
ಶ್ರೇಯಸ್ ಅಯ್ಯರ್ ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಿಂದ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವರೆಗಿನ ತಮ್ಮ ಪ್ರಯಾಣದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಜಿಕ್ಯೂ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಅಯ್ಯರ್, ಪಂಜಾಬ್ ತಂಡದಲ್ಲಿ ಈಗ ಸಿಗುತ್ತಿರುವ 'ಗೌರವ' ಮತ್ತು ಒಳಗೊಳ್ಳುವಿಕೆ ಕೆಕೆಆರ್‌ನಲ್ಲಿದ್ದಾಗ ಕಾಣೆಯಾಗಿತ್ತು ಎಂದು ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರಲ್ಲಿ ಟ್ರೋಫಿಯನ್ನು ಗೆದ್ದಿದ್ದರೂ ಕೂಡ, ಗೌತಮ್ ಗಂಭೀರ್ (ಆ ಸಮಯದಲ್ಲಿ ಕೆಕೆಆರ್‌ನ ಮೆಂಟರ್) ಮತ್ತು ಅಯ್ಯರ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ವರದಿಗಳು ಬಂದಿದ್ದವು.
'ನಾಯಕ ಮತ್ತು ಆಟಗಾರನಾಗಿ ನಾನು ಬಹಳಷ್ಟು ನೀಡುತ್ತೇನೆ. ನನಗೆ ಗೌರವ ಸಿಕ್ಕರೆ, ಏನು ಬೇಕಾದರೂ ಸಾಧಿಸಬಹುದು. ಪಂಜಾಬ್ ತಂಡದಲ್ಲಿ ನಡೆದದ್ದು ಇದೇ. ಅವರು ನನಗೆ ಬೇಕಾದ ಎಲ್ಲ ಬೆಂಬಲವನ್ನು ನೀಡಿದರು, ಅದು ತರಬೇತುದಾರರು, ಮ್ಯಾನೇಜ್ಮೆಂಟ್ ಅಥವಾ ಆಟಗಾರರು ಆಗಿರಲಿ. ನಾನು ಮ್ಯಾನೇಜ್ಮೆಂಟ್ ಮತ್ತು ತರಬೇತುದಾರರೊಂದಿಗೆ ಪ್ರತಿ ಸಭೆಯಲ್ಲೂ ಇದ್ದೆ, ಕಾರ್ಯತಂತ್ರದ ಕೊಡುಗೆ ನೀಡುತ್ತಿದ್ದೆ. ಇದು ನನಗೆ ತುಂಬಾ ಇಷ್ಟವಾದ ವಿಷಯ' ಎಂದು ಜಿಕ್ಯೂ ಇಂಡಿಯಾಗೆ ತಿಳಿಸಿದರು.
ಇದು ಪಂಜಾಬ್ ಕಿಂಗ್ಸ್‌ನಲ್ಲಿರುವ ಸದ್ಯದ ವಾತಾವರಣ ಮತ್ತು ಕೆಕೆಆರ್‌ನಲ್ಲಿ ಅವರು ಅನುಭವಿಸಿದ ವಾತಾವರಣ ಸಂಪೂರ್ಣ ಭಿನ್ನವಾಗಿತ್ತು ಎಂಬುದನ್ನು ಸೂಚಿಸುತ್ತದೆ. 2024ನೇ ಆವೃತ್ತಿಯಲ್ಲಿ ಐಪಿಎಲ್ ಪ್ರಶಸ್ತಿಗೆ ತಂಡವನ್ನು ಮುನ್ನಡೆಸಿದರೂ ಕೂಡ ತಾನು ಎಂದಿಗೂ ಸಂಪೂರ್ಣವಾಗಿ ತಂಡದ ಆಂತರಿಕ ವಲಯದ ಭಾಗವೆಂದು ಭಾವಿಸಿರಲಿಲ್ಲ ಎಂದು ಅಯ್ಯರ್ ತಿಳಿಸಿದ್ದಾರೆ.
'ನಾನು ಸಂಭಾಷಣೆಯ ಭಾಗವಾಗಿದ್ದೆ ಆದರೆ, ಸಂಪೂರ್ಣವಾಗಿ ಅದರಲ್ಲಿ ಇರಲಿಲ್ಲ. ನಾನು ಈಗಿರುವ ಸ್ಥಾನಕ್ಕೆ ಬರಲು ನಾನು ನನ್ನ ದಾರಿಯಲ್ಲಿ ಕೆಲಸ ಮಾಡಬೇಕಾಗಿತ್ತು' ಎಂದು ಮೆಗಾ ಹರಾಜಿಗೂ ಮುನ್ನ ಕೆಕೆಆರ್‌ನ ಯೋಜನೆ ಕುರಿತು ಅಯ್ಯರ್ ಬಹಿರಂಗಪಡಿಸಿದರು.
ಕೋಲ್ಕತ್ತಾ ತಂಡದಿಂದ ಅವರ ನಿರ್ಗಮನವು ಆಘಾತಕಾರಿಯಾಗಿತ್ತು. ವಿಶೇಷವಾಗಿ 2024ರಲ್ಲಿ ಅವರು ತಂಡವನ್ನು ಮೂರನೇ ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದ್ದರು. ಕೆಕೆಆರ್ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಮತ್ತು ಶ್ರೇಯಸ್ ಅಯ್ಯರ್ ನಡುವೆ ಭಿನ್ನಾಭಿಪ್ರಾಯದ ಕುರಿತು ವರದಿಗಳಾಗಿದ್ದವು. ಅಯ್ಯರ್ 2023ನೇ ಆವೃತ್ತಿಯಲ್ಲಿ ಬೆನ್ನುನೋವಿನಿಂದಾಗಿ ಹೊರಗುಳಿದು 2024ರಲ್ಲಿ ಪುನರ್ರಚಿಸಿದ ತಂಡಕ್ಕೆ ಮರಳಿದರು. ಆದರೆ, ಆ ವರ್ಷದ ಅಂತ್ಯದ ವೇಳೆಗೆ ಅವರು ಕೆಕೆಆರ್‌ನ ಯೋಜನೆಗಳ ಭಾಗವಾಗಿರಲಿಲ್ಲ.
2025ರ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು ಅಯ್ಯರ್ ಅವರನ್ನು 26.75 ಕೋಟಿ ರೂ.ಗೆ ಖರೀದಿಸಿತು ಮತ್ತು ಹೂಡಿಕೆಯು ತಕ್ಷಣವೇ ಫಲ ನೀಡಿತು. ಇದು ರಿಷಭ್ ಪಂತ್ (27 ಕೋಟಿ ರೂ.) ನಂತರ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅಯ್ಯರ್ ಅದ್ಭುತ ಪ್ರದರ್ಶನ ನೀಡಿದರು. 50.3ರ ಸರಾಸರಿಯಲ್ಲಿ 604 ರನ್‌ಗಳನ್ನು ಮತ್ತು 175ರ ಸ್ಟ್ರೈಕ್ ರೇಟ್‌ನೊಂದಿಗೆ, ದಶಕದಲ್ಲಿ ಮೊದಲ ಬಾರಿಗೆ ಪಂಜಾಬ್ ತಂಡವನ್ನು ಐಪಿಎಲ್ ಫೈನಲ್‌ಗೆ ಕರೆದೊಯ್ದರು. ಅವರ ನಾಯಕತ್ವವು ಕ್ರಿಯಾಶೀಲವಾಗಿತ್ತು, ಅವರ ಬ್ಯಾಟಿಂಗ್ ಉತ್ತಮವಾಗಿತ್ತು ಮತ್ತು ಕೋಚ್ ರಿಕಿ ಪಾಂಟಿಂಗ್ ಅವರೊಂದಿಗಿನ ಅವರ ಬಾಂಧವ್ಯವು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ನಲ್ಲಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ಅವರು ತೋರಿಸಿದ ಸಾಮರ್ಥ್ಯವನ್ನು ಮತ್ತೆ ಹುಟ್ಟುಹಾಕಿತು.
ಆರ್‌ಸಿಬಿ ವಿರುದ್ಧ ಪಂಜಾಬ್ ತನ್ನ ಚೊಚ್ಚಲ ಪ್ರಶಸ್ತಿಗೆ ಕೇವಲ ಆರು ರನ್‌ಗಳಿಂದ ಸೋತರೂ, ಅಯ್ಯರ್ ಅವರ ಪ್ರಭಾವವು ತಂಡವನ್ನು ನಿಜವಾದ ಸ್ಪರ್ಧಿಗಳನ್ನಾಗಿ ಪರಿವರ್ತಿಸಿದೆ.
Advertisement