
ಅಬುದಾಬಿ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಭಾರತ ಮತ್ತು ಪಾಕಿಸ್ತಾನ ನಡುವಿನ ಸೂಪರ್ 4 ಹಂತದ ಪಂದ್ಯ ಕೇವಲ ಕ್ರಿಕೆಟ್ ಗೆ ಮಾತ್ರ ಸೀಮಿತವಾಗಿರಲಿಲ್ಲ. ಬದಲಿಗೆ ಪಾಕ್ ಆಟಗಾರರ ಉದ್ಧಟತನಕ್ಕೂ ವೇದಿಕೆಯಾಗಿತ್ತು. ಇದೀಗ ಇದೇ ವಿಚಾರವಾಗಿ ಪಾಕ್ ವೇಗಿ ಶಾಹೀನ್ ಅಫ್ರಿದಿ (Shaheen Afridi) ಕೊನೆಗೂ ತಮ್ಮ ಮೌನ ಮುರಿದಿದ್ದಾರೆ.
ಅಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಭಾರತ ಮತ್ತು ಭಾರತೀಯ ಸೇನೆಯನ್ನು ಟೀಕಿಸುವ ವಿಮಾನ ಪತನದ ಅಣಕ ಮಾಡಿದ್ದರು. ಈ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು ಪಾಕ್ ಆಟಗಾರರ ಉದ್ಧಟತನಕ್ಕೆ ಕ್ರಿಕೆಟ್ ಅಭಿಮಾನಿಗಳ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿರುವಂತೆಯೇ ಇದೇ ವಿಚಾರವಾಗಿ ಪಾಕ್ ವೇಗಿ ಶಾಹೀನ್ ಅಫ್ರಿದಿ ಮಾತನಾಡಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಹೀನ್ ಅಫ್ರಿದಿ, 'ನೋಡಿ, ನಮ್ಮ ಕೆಲಸ ಕ್ರಿಕೆಟ್ ಆಡುವುದು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಪ್ರತಿಯೊಬ್ಬರಿಗೂ ಅವರು ಬಯಸುವ ರೀತಿಯಲ್ಲಿ ವ್ಯಕ್ತಪಡಿಸುವ ಹಕ್ಕಿದೆ' ಎಂದು ಹೇಳುವ ಮೂಲಕ ತಮ್ಮ ತಂಡದ ಆಟಗಾರರ ವರ್ತನೆಯನ್ನು ಸಮರ್ಥಿಸಿಕೊಂಡರು.
'ಎಲ್ಲರಿಗೂ ಅವರದ್ದೇ ಆದ ಆಲೋಚನೆಗಳಿರುತ್ತವೆ. ಎಲ್ಲರಿಗೂ ಅವರದ್ದೇ ಆದ ಗೌರವವಿರುತ್ತದೆ. ಎಲ್ಲರೂ ಅವರು ಯೋಚಿಸುವ ರೀತಿಯಲ್ಲಿ ಯೋಚಿಸುತ್ತಾರೆ. ಆದರೆ ನಮ್ಮ ಕೆಲಸ ಕ್ರಿಕೆಟ್ ಆಡುವುದು. ಮತ್ತು ನಾವು ಏಷ್ಯಾ ಕಪ್ ಗೆಲ್ಲಲು ಬಂದಿದ್ದೇವೆ. ದೇವರು ಬಯಸಿದರೆ, ಒಂದು ತಂಡವಾಗಿ, ನಮ್ಮ ಕೈಲಾದಷ್ಟು ಉತ್ತಮ ಪ್ರದರ್ಶನ ನೀಡುತ್ತಿದ್ದೇವೆ' ಎಂದರು.
ಅವ್ರು ಫೈನಲ್ ಗೆ ಬರ್ಲಿ ನೋಡೋಣ
ಇನ್ನು ಹಾಲಿ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಈಗಾಗಲೇ ಸತತ 2 ಪಂದ್ಯಗಳನ್ನು ಸೋತಿದೆ. ಒಂದು ವೇಳೆ ಸೆಪ್ಟೆಂಬರ್ 28 ರಂದು ನಡೆಯಲಿರುವ ಪಂದ್ಯಾವಳಿಯ ಫೈನಲ್‌ನಲ್ಲಿ ಎರಡೂ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆ ಇದೆ.
ಈ ವರೆಗೆ ಯಾವುದೇ ಅಂತಿಮ ಸ್ಪರ್ಧಿಗಳು ಇನ್ನೂ ದೃಢೀಕರಿಸಲ್ಪಟ್ಟಿಲ್ಲ. ಮುಂಬರುವ ಭಾನುವಾರದ ಪ್ರಶಸ್ತಿ ನಿರ್ಣಾಯಕ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾದರೆ ಭಾರತವನ್ನು ಸೋಲಿಸುವ ತಮ್ಮ ತಂಡದ ಸಾಮರ್ಥ್ಯದ ಬಗ್ಗೆ ಶಾಹೀನ್ ವಿಶ್ವಾಸ ವ್ಯಕ್ತಪಡಿಸಿದರು.
"ಅವರು ಇನ್ನೂ ಫೈನಲ್ ತಲುಪಿಲ್ಲ. ಅವರು ಫೈನಲ್ ತಲುಪಿದಾಗ ನಾವು ನೋಡುತ್ತೇವೆ. ನಾವು ಫೈನಲ್ ಗೆಲ್ಲಲು ಮತ್ತು ಏಷ್ಯಾಕಪ್ ಗೆಲ್ಲಲು ಇಲ್ಲಿಗೆ ಬಂದಿದ್ದೇವೆ. ಫೈನಲ್ ಗೆ ಬರುವ ಯಾವುದೇ ತಂಡ ಎದುರಿಸಲು ನಾವು ಸಿದ್ಧರಿದ್ದೇವೆ. ಒಂದು ವೇಳೆ ಭಾರತ ಫೈನಲ್ ಗೆ ಬಂದರೂ ನಾವು ಅವರನ್ನು ಸೋಲಿಸುತ್ತೇವೆ" ಎಂದು ಅವರು ಹೇಳಿದರು.
ಅಂತೆಯೇ ಪಾಕಿಸ್ತಾನವು ಅಗ್ರ ತಂಡಗಳ ವಿರುದ್ಧ ಹೆಚ್ಚು ಪಂದ್ಯಗಳನ್ನು ಗೆದ್ದಿಲ್ಲ. ಆದರೆ ಅದನ್ನು ಬದಲಾಯಿಸಲು ದೃಢನಿಶ್ಚಯ ಹೊಂದಿದೆ ಎಂದು ಶಾಹೀನ್ ಅಫ್ರಿದಿ ಒಪ್ಪಿಕೊಂಡರು.
Advertisement