
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಹೆಸರುಗಳಲ್ಲಿ ಒಬ್ಬರಾದ ಭಾರತದ ಅನುಭವಿ ಲೆಗ್-ಸ್ಪಿನ್ನರ್ ಅಮಿತ್ ಮಿಶ್ರಾ ಅವರು ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಅಂತರರಾಷ್ಟ್ರೀಯ, ದೇಶೀಯ ಮತ್ತು ಫ್ರಾಂಚೈಸಿ ಕ್ರಿಕೆಟ್ ಆಡಿರುವ ತಮ್ಮ 25 ವರ್ಷಗಳ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ.
42 ವರ್ಷದ ಅವರು ಭಾರತ ಪರ 22 ಟೆಸ್ಟ್, 36 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಿದ್ದು, 156 ಅಂತರರಾಷ್ಟ್ರೀಯ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ತಮ್ಮ ಚಾತುರ್ಯ ಮತ್ತು ವಿಭಿನ್ನತೆಗೆ ಹೆಸರುವಾಸಿಯಾದ ಮಿಶ್ರಾ ಅವರು 2013ರಲ್ಲಿ ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 18 ವಿಕೆಟ್‌ಗಳನ್ನು ಪಡೆಯುವ ಮೂಲಕ ಜಾವಗಲ್ ಶ್ರೀನಾಥ್ ಅವರ ದಾಖಲೆಯನ್ನು ಸರಿಗಟ್ಟಿದ್ದರು. 2014ರ ಟಿ20 ವಿಶ್ವಕಪ್‌ನಲ್ಲಿಯೂ ಸಹ ಅವರು ಪ್ರಮುಖ ಪಾತ್ರ ವಹಿಸಿ ಭಾರತ ಫೈನಲ್ ತಲುಪಲು ಸಹಾಯ ಮಾಡಿದರು.
ಐಪಿಎಲ್‌ನಲ್ಲಿ ಮಿಶ್ರಾ ಅವರು ಆಡಿರುವ 162 ಪಂದ್ಯಗಳಲ್ಲಿ, 7.37ರ ಎಕಾನಮಿ ದರದಲ್ಲಿ 174 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಟೂರ್ನಮೆಂಟ್ ಇತಿಹಾಸದಲ್ಲಿ ಏಳನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. 2008 ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್, 2011 ರಲ್ಲಿ ಪಂಜಾಬ್ ಮತ್ತು 2013 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಮೂರು ಐಪಿಎಲ್ ಹ್ಯಾಟ್ರಿಕ್ ವಿಕೆಟ್ ಪಡೆದ ಏಕೈಕ ಬೌಲರ್ ಆಗಿದ್ದಾರೆ. ಈ ದಾಖಲೆ ಇನ್ನೂ ಅವರ ಹೆಸರಿಗೆ ಇದ್ದು, ಐಪಿಎಲ್ ಇತಿಹಾಸದಲ್ಲಿ ಅವರ ವಿಶಿಷ್ಟ ಸಾಧನೆಯನ್ನು ಎತ್ತಿ ತೋರಿಸುತ್ತದೆ.
'ನನ್ನ ಕ್ರಿಕೆಟ್ ಜೀವನದ ಈ 25 ವರ್ಷಗಳು ಸ್ಮರಣೀಯ. ಇಷ್ಟು ದಿನ ನನ್ನೊಂದಿಗಿದ್ದ ಬಿಸಿಸಿಐ, ಆಡಳಿತ, ಹರಿಯಾಣ ಕ್ರಿಕೆಟ್ ಸಂಸ್ಥೆ, ಸಹಾಯಕ ಸಿಬ್ಬಂದಿ, ನನ್ನ ಸಹೋದ್ಯೋಗಿಗಳು ಮತ್ತು ನನ್ನ ಕುಟುಂಬ ಸದಸ್ಯರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ' ಎಂದು ಮಿಶ್ರಾ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
'ನಾನು ಆಡಿದಾಗಲೆಲ್ಲ ಮತ್ತು ಎಲ್ಲೇ ಆಡಿದರೂ ನನ್ನ ಪ್ರಯಾಣವನ್ನು ಸ್ಮರಣೀಯವಾಗಿಸಿದ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಕ್ರಿಕೆಟ್ ನನಗೆ ಅಸಂಖ್ಯಾತ ನೆನಪುಗಳು ಮತ್ತು ಅಮೂಲ್ಯವಾದ ಕಲಿಕೆಗಳನ್ನು ನೀಡಿದೆ ಮತ್ತು ಮೈದಾನದಲ್ಲಿನ ಪ್ರತಿ ಕ್ಷಣವೂ ನಾನು ಜೀವನಪರ್ಯಂತ ಅಮೂಲ್ಯವಾಗಿ ನೆನಪಿಸಿಕೊಳ್ಳುವ ಸ್ಮರಣೆಯಾಗಿದೆ' ಎಂದಿದ್ದಾರೆ.
Advertisement