

ಇಸ್ಲಾಮಾಬಾದ್: ಮಹಿಳಾ ವಿಶ್ವಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಒಂದೂ ಗೆಲುವು ಕಾಣದೇ ಟೂರ್ನಿಯಿಂದಲೇ ಹೊರಬಿದ್ದಿರುವ ಪಾಕಿಸ್ತಾನ ತಂಡ ಇದೀಗ ಕೈಕೈ ಹಿಸುಕಿಕೊಳ್ಳುತ್ತಿದೆ.
ಹೌದು.. ಈ ಹಿಂದೆ ಭಾರತದ ವಿರುದ್ಧ 6-0 ಸನ್ಹೆ ಮಾಡಿ ವ್ಯಂಗ್ಯ ಮಾಡುತ್ತಿದ್ದ ಪಾಕಿಸ್ತಾನ ಕ್ರಿಕೆಟಿಗರು ಇದೀಗ ಅದೇ 7-0 ಅಂತರದಲ್ಲಿ ಮಹಿಳಾ ಕ್ರಿಕೆಟ್ ಸೋಲು ಕಂಡು ಟೂರ್ನಿಯಿಂದಲೇ ಹೊರಬಿದ್ದಿದೆ.
ಪಾಕಿಸ್ತಾನ ಹಾಲಿ ಟೂರ್ನಿಯಲ್ಲಿ 7 ಪಂದ್ಯಗಳನ್ನಾಡಿದ್ದು ಈ ಪೈಕಿ 3 ಪಂದ್ಯಗಳು ಮಳೆಗಾಹುತಿಯಾಗಿದೆ. ಉಳಿದ 4 ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಒಂದೂ ಗೆಲುವು ಕಾಣದೇ ಟೂರ್ನಿಯಿಂದ ಹೊರಬಿದ್ದಿರುವುದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದ್ದು, ಪ್ರಮುಖವಾಗಿ ಭಾರತ ತಂಡ ಸೆಮೀಸ್ ಗೇರಿದ ಬಳಿಕ ಪಾಕಿಸ್ತಾನ ಮಹಿಳಾ ತಂಡದ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಶುಕ್ರವಾರ ರಾತ್ರಿ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಕೇವಲ 4.2 ಓವರ್‌ಗಳ ನಂತರ ಮಳೆಯಿಂದಾಗಿ ರದ್ದಾದ ಕಾರಣ, ಪಾಕಿಸ್ತಾನ ನಾಯಕಿ ಫಾತಿಮಾ ಸನಾ ಐಸಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂತೆಯೇ ಭವಿಷ್ಯದ ಪಂದ್ಯಾವಳಿಗಳಲ್ಲಿ ಉತ್ತಮ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು.
ನಿರಂತರ ಮಳೆಯಿಂದಾಗಿ ಎರಡೂ ತಂಡಗಳು ತಲಾ ಒಂದು ಪಾಯಿಂಟ್ ಹಂಚಿಕೊಳ್ಳಬೇಕಾಯಿತು. ಈ ಪಂದ್ಯಾವಳಿಯಲ್ಲಿ ಕೊಲಂಬೊದಲ್ಲಿ ಮಳೆಯಿಂದಾಗಿ ರದ್ದಾದ ಐದನೇ ಪಂದ್ಯ ಇದಾಗಿದೆ.
"ನಮಗೆ ಅನುಕೂಲವಾಗದ ಏಕೈಕ ವಿಷಯವೆಂದರೆ ಹವಾಮಾನ. ವಿಶ್ವಕಪ್‌ನಲ್ಲಿ ಆಡಲು ನಾವು ನಾಲ್ಕು ವರ್ಷಗಳ ಕಾಲ ಕಾಯುತ್ತಿದ್ದೆವು. ಐಸಿಸಿ ವಿಶ್ವಕಪ್‌ಗಾಗಿ ಮೂರು ಉತ್ತಮ ಸ್ಥಳಗಳನ್ನು ವ್ಯವಸ್ಥೆ ಮಾಡಬೇಕು ಎಂದು ನಾನು ಭಾವಿಸುತ್ತೇನೆ" ಎಂದು ಫಾತಿಮಾ ಸನಾ ಹೇಳಿದರು.
"ನಾವು ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ತುಂಬಾ ಉತ್ತಮರಾಗಿದ್ದೇವೆ ಎಂದು ನಾನು ಭಾವಿಸುತ್ತೇನೆ, ಆದರೆ ನಾವು ಬ್ಯಾಟಿಂಗ್ ವಿಭಾಗದಲ್ಲಿ ಕೊರತೆಯನ್ನು ಹೊಂದಿದ್ದೇವೆ. ನಾವು ಒಂದೆರಡು ಪಂದ್ಯಗಳಲ್ಲಿ ಉತ್ತಮರಾಗಿದ್ದೇವೆ.
ನಾವು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ನಿಕಟ ಹೋರಾಟ ನೀಡಿದ್ದೇವೆ, ಆದರೆ ದುರದೃಷ್ಟವಶಾತ್, ನಾವು ಮುಖ್ಯ ರೇಖೆಯನ್ನು ದಾಟಲು ಸಾಧ್ಯವಾಗಲಿಲ್ಲ ಎಂದು ಒಂದೂ ಗೆಲುವು ಸಾಧ್ಯವಾಗದ್ದಕ್ಕೆ ಅವರು ಅಸಮಾಧಾನ ಹೊರಹಾಕಿದ್ದಾರೆ.
"ತಂಡದ ಅತ್ಯಂತ ಕಿರಿಯ ನಾಯಕಿಯಾಗಿ, ನಾನು ವಿಶ್ವಕಪ್‌ನಿಂದ ಬಹಳಷ್ಟು ಕಲಿತಿದ್ದೇನೆ ಎಂದು ನಾನು ಭಾವಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ ನಾವು ಹೆಚ್ಚು ಕ್ರಿಕೆಟ್ ಆಡಿಲ್ಲ. ನಾವು ಇನ್ನೂ ಹೆಚ್ಚಿನ ಕ್ರಿಕೆಟ್ ಆಡಬೇಕಾಗಿದೆ. ಮುಂದಿನ ವರ್ಷ ಟಿ20 ವಿಶ್ವಕಪ್ ಬರಲಿದೆ. ನಾವು ಅದಕ್ಕಾಗಿ ಸಿದ್ಧರಾಗಿರಬೇಕು. ಒತ್ತಡ ಯಾವಾಗಲೂ ಇತ್ತು, ಆದರೆ ನಾನು ಯಾವಾಗಲೂ ಕೇನ್ ವಿಲಿಯಮ್ಸನ್ ಅವರ ನಾಯಕತ್ನ ನಿಭಾವಣೆಯನ್ನು ನೋಡುತ್ತಿದ್ದೆ.
ಅವರು ವಿಶ್ವಕಪ್ ಅನ್ನು ಬಹಳ ಹತ್ತಿರದಿಂದ ಕಳೆದುಕೊಂಡರು. ಆದರೆ ಅವರು ತಮ್ಮ ಮುಖದಲ್ಲಿ ನಗುವನ್ನು ಇಟ್ಟುಕೊಳ್ಳುವಲ್ಲಿ ಯಶಸ್ವಿಯಾದರು. ಅದೇ ನನಗೆ ಸ್ಫೂರ್ತಿ. ನಾನು ಶಾಂತವಾಗಿರಲು ಪ್ರಯತ್ನಿಸುತ್ತಿದ್ದೇನೆ. ನೀವು ಸೋತ ತಂಡವನ್ನು ಮುನ್ನಡೆಸುವಾಗ, ನಿಮ್ಮ ತಂಡದ ಬಗ್ಗೆ ನೀವು ಆ ನಂಬಿಕೆಯನ್ನು ಹೊಂದಿರಬೇಕು. ಆಶಾದಾಯಕವಾಗಿ, ನಾವು ನಮ್ಮ ಮುಂಬರುವ ಪಂದ್ಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಫಾತಿಮಾ ಸನಾ ಹೇಳಿದರು.
Advertisement