2025ರ ಏಷ್ಯಾ ಕಪ್ ಫೈನಲ್‌ಗೆ ಮುನ್ನ ಪಾಕಿಸ್ತಾನದೊಂದಿಗೆ ಫೋಟೊಶೂಟ್ ಮಾಡಲು ಬಯಸುವುದಿಲ್ಲ ಎಂದು ಭಾರತ ಕ್ರಿಕೆಟ್ ತಂಡ ನಿರಾಕರಿಸಿದೆ ಎಂದು ವರದಿಯಾಗಿದೆ. ಸಂಪ್ರದಾಯದ ಪ್ರಕಾರ, ನಾಯಕರಾದ ಸೂರ್ಯಕುಮಾರ್ ಯಾದವ್ ಮತ್ತು ಸಲ್ಮಾನ್ ಅಲಿ ಅಘಾ ಅವರು IND vs PAK ಪ್ರಶಸ್ತಿ ಘರ್ಷಣೆಗೂ ಮುನ್ನ ಟ್ರೋಫಿಯೊಂದಿಗೆ ಒಟ್ಟಿಗೆ ಪೋಸ್ ನೀಡಬೇಕಾಗಿತ್ತು. ಆದಾಗ್ಯೂ, ಎರಡೂ ದೇಶಗಳ ನಡುವೆ ನಡೆಯುತ್ತಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು, ಮೆನ್ ಇನ್ ಬ್ಲೂ ಫೋಟೊಶೂಟ್ ಮಾಡದಿರಲು ನಿರ್ಧರಿಸಿದೆ.
ನ್ಯೂಸ್ 24 ರ ಪ್ರಕಾರ, ಏಷ್ಯಾ ಕಪ್ ಫೈನಲ್‌ಗೆ ಮುನ್ನ ಪಾಕಿಸ್ತಾನದೊಂದಿಗೆ ಫೋಟೊಶೂಟ್‌ನಲ್ಲಿ ಆಸಕ್ತಿ ಇಲ್ಲ ಎಂದು ಟೀಂ ಇಂಡಿಯಾ ತಿಳಿಸಿದೆ ಎಂದು ವರದಿಯಾಗಿದೆ. ಈ ಹಿಂದೆ ಎರಡೂ ತಂಡಗಳು ಆಡಿದ ಎರಡೂ ಪಂದ್ಯಗಳಲ್ಲಿ ಭಾರತದ ನಾಯಕ ಮತ್ತು ತಂಡದ ಆಟಗಾರರು ಪಾಕಿಸ್ತಾನದೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದರು. ಹ್ಯಾಂಡ್‌ಶೇಕ್ ತಿರಸ್ಕಾರವು ದೊಡ್ಡ ವಿವಾದಕ್ಕೆ ಕಾರಣವಾಯಿತು. ಪಿಸಿಬಿ, ಆಂಡಿ ಪೈಕ್ರಾಫ್ಟ್ ಅವರನ್ನು ಮ್ಯಾಚ್ ರೆಫರಿ ಸ್ಥಾನದಿಂದ ತೆಗೆದುಹಾಕುವಂತೆ ಐಸಿಸಿಗೆ ಒತ್ತಾಯಿಸಿತು.
ಪಿಸಿಬಿ ಜೊತೆ ಮತ್ತೆ ಮತ್ತೆ ಮಾತುಕತೆ ನಡೆಸಿದ ನಂತರ ಐಸಿಸಿ ಪಾಕಿಸ್ತಾನದ ಎಲ್ಲ ಬೇಡಿಕೆಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿತು. ಆದರೆ, ಸೆಪ್ಟೆಂಬರ್ 21 ರಂದು ನಡೆದ ಭಾರತ vs ಪಾಕಿಸ್ತಾನದ ಸೂಪರ್ ಫೋರ್ಸ್ ಪಂದ್ಯದ ಸಂದರ್ಭದಲ್ಲಿ ಮತ್ತೊಂದು ವಿವಾದ ಭುಗಿಲೆದ್ದಿತು. ಹ್ಯಾರಿಸ್ ರೌಫ್ ಮತ್ತು ಸಾಹಿಬ್ಜಾದಾ ಫರ್ಹಾನ್ ಅವರ ಸನ್ನೆಗಳ ಬಗ್ಗೆ ಬಿಸಿಸಿಐ ಐಸಿಸಿಗೆ ದೂರು ನೀಡಿತು. ಇದರಿಂದ ರೌಫ್‌ಗೆ ಪಂದ್ಯ ಶುಲ್ಕದ ಶೇ 30 ರಷ್ಟು ದಂಡ ವಿಧಿಸಲಾಯಿತು ಮತ್ತು ಫರ್ಹಾನ್‌ಗೆ ವಾಗ್ದಂಡನೆ ವಿಧಿಸಲಾಯಿತು. ಮತ್ತೊಂದೆಡೆ, ನಾಯಕ ಸೂರ್ಯಕುಮಾರ್ ಯಾದವ್ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರ ಕುಟುಂಬಗಳಿಗೆ ಗೆಲುವನ್ನು ಅರ್ಪಿಸಿದ ನಂತರ ಪಾಕಿಸ್ತಾನ ದೂರು ದಾಖಲಿಸಿತು. ಅವರಿಗೂ ದಂಡ ವಿಧಿಸಲಾಯಿತು.
ಆದಾಗ್ಯೂ, ಬಿಸಿಸಿಐ ಮತ್ತು ಪಿಸಿಬಿ ಎರಡೂ ತಮ್ಮ ಆಟಗಾರರ ಮೇಲೆ ವಿಧಿಸಲಾದ ನಿರ್ಬಂಧಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿವೆ. ಎರಡೂ ತಂಡಗಳ ನಡುವೆ ಇನ್ನೂ ಉದ್ವಿಗ್ನತೆ ಗೋಚರಿಸುತ್ತಿದ್ದರೂ, ಭಾನುವಾರ ನಡೆಯಲಿರುವ ಏಷ್ಯಾ ಕಪ್ 2025ರ ಫೈನಲ್‌ನಲ್ಲಿ ಭಾರತ ಮೂರನೇ ಬಾರಿಗೆ ಪಾಕಿಸ್ತಾನವನ್ನು ಎದುರಿಸಲಿದ್ದು, ಅಭಿಮಾನಿಗಳಲ್ಲಿ ಕಾತರ ಮನೆಮಾಡಿದೆ.
Advertisement