

ನವದೆಹಲಿ: ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಆಡಲು ಭಾರತಕ್ಕೆ ಬಂದಿರುವ ಆಸ್ಟ್ರೇಲಿಯಾ ಮಹಿಳಾ ಆಟಗಾರ್ತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದೆ.
ಈ ಕುರಿತು ಇದೇ ಮೊದಲ ಬಾರಿಗೆ ಮಾತನಾಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿCricket ದೇವಜಿತ್ ಸೈಕಿಯಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಸೈಕಿಯಾ, 'ಇಂದೋರ್‌ನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಸ್ಪರ್ಧಿಸುತ್ತಿರುವ ಇಬ್ಬರು ಆಸ್ಟ್ರೇಲಿಯಾದ ಆಟಗಾರ್ತಿಯರ ಮೇಲೆ "ಅನುಚಿತ ವರ್ತನೆ" ಕಂಡುಬಂದಿದೆ. ಇದು "ದುರದೃಷ್ಟಕರ" ಎಂದು ಹೇಳಿದ್ದಾರೆ.
ಇಡೀ ಘಟನೆಯ ಬಗ್ಗೆ ಸೈಕಿಯಾ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯ ಪೊಲೀಸರ ತ್ವರಿತ ಕ್ರಮಕ್ಕಾಗಿ ಅವರನ್ನು ಶ್ಲಾಘಿಸಿದ್ದಾರೆ.
ಸುದ್ದಿಸಂಸ್ಥೆ ANI ಜೊತೆ ಮಾತನಾಡಿದ ಸೈಕಿಯಾ, 'ಇದು "ತುಂಬಾ ದುರದೃಷ್ಟಕರ ಘಟನೆ. ಈ ರೀತಿಯ ಘಟನೆಯು ಅಪಖ್ಯಾತಿಯನ್ನು ತರುತ್ತದೆ. ಅಪರಾಧಿಯನ್ನು ಬಂಧಿಸಲು ತ್ವರಿತ ಕ್ರಮ ಕೈಗೊಂಡಿದ್ದಕ್ಕಾಗಿ ರಾಜ್ಯ ಪೊಲೀಸರನ್ನು ನಾನು ಪ್ರಶಂಸಿಸುತ್ತೇನೆ. ಅಪರಾಧಿಯನ್ನು ಶಿಕ್ಷಿಸಲು ಕಾನೂನು ತನ್ನ ಮಾರ್ಗವನ್ನು ತೆಗೆದುಕೊಳ್ಳಲಿ" ಎಂದು ಹೇಳಿದರು.
ಇದಕ್ಕೂ ಮೊದಲು, ANI ಜೊತೆ ಮಾತನಾಡಿದ ಇಂದೋರ್‌ನ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಹೆಚ್ಚುವರಿ ಡಿಸಿಪಿ, ಅಪರಾಧ ಶಾಖೆ) ರಾಜೇಶ್ ದಂಡೋಟಿಯನ್ ಅವರು ಗುರುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಆಸ್ಟ್ರೇಲಿಯಾದ ಇಬ್ಬರು ಮಹಿಳಾ ಕ್ರಿಕೆಟಿಗರು ತಮ್ಮ ತಂಡದ ಹೋಟೆಲ್‌ನಿಂದ ಹೊರಟು ಕೆಫೆಗೆ ತೆರಳಿದ್ದಾರೆ. ಈ ಹಂತದಲ್ಲಿಯೇ ಆಟಗಾರ್ತಿಯರಿಗೆ ಆಜಾದ್ ನಗರ ಮೂಲದ ಆರೋಪಿ ಅಕೀಲ್ ಖಾನ್ "ಅನುಚಿತ ವರ್ತನೆ"ತೋರಿದ್ದಾನೆ ಎಂದು ತಿಳಿದುಬಂದಿದೆ.
ಅಂತೆಯೇ "ಆಸ್ಟ್ರೇಲಿಯನ್ ಮಹಿಳಾ ಕ್ರಿಕೆಟ್ ತಂಡದ ಭದ್ರತಾ ಅಧಿಕಾರಿಗಳು ತಂಡದ ಇಬ್ಬರು ಸದಸ್ಯರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ತೀವ್ರ ಕಾರ್ಯತಂತ್ರದ ಕಾರ್ಯಾಚರಣೆಯ ನಂತರ ಆರೋಪಿಯನ್ನು ಗುರುತಿಸಿ ಬಂಧಿಸಲಾಗಿದೆ. ಆರೋಪಿ ಅಕ್ವೀಲ್ ಖಾನ್ ಆಜಾದ್‌ನಗರ ನಿವಾಸಿ.
ಆತನ ಮೇಲೆ ಬಿಎನ್‌ಎಸ್‌ನ ಸೆಕ್ಷನ್ 74 ಮತ್ತು 78 ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಅಕ್ಟೋಬರ್ 23 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಮಹಿಳಾ ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ಸದಸ್ಯರು ತಮ್ಮ ಹೋಟೆಲ್‌ನಿಂದ ಕೆಫೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಭದ್ರತಾ ಪ್ರೋಟೋಕಾಲ್‌ಗಳಲ್ಲಿ ಯಾವುದೇ ನ್ಯೂನತೆಗಳಿವೆಯೇ ಎಂದು ನಾವು ಪರಿಶೀಲಿಸುತ್ತಿದ್ದೇವೆ" ಎಂದು ಅವರು ಹೇಳಿದರು.
ಆಸ್ಟ್ರೇಲಿಯನ್ ತಂಡದ ನಿರ್ವಹಣಾ ಭದ್ರತಾ ಅಧಿಕಾರಿಗಳು ಇಬ್ಬರು ಆಟಗಾರ್ತಿಯರ "ಅನುಚಿತ ವರ್ತನೆ"ಯ ಬಗ್ಗೆ ದೂರು ನೀಡಿದರು ಮತ್ತು ನಂತರ ಎಫ್‌ಐಆರ್ ದಾಖಲಿಸಲಾಯಿತು. ಘಟನೆಗೆ ಕಾರಣವಾಗಿರಬಹುದಾದ ಭದ್ರತಾ ಪ್ರೋಟೋಕಾಲ್ ಲೋಪದೋಷವನ್ನು ಇಂದೋರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟನೆ
ಇನ್ನು ದುರ್ವರ್ತನೆ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಸ್ಪಷ್ಟ ಪಡಿಸಿದ್ದು, 'ಇಂದೋರ್‌ನ ಕೆಫೆಯೊಂದಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಆಸ್ಟ್ರೇಲಿಯಾ ಮಹಿಳಾ ತಂಡದ ಇಬ್ಬರು ಸದಸ್ಯರನ್ನು ಮೋಟಾರ್‌ಸೈಕ್ಲಿಸ್ಟ್ ಒಬ್ಬರು ಸಮೀಪಿಸಿ ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ದೃಢಪಡಿಸಿದೆ. ತಂಡದ ಭದ್ರತಾ ಸಿಬ್ಬಂದಿ ಈ ವಿಷಯವನ್ನು ನಿರ್ವಹಿಸುತ್ತಿರುವ ಪೊಲೀಸರಿಗೆ ವರದಿ ಮಾಡಿದ್ದಾರೆ' ಎಂದು ಹೇಳಿದೆ.
Advertisement