
ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ತಂಡ ಫೈನಲ್ ಗೆ ಲಗ್ಗೆ ಇಟ್ಟಿದೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ನೀಡಿದ್ದ 169 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಬಾಂಗ್ಲಾದೇಶ 19.3 ಓವರ್ ನಲ್ಲಿ 127 ರನ್ ಗಳಿಗೇ ಆಲೌಟ್ ಆಯಿತು. ಆ ಮೂಲಕ 41 ರನ್ ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.
ಈ ಮಹತ್ವದ ಗೆಲುವಿನೊಂದಿಗೆ ಭಾರತ ತಂಡ ಹಾಲಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಗೇರಿದೆ. ಅಂತೆಯೇ ಪಾಕಿಸ್ತಾನದ ವಿರುದ್ಧ ಹೀನಾಯವಾಗಿ ಸೋತ ಶ್ರೀಲಂಕಾ ತಂಡ ಟೂರ್ನಿಯಿಂದಲೇ ಹೊರಬಿದ್ದಿದೆ.
ಸೈಫ್ ಹಸನ್ ಏಕಾಂಗಿ ಹೋರಾಟ ವ್ಯರ್ಥ
ಭಾರತ ನೀಡಿದ 169 ರನ್ ಗಳ ಬೆನ್ನು ಹತ್ತಿದ ಬಾಂಗ್ಲಾದೇಶಕ್ಕೆ ಆರಂಭಿಕ ಆಟಗಾರ ಸೈಫ್ ಹಸನ್ ಬೆನ್ನೆಲುಬಾಗಿ ನಿಂತಿದ್ದರು. 51 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 3 ಬೌಂಡರಿಗಳ ನೆರವಿನಿಂದ 69 ರನ್ ಪೇರಿಸಿದ್ದ ಸೈಫ್ ಬಾಂಗ್ಲಾದೇಶ ಇನ್ನಿಂಗ್ಸ್ ನ 18ನೇ ಓವರ್ ನಲ್ಲಿ ಔಟಾದರು.
ಹಸನ್ ಹೊರತು ಪಡಿಸಿದರೆ ಬಾಂಗ್ಲಾದೇಶ ಪರ ಪರ್ವೇಜ್ ಹೊಸೇನ್ ಮಾತ್ರ ಎರಡಂಕಿ ಮೊತ್ತ (21) ಗಳಿಸಿದ್ದರು. ಉಳಿದಂತೆ ಬಾಂಗ್ಲಾದೇಶದ ಯಾವ ಬ್ಯಾಟರ್ ಕೂಡ ಎರಡಂಕಿ ಮೊತ್ತ ದಾಟಲಿಲ್ಲ. ತೌಹಿದ್ ಹೃದೋಯ್ 7 ರನ್ ಗಳಿಸಿದರೆ, ನಾಯಕ ಜೇಕರ್ ಅಲಿ, ಮಹಮದ್ ಸೈಫುದ್ದೀನ್ ಮತ್ತು ನಸುಮ್ ಅಹ್ಮದ್ ತಲಾ 4 ರನ್ ಗಳಿಸಿದರು. ಅಂತೆಯೇ ಹಸನ್ ಸಕಿಬ್, ಶಮೀಮ್ ಹೊಸೇನ್ ಶೂನ್ಯ ಸುತ್ತಿದರು.
ಭಾರತದ ಪರ ಕುಲದೀಪ್ ಯಾದವ್ 3 ವಿಕೆಟ್ ಪಡೆದರೆ, ಜಸ್ ಪ್ರೀತ್ ಬುಮ್ರಾ ಮತ್ತು ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದರು. ಅಂತೆಯೇ ಅಕ್ಸರ್ ಪಟೇಲ್ ಮತ್ತು ತಿಲಕ್ ವರ್ಮಾ ತಲಾ 1 ವಿಕೆಟ್ ಪಡೆದರು.
Advertisement