2nd Test, Day 1: ವಿಂಡೀಸ್ ವಿರುದ್ಧ ಸ್ಫೋಟಕ ಶತಕ; ಅಪರೂಪದ ದಾಖಲೆ; ಎಲೈಟ್ ಗ್ರೂಪ್ ಸೇರಿದ ಯಶಸ್ವಿ ಜೈಸ್ವಾಲ್!

ಭಾರತದ ಪರ ಮೊದಲ ಎಸೆತದಿಂದಲೂ ಉತ್ತಮ ಬ್ಯಾಟಿಂಗ್ ನಡೆಸಿದ ಜೈಸ್ವಾಲ್ ದಿನದಾಟದ ಅಂತ್ಯದ ಕೊನೆಯವರೆಗೂ ಅಜೇಯರಾಗಿ ಉಳಿದು ಶತಕ ಸಿಡಿಸಿದರು.
Yashasvi jaiswal
ಯಶಸ್ವಿ ಜೈಸ್ವಾಲ್ ಶತಕ
Updated on

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿರುವ ಭಾರತ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅಪರೂಪದ ದಾಖಲೆ ಬರೆದಿದ್ದಾರೆ.

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ನಡೆಸಿತು. ಭಾರತದ ಪರ ಮೊದಲ ಎಸೆತದಿಂದಲೂ ಉತ್ತಮ ಬ್ಯಾಟಿಂಗ್ ನಡೆಸಿದ ಜೈಸ್ವಾಲ್ ದಿನದಾಟದ ಅಂತ್ಯದ ಕೊನೆಯವರೆಗೂ ಅಜೇಯರಾಗಿ ಉಳಿದು ಶತಕ ಸಿಡಿಸಿದರು.

ಭಾರತದ ಪರ ದ್ವಿಶತಕದತ್ತ ದಾಪುಗಾಲಿಟ್ಟಿರುವ ಆರಂಭಿಕ ಯಶಸ್ವಿ ಜೈಸ್ವಾಲ್ ಅಜೇಯ 173 ರನ್ ಬಾರಿಸಿದ್ದಾರೆ. ಭೋಜನ ವಿರಾಮದ ಬಳಿಕ ಯಶಸ್ವಿ ಜೈಸ್ವಾಲ್ ತಮ್ಮ 12ನೇ ಟೆಸ್ಟ್ ಅರ್ಧಶತಕವನ್ನು ಪೂರೈಸಿದ್ದರು. ಬಳಿಕ ಅದನ್ನು ಶತಕವಾಗಿ ಮಾರ್ಪಡಿಸಿದರು. ಆ ಮೂಲಕ ಜೈಸ್ವಾಲ್ ತಮ್ಮ ಏಳನೇ ಶತಕವನ್ನು ಬಾರಿಸುವ ಮೂಲಕ ದಾಖಲೆ ನಿರ್ಮಿಸಿದರು.

ಇನ್ನು ಜೈಸ್ವಾಲ್ 23 ನೇ ವಯಸ್ಸಿನಲ್ಲೇ, ಪ್ರಪಂಚದಾದ್ಯಂತದ ಎದುರಾಳಿಗಳ ವಿರುದ್ಧ, ವಿವಿಧ ಪರಿಸ್ಥಿತಿಗಳಲ್ಲಿ ಶತಕಗಳನ್ನು ಗಳಿಸುತ್ತಿದ್ದಾರೆ. ಶುಕ್ರವಾರ ಜೈಸ್ವಾಲ್ 7 ಟೆಸ್ಟ್ ಶತಕಗಳನ್ನು ತಲುಪಿದ ಎರಡನೇ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆ ಮೂಲಕ ವಿರಾಟ್ ಕೊಹ್ಲಿ ಮತ್ತು ಸುನಿಲ್ ಗವಾಸ್ಕರ್ ಅವರಂತಹ ಶ್ರೇಷ್ಠ ಆಟಗಾರರನ್ನು ಸಹ ಹಿಂದಿಕ್ಕಿದರು.

Yashasvi jaiswal
2ನೇ ಟೆಸ್ಟ್: ಯಶಸ್ವಿ ಜೈಸ್ವಾಲ್ ಭರ್ಜರಿ ಬ್ಯಾಟಿಂಗ್; ಮೊದಲ ದಿನದಾಟ ಅಂತ್ಯಕ್ಕೆ ಭಾರತ 318/2

ಎಲೈಟ್ ಗ್ರೂಪ್ ಸೇರ್ಪಡೆ

ಈ ಶತಕದೊಂದಿಗೆ ಜೈಸ್ವಾಲ್ 7 ಶತಕಗಳನ್ನು ಸಿಡಿಸಿದ 3ನೇ ಅತ್ಯಂತ ಕಿರಿಯ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ಮೂವರು ಆಟಗಾರರು ಮಾತ್ರ 24 ವರ್ಷ ತುಂಬುವ ಮೊದಲು ಹೆಚ್ಚು ಟೆಸ್ಟ್ ಶತಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪೈಕಿ ಸರ್ ಡಾನ್ ಬ್ರಾಡ್ಮನ್ (12), ಭಾರತ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ (11) ಮತ್ತು ಸರ್ ಗಾರ್ಫೀಲ್ಡ್ ಸೋಬರ್ಸ್ (9) ಈ ಪಟ್ಟಿಯಲ್ಲಿ ಇದ್ದಾರೆ. ಭಾರತೀಯರಲ್ಲಿ, 24 ವರ್ಷ ತುಂಬುವ ಮೊದಲು 7 ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಗಳಿಸಿದ ಏಕೈಕ ಆಟಗಾರರೆಂದರೆ ಅದು ಸಚಿನ್ ತೆಂಡೂಲ್ಕರ್.

ಅಲ್ಲದೆ, ಜೈಸ್ವಾಲ್ ಈಗ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್,ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಗ್ರೇಮ್ ಸ್ಮಿತ್, ಇಂಗ್ಲೆಂಡ್ ನ ಅಲಸ್ಟೈರ್ ಕುಕ್ ಮತ್ತು ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ ಸೇರಿದಂತೆ 24 ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನದಲ್ಲಿ ಏಳು ಶತಕಗಳನ್ನು ಗಳಿಸಿದ ಇತರ ಆಧುನಿಕ ಕಾಲದ ಶ್ರೇಷ್ಠರ ಸಾಲಿನಲ್ಲಿ ನಿಂತಿದ್ದಾರೆ.

ಟೆಸ್ಟ್ ಪಂದ್ಯದ ಮೊದಲ ದಿನವೇ ಗರಿಷ್ಛ ವೈಯುಕ್ತಿಕ ರನ್

ಅಂತೆಯೇ ಇಂದು 173 ರನ್ ಗಳಿಸಿದ ಜೈಸ್ವಾಲ್ ಟೆಸ್ಟ್ ಪಂದ್ಯ ಮೊದಲ ದಿನವೇ ಗರಿಷ್ಠ ರನ್ ಕಲೆಹಾಕಿದ ಭಾರತದ ಆಟಗಾರರ ಪೈಕಿ 4ನೇ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ವಾಸಿಂ ಜಾಫರ್ ಆಗ್ರ ಸ್ಥಾನಿಯಾಗಿದ್ದು, 2007ರಲ್ಲಿ ಕೋಲ್ಕತಾದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಜಾಫರ್ 192 ರನ್ ಕಲೆಹಾಕಿದ್ದರು. 2ನೇ ಸ್ಥಾನದಲ್ಲಿ ಶಿಖರ್ ಧವನ್ ಇದ್ದು, 2017ರಲ್ಲಿ ಗಾಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅವರು 190 ರನ್ ಕಲೆಹಾಕಿದ್ದರು.

3 ಮತ್ತು 4ನೇ ಸ್ಥಾನದಲ್ಲಿ ಯಶಸ್ವಿ ಜೈಸ್ವಾಲ್ ಇದ್ದು, ಜೈಸ್ವಾಲ್ ಈ ಹಿಂದೆ 2024ರಲ್ಲಿ ಇಂಗ್ಲೆಂಡ್ ವಿರುದ್ಧ ವಿಶಾಖಪಟ್ಟಣಂ ನಲ್ಲಿ 179 ರನ್ ಕಲೆಹಾಕಿದ್ದರು. ಇಂದು 173 ರನ್ ಕಲೆಹಾಕಿ ಮತ್ತೆ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಉಳಿದಂತೆ ಟೀಂ ಇಂಡಿಯಾದ ಹಾಲಿ ಕೋಚ್ ಗೌತಮ್ ಗಂಭೀರ್ ನಂತರದ ಸ್ಥಾನದಲ್ಲಿದ್ದು, 2009ರಲ್ಲಿ ಗಂಭೀರ್ ಶ್ರೀಲಂಕಾ ವಿರುದ್ದ ಮೊದಲ ದಿನವೇ 167 ರನ್ ಕಲೆಹಾಕಿದ್ದರು.

Most runs on day one by an Indian opener

  • 192 Wasim Jaffer vs Pak Kolkata 2007

  • 190 Shikhar Dhawan vs SL Galle 2017

  • 179 Yashasvi Jaiswal vs Eng Vizag 2024

  • 173 Yashasvi Jaiswal vs WI Delhi 2025 *

  • 167 Gautam Gambhir vs SL Kanpur 2009

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com