲ್ಲಿದ್ದರೂ ಅಥವಾ ಕ್ರೀಸ್​ನಿಂದ ಹೊರಗೆ ಬಿದ್ದರೂ ಅವರನ್ನು ಕ್ರೀಸ್​ಗೆ ತಲುಪಿದ್ದಾರೆ ಎಂದು ಪರಿಗಣಿಸಲಾಗುತ್ತದೆ. ಆದರೆ ಮುನೀಬಾ ವಿಷಯದಲ್ಲಿ, ಅವರು ರನ್ ಓಡುತ್ತಿರಲಿಲ್ಲ. ಬದಲಾಗಿ ಸ್ಟ್ರೈಕ್​ನಲ್ಲಿ ನಿಂತು ಬ್ಯಾಟ್ ಒಳಕ್ಕೆ ಒಟ್ಟು ಮತ್ತೆ ಮೇಲೆಕ್ಕೆ ತೆಗೆದುಕೊಂಡಿದ್ದಾರೆ. ಅತ್ತ ಚೆಂಡು ಕೂಡ ಡೆಡ್ ಆಗಿರಲಿಲ್ಲ. ಇತ್ತ ಬ್ಯಾಟ್ ಕ್ರೀಸ್​ನಿಂದ ಮೇಲಿದ್ದ ಕಾರಣ ಅದನ್ನು ರನೌಟ್ ಎಂದು ಪರಿಗಣಿಸಿದ್ದಾರೆ. ಅದರಂತೆ ಮುನೀಬಾ ಅಲಿ ಕ್ರೀಸ್​ನಲ್ಲಿ ಬ್ಯಾಟ್ ಇಟ್ಟರೂ, ಆ ಮೇಲೆ ಮೈಮರೆತು ವಿಚಿತ್ರವಾಗಿ ರನೌಟ್ ಆಗಿದ್ದಾರೆ.

ಪಾಕಿಸ್ತಾನ ಪ್ರತಿಕ್ರಿಯೆ

ಇನ್ನು ಈ ವಿವಾದಾತ್ಮಕ ರನೌಟ್ ಕುರಿತು ಪಾಕಿಸ್ತಾನ ತಂಡ ಕೂಡ ಪ್ರತಿಕ್ರಿಯೆ ನೀಡಿದ್ದು, 'ಮುನೀಬಾ ಅವರ ರನ್ ಔಟ್ ವಿವಾದ ಈಗಾಗಲೇ ಇತ್ಯರ್ಥವಾಗಿದೆ ಎಂದು ನಾನು ಭಾವಿಸುತ್ತೇನೆ. ನಾನು ಈಗ ಅದರ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ. ಏನೇ ಆಯ್ತು, ಪರಿಸ್ಥಿತಿ ಏನೇ ಆಗಿರಲಿ, ಅದು ಈಗ ಬಗೆಹರಿದಿದೆ ಎಂದು ನಾನು ಭಾವಿಸುತ್ತೇನೆ' ಎಂದು ಸುದ್ದಿಗೋಷ್ಠಿಯಲ್ಲಿ ಪಾಕ್ ಆಟಗಾರ್ತಿ ಡಯಾನಾ ಬೇಗ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com