
ಅಬುದಾಬಿ: ಇತ್ತೀಚೆಗಷ್ಟೇ ಹ್ಯಾಂಡ್ ಶೇಕ್ ವಿವಾದದಿಂದ ವ್ಯಾಪಕಸುದ್ದಿಗೆ ಗ್ರಾಸವಾಗಿದ್ದ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಇದೀಗ ಮತ್ತೆ ಹೊಸ ತಲೆನೋವಿಗೆ ತುತ್ತಾಗಿದ್ದು, 'ಪ್ರಶಸ್ತಿ ಪ್ರದಾನ ಗಣ್ಯರ ಪಟ್ಟಿಯಿಂದ ಅವನ ಹೆಸರು ಕೈ ಬಿಡಿ' ಎಂದು ಭಾರತ ತಂಡ ಒತ್ತಾಯಿಸಿದೆ ಎನ್ನಲಾಗಿದೆ.
ಹೌದು.. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಹ್ಯಾಂಡ್ ಶೇಕ್ ವಿವಾದಕ್ಕೆ ಸಂಬಂಧಿಸಿದಂತೆ ಪಂದ್ಯದ ರೆಫರಿ ಬದಲಾವಣೆಗೆ ಪಾಕಿಸ್ತಾನ ಆಗ್ರಹಿಸುತ್ತಿರುವಂತೆಯೇ ಇತ್ತ ಭಾರತ ತಂಡ ಕೂಡ ಇದಕ್ಕೆ ಖಡಕ್ ತಿರುಗೇಟು ನೀಡಿದ್ದು, ಪ್ರಶಸ್ತಿ ಪ್ರದಾನ ಗಣ್ಯರ ಪಟ್ಟಿಯಿಂದ ಎಸಿಸಿ ಪ್ರಧಾನ ವ್ಯಕ್ತಿಯ ಹೆಸರನ್ನೇ ಕೈ ಬಿಡುವಂತೆ ಒತ್ತಾಯಿಸಿದೆ.
ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮತ್ತು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರನ್ನು ಟ್ರೋಫಿ ಪ್ರದಾನ ಗಣ್ಯರ ಪಟ್ಟಿಯಿಂದ ತೆಗೆದುಹಾಕುವಂತೆ ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಎನ್ ಡಿಟಿವಿ ವರದಿ ಮಾಡಿದ್ದು, ಸೂರ್ಯ ಕುಮಾರ್ ಯಾದವ್ ನಡೆ ಇದೀಗ ಕ್ರಿಕೆಟ್ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಮೂಲಗಳ ಪ್ರಕಾರ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಪಂದ್ಯಾವಳಿಯ ಕೆಲವು ಅಂಶಗಳ ಕುರಿತು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ ಕೆಲವು ವಿನಂತಿಗಳನ್ನು ಮಾಡಿವೆ ಎಂದು ವಿಶ್ವಾಸಾರ್ಹವಾಗಿ ತಿಳಿದುಬಂದಿದೆ.
ಆಂಡಿ ಪೈಕ್ರಾಫ್ಟ್ ಅವರನ್ನು ವಜಾಗೊಳಿಸಬೇಕೆಂಬ ಪಿಸಿಬಿ ಕೋರಿಕೆಗೆ ಸಂಬಂಧಿಸಿದಂತೆ, ಪಾಕಿಸ್ತಾನ vs ಯುಎಇ ಪಂದ್ಯದ ಉಸ್ತುವಾರಿಯನ್ನು ರಿಚಿ ರಿಚರ್ಡ್‌ಸನ್ ಅವರಿಗೆ ವಹಿಸಲು ಐಸಿಸಿ ಒಪ್ಪಿಕೊಂಡಿದೆ. ಆದಾಗ್ಯೂ, ನಂತರದ ಹಂತಗಳಲ್ಲಿ ಪಾಕಿಸ್ತಾನದ ಪಂದ್ಯಗಳಲ್ಲಿ ಪೈಕ್ರಾಫ್ಟ್ ಅಂಪೈರಿಂಗ್ ಮಾಡುವ ಬಗ್ಗೆ ಅಂತಿಮ ನಿರ್ಧಾರ ಇನ್ನೂ ತೆಗೆದುಕೊಳ್ಳಲಾಗಿಲ್ಲ ಎಂದು ತಿಳಿದುಬಂದಿದೆ.
ಭಾರತ ಬಿಗಿ ಪಟ್ಟು
ಇನ್ನು ಟೂರ್ನಿಯಲ್ಲಿ ಭಾರತ ತಂಡವು ಫೈನಲ್‌ನಲ್ಲಿ ಜಯಗಳಿಸಿದರೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರೂ ಆಗಿರುವ ಮೊಹ್ಸಿನ್ ನಖ್ವಿ ಅವರಿಂದ ಏಷ್ಯಾ ಕಪ್ ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸುವುದು ತನಗೆ ಇಷ್ಟವಿಲ್ಲ ಎಂದು ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಸ್ಪಷ್ಟಪಡಿಸಿದ್ದಾರೆ. ಈ ಸಂದೇಶವನ್ನು ACCಗೂ ತಲುಪಿಸಲಾಗಿದೆ ಎಂದು ತಿಳಿದುಬಂದಿದೆ. ಇದು ಎಸಿಸಿಗೆ ದೊಡ್ಡ ತಲೆನೋವಾಗಿದೆ.
Advertisement