

ಮುಂಬೈ: ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿ 2025ರ ಭಾರತ-ಬಾಂಗ್ಲಾದೇಶ ನಡುವಿನ ಅಂತಿಮ ಲೀಗ್ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು, ಸೆಮೀಸ್ ನಲ್ಲಿ ಭಾರತ ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಇಂದು ನಡೆದ ಇಂದಿನ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ತಂಡ 27 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿತ್ತು. ಬಳಿಕ ಇನ್ನಿಂಗ್ಸ್ ಆರಂಭಿಸಿದ ಭಾರತ 8.4 ಓವರ್ ನಲ್ಲಿ ವಿಕೆಟ್ ನಷ್ಟವಿಲ್ಲದೇ 57 ರನ್ ಗಳಿಸಿದ್ದಾಗ ಮತ್ತೆ ಮಳೆ ಆರಂಭವಾಗಿ ಪಂದ್ಯ ಸ್ಥಗಿತವಾಯಿತು.
ಪಂದ್ಯಕ್ಕೆ ಅಡ್ಡಿಪಡಿಸಿದ ಮಳೆ
ಮಳೆಯಿಂದಾಗಿ ಪಂದ್ಯವನ್ನು ತಡವಾಗಿ ಆರಂಭಿಸಲಾಯಿತು. ಇದರಿಂದಾಗಿ ಟಾಸ್ ಕೂಡ ವಿಳಂಬವಾಯಿತು. ಮೊದಲು ಓವರ್‌ಗಳನ್ನು ಕಡಿಮೆ ಮಾಡಿ ಪಂದ್ಯವನ್ನು ಪ್ರತಿ ಇನ್ನಿಂಗ್ಸ್‌ಗೆ 43 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ನಂತರ ಮತ್ತೆ ಮಳೆ ಬಂದು ಪಂದ್ಯವನ್ನು ಸುಮಾರು ಒಂದು ಗಂಟೆ ನಿಲ್ಲಿಸಲಾಯಿತು.
ನಂತರ ಅಂಪೈರ್‌ಗಳು ಪ್ರತಿ ಇನ್ನಿಂಗ್ಸ್‌ಗೆ 27 ಓವರ್‌ಗಳನ್ನು ಮೀಸಲಿರಿಸಿದರು. ಈ ಪಂದ್ಯದಲ್ಲಿ, ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 27 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 119 ರನ್ ಗಳಿಸಿತು.
ಭಾರತ ಶುಭಾರಂಭ
ಈ ಸಾಮಾನ್ಯ ಗುರಿಯನ್ನು ಬೆನ್ನು ಹತ್ತಿದ ಭಾರತಕ್ಕೆ ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂದಾನ(34), ಅಮನ್ ಜೋತ್ ಕೌರ್ (15) ಉತ್ತಮ ಆರಂಭ ಒದಗಿಸಿದರು. ಈ ವೇಳೆ ಮಳೆ ಬಂದಾಗ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೆ 57 ರನ್ ಗಳಿಸಿತ್ತು.
ಸೆಮೀಸ್ ನಲ್ಲಿ ಇಂಡೋ-ಆಸಿಸ್ ಮುಖಾಮುಖಿ!
ಇಂದು ಮಳೆಯಿಂದ ಪಂದ್ಯ ರದ್ದಾದರೂ, ಭಾರತ ತಂಡ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಅಕ್ಟೋಬರ್ 30ರಂದು ಭಾರತ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
Advertisement