

ಕ್ಯಾನ್ ಬೆರಾ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯ ಫಲಿತಾಂಶವಿಲ್ಲದೇ ರದ್ದಾಗಿದೆ.
ಹೌದು.. ಆಸ್ಟ್ರೇಲಿಯಾದ ಕ್ಯಾನ್ ಬೆರಾದ ಮನುಕಾ ಓವಲ್ ಕ್ರೀಡಾಂಗಣದಲ್ಲಿ ಇಂದು ನಡೆದ ಮೊದಲ ಟಿ20 ಪಂದ್ಯ ಯಾವುದೇ ಫಲಿತಾಂಶವಿಲ್ಲದೇ ರದ್ದಾಗಿದೆ. ಪಂದ್ಯಕ್ಕೆ ಮಳೆ ಅಡ್ಡಪಡಿಸಿದ್ದರಿಂದ ಅಂಪೈರ್ ಗಳು ಪಂದ್ಯ ರದ್ದುಗೊಳಿಸಲು ನಿರ್ಧರಿಸಿದರು ಎಂದು ತಿಳಿದುಬಂದಿದೆ.
ಇನ್ನು ಇಂದು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ 9.4 ಓವರ್ ನಲ್ಲಿ 1 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿತ್ತು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 14 ಎಸೆತಗಳಲ್ಲಿ 4 ಬೌಂಡರಿ ಸಹಿತ 19 ರನ್ ಗಳಿಸಿ ನಾಥನ್ ಎಲ್ಲಿಸ್ ಬೌಲಿಂಗ್ ನಲ್ಲಿ ಔಟ್ ಆದರು.
ಬಳಿಕ ಶುಭ್ ಮನ್ ಗಿಲ್ ಜೊತೆಗೂಡಿದ ನಾಯಕ ಸೂರ್ಯ ಕುಮಾರ್ ಯಾದವ್ 62 ರನ್ ಗಳ ಜೊತೆಯಾಟ ಆಡಿದರು.
ಈ ಪೈಕಿ ಗಿಲ್ 20 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 37 ರನ್ ಗಳಿಸಿದರೆ, ಸೂರ್ಯ ಕುಮಾರ್ ಯಾದವ್ 24 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿ ಸಹಿತ 39 ರನ್ ಕಲೆಹಾಕಿದ್ದರು. ಭಾರತ ತನ್ನ 10ನೇ ಓವರ್ ಆಡುತ್ತಿದ್ದಾಗ ಜೋರು ಮಳೆ ಬಂದು ಪಂದ್ಯ ಸ್ಥಗಿತವಾಗುವಂತೆ ಮಾಡಿತು.
ಅಂಪೈರ್ ಗಳು ಪದೇ ಪದೇ ಮೈದಾನಕ್ಕೆ ಬಂದು ಪರಿಶೀಲಿಸಿದರು. ಮಳೆ ನಿಲ್ಲದ ಕಾರಣ ಅಂತಿಮವಾಗಿ ಪಂದ್ಯವನ್ನು ಫಲಿತಾಂಶ ರಹಿತವಾಗಿ ರದ್ದುಗೊಳಿಸಿದರು. ಈ ಪಂದ್ಯ ರದ್ದಾಗಿದ್ದರಿಂದ 5 ಪಂದ್ಯಗಳ ಟಿ20 ಸರಣಿಯಲ್ಲಿ ಯಾವುದೇ ತಂಡ ಮುನ್ನಡೆ ಸಾಧಿಸಿಲ್ಲ. ಇನ್ನೂ ಸರಣಿಯಲ್ಲಿ 4 ಪಂದ್ಯಗಳು ಬಾಕಿ ಇವೆ.
Advertisement