
ಭಾರತ ತಂಡವು ಬುಧವಾರ ಆತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧದ ಗ್ರೂಪ್ ಎ ಪಂದ್ಯದೊಂದಿಗೆ ಏಷ್ಯಾ ಕಪ್ 2025ರ ಅಭಿಯಾನವನ್ನು ಆರಂಭಿಸಲಿದೆ. ಫೇವರ್ ತಂಡಗಳಲ್ಲಿ ಒಂದಾಗಿ ಆಡುವ ಹಾಲಿ ಚಾಂಪಿಯನ್ ತಂಡವು ದಾಖಲೆಯ ಒಂಬತ್ತನೇ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವ ಗುರಿಯನ್ನು ಹೊಂದಿದೆ. ನಾಯಕ ಸೂರ್ಯಕುಮಾರ್ ಯಾದವ್ ಸ್ಪರ್ಧೆಗೆ ಮುಂಚಿತವಾಗಿ ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸಿದ್ದರೂ, ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾರೆಲ್ಲಾ ಇರಲಿದ್ದಾರೆ ಎನ್ನುವ ಬಗ್ಗೆ ಇನ್ನೂ ಪ್ರಶ್ನೆಗಳಿವೆ.
ಶುಭಮನ್ ಗಿಲ್ ಉಪನಾಯಕನಾಗಿರುವುದರಿಂದ, ಸಂಜು ಸ್ಯಾಮ್ಸನ್ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆಯುತ್ತಾರೆಯೇ ಇಲ್ಲವೇ ಎಂಬ ಅನುಮಾನಗಳು ಮೂಡಿದ್ದು, ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ ಮತ್ತು ರಿಂಕು ಸಿಂಗ್ ಬಗ್ಗೆಯೂ ಇದೇ ರೀತಿಯ ಕಳವಳಗಳು ವ್ಯಕ್ತವಾಗಿವೆ.
ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿದ್ದು, ಇಬ್ಬರೂ ಬ್ಯಾಟ್ಸ್‌ಮನ್‌ಗಳು ಸ್ಪರ್ಧೆಗೆ ಮುನ್ನ ತರಬೇತಿ ಅವಧಿಯಲ್ಲಿ ಸಾಕಷ್ಟು ಭರವಸೆಯನ್ನು ತೋರಿಸಿದ್ದಾರೆ. ಸೋಮವಾರ ನಡೆದ ಐಚ್ಛಿಕ ತರಬೇತಿ ಅವಧಿಯಲ್ಲಿ ಅಭಿಷೇಕ್ '25-30 ಸಿಕ್ಸರ್‌ಗಳನ್ನು' ಬಾರಿಸುವ ಮೂಲಕ ಎಲ್ಲರನ್ನು ಬೆರಗಾಗಿಸಿದರು.
ತಿಲಕ್ ವರ್ಮಾ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದು, ನಾಯಕ ಸೂರ್ಯಕುಮಾರ್ ಯಾದವ್ 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಶಿವಂ ದುಬೆ ಬೌಲಿಂಗ್ ಆಯ್ಕೆಯಾಗಿರುವುದರಿಂದ, ಯುಎಇ ವಿರುದ್ಧದ ಪಂದ್ಯಕ್ಕೆ ಅವರು ಆಯ್ಕೆಯಾಗುವ ನಿರೀಕ್ಷೆಯಿದೆ.
ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್ ಬದಲಿಗೆ ಜಿತೇಶ್ ಶರ್ಮಾ ಆಯ್ಕೆಯಾಗುವ ನಿರೀಕ್ಷೆಯಿದೆ. 2025ರ ಐಪಿಎಲ್‌ನಲ್ಲಿ ಜಿತೇಶ್ ಸಾಕಷ್ಟು ಭರವಸೆಯನ್ನು ತೋರಿಸಿದ್ದಾರೆ. ಅಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
ಆಲ್‌ರೌಂಡರ್‌ಗಳ ವಿಷಯಕ್ಕೆ ಬಂದರೆ, ಹಾರ್ದಿಕ್ ಪಾಂಡ್ಯ ತಂಡದಲ್ಲಿ ಪ್ರಮುಖ ಆಟಗಾರನಾಗಲಿದ್ದು, ಅಕ್ಷರ್ ಪಟೇಲ್ ಕೂಡ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಯಿದೆ. ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಅರ್ಶದೀಪ್ ಸಿಂಗ್ ವೇಗದ ಆಯ್ಕೆಗಳಾಗಿದ್ದು, ವರುಣ್ ಚಕ್ರವರ್ತಿ ಮಾತ್ರ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿದ್ದಾರೆ.
ಕುಲದೀಪ್ ಯಾದವ್ ಕೂಡ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದರೆ, ಭಾರತವು ಆಲ್‌ರೌಂಡರ್ ಆಯ್ಕೆಯನ್ನು ಕೈಬಿಡಬೇಕಾಗುತ್ತದೆ.
ಯುಎಇ ವಿರುದ್ಧ ಭಾರತದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಜಿತೇಶ್ ಶರ್ಮಾ, ಹಾರ್ಧಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ.
Advertisement