2025ರ ಏಷ್ಯಾಕಪ್‌ನಲ್ಲಿ ಈವರೆಗೆ ಅಜೇಯ ಓಟವನ್ನು ಮುಂದುವರಿಸಿರುವ ಟೀಂ ಇಂಡಿಯಾ ಇಂದು ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಸತತ ಮೂರನೇ ಭಾನುವಾರ ಉಭಯ ತಂಡಗಳು ಮುಖಾಮುಖಿಯಾಗುತ್ತಿದ್ದು, ಪಂದ್ಯಾವಳಿಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಣಸಲಿವೆ.
ಇದೀಗ ಭಾರತಕ್ಕೆ ಆಯ್ಕೆಯ ತಲೆನೋವು ಎದುರಾಗಲಿದೆ. ಶುಕ್ರವಾರ, ಶ್ರೀಲಂಕಾ ತಂಡವು ಟೂರ್ನಿಯ ಕೊನೆಯ ಸೂಪರ್ ಫೋರ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಸೆಣಸಿತು ಮತ್ತು ಸೂಪರ್ ಓವರ್‌ನಲ್ಲಿ ಭಾರತ ರೋಚಕ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಅರ್ಶದೀಪ್ ಸಿಂಗ್ ಸೂಪರ್ ಓವರ್‌ನಲ್ಲಿ ಡೆತ್ ಬೌಲಿಂಗ್ ಮಾಸ್ಟರ್‌ಕ್ಲಾಸ್ ನೀಡಿದರು. ಕೇವಲ ಎರಡು ರನ್ ಬಿಟ್ಟುಕೊಟ್ಟು ಎರಡು ವಿಕೆಟ್ ಕಬಳಿಸಿ ಭಾರತದ ಗೆಲುವಿಗೆ ಕಾರಣರಾದರು.
ಟೂರ್ನಿಯ ಆರಂಭದಲ್ಲಿ, ಅವರು ಕೇವಲ 64 ಪಂದ್ಯಗಳಲ್ಲಿ 100 ಟಿ20 ವಿಕೆಟ್ ಕಬಳಿಸಿದ ಸಾಧನೆ ಮಾಡಿದರು. ಈ ಮೂಲಕ ಅತ್ಯಂತ ವೇಗವಾಗಿ 100 ವಿಕೆಟ್ ಕಬಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ, ಭಾರತವು ಸ್ಪಿನ್ ದಾಳಿಯ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ ಮತ್ತು ಜಸ್ಪ್ರೀತ್ ಬುಮ್ರಾ ಮತ್ತು ಹಾರ್ಧಿಕ್ ಪಾಂಡ್ಯ ಮುಂಚೂಣಿಯ ವೇಗಿಗಳಾಗಿರುವುದರಿಂದ, ಅರ್ಶದೀಪ್ ಸಿಂಗ್ ಅವರ ಸೇರ್ಪಡೆ ಖಚಿತವಾಗಿಲ್ಲ. ಅಲ್ಲದೆ, ಎಂಟನೇ ಸ್ಥಾನದಲ್ಲಿಯೂ ಬ್ಯಾಟ್ಸ್‌ಮನ್ ಇರಬೇಕೆಂಬುದು ಅರ್ಶದೀಪ್ ಅವರ ಅವಕಾಶಗಳ ಮೇಲೆ ಪರಿಣಾಮ ಬೀರಿದೆ.
ತಮ್ಮ ಯೂಟ್ಯೂಬ್ ಚಾನೆಲ್ ಆಶ್ ಕಿ ಬಾತ್‌ನಲ್ಲಿ ಮಾತನಾಡಿರುವ ಮಾಜಿ ಆಫ್-ಸ್ಪಿನ್ನರ್ ಆರ್ ಅಶ್ವಿನ್, 'ಯಾವಾಗಲೂ ನಾನು ಇದನ್ನೇ ಹೇಳುತ್ತೇನೆ. ನೀವು ನನ್ನನ್ನು ಗಾಢ ನಿದ್ರೆಯಿಂದ ಎಬ್ಬಿಸಿದರೂ, ನನ್ನ ಉತ್ತರ ಬದಲಾಗುವುದಿಲ್ಲ: ಅರ್ಶದೀಪ್ ಸಿಂಗ್ ಆಡಲೇಬೇಕು. 8ನೇ ಸ್ಥಾನದಲ್ಲಿರುವ ಬ್ಯಾಟ್ಸ್‌ಮನ್ ಎಷ್ಟು ರನ್ ಗಳಿಸುತ್ತಾನೆ? ಹೆಚ್ಚೇನು ಅಲ್ಲ ಮತ್ತು ನಿಮಗೆ ಅಷ್ಟೊಂದು ರನ್‌ಗಳು ಬೇಕಾಗಿಲ್ಲ. ವಿಶ್ವಕಪ್‌ಗೆ ಇನ್ನೂ ಆರು ತಿಂಗಳು ಕಾಲಾವಕಾಶವಿದ್ದು, ಅರ್ಶದೀಪ್ ಸಿಂಗ್ ಮತ್ತು ವರುಣ್ ಚಕ್ರವರ್ತಿಯ ಬ್ಯಾಟಿಂಗ್ ಬಗ್ಗೆ ಕೆಲಸ ಮಾಡಿ. ಬುಮ್ರಾ ಈಗಾಗಲೇ ಸ್ವಲ್ಪ ಬ್ಯಾಟಿಂಗ್ ಮಾಡಬಹುದು, ಬ್ಯಾಟ್ ಸ್ವಿಂಗ್ ಹೊಡೆಯಬಹುದು. ಬ್ಯಾಟಿಂಗ್ ಕೋಚ್ ಈ ಹುಡುಗರಿಗೆ ಹೆಚ್ಚಿನ ಸಮಯವನ್ನು ನೀಡಬೇಕಾಗಿದೆ' ಎಂದರು.
ಭಾರತದ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್‌ಗಾಗಿ ಶಿವಂ ದುಬೆ ಸೇರಿದಂತೆ ಹಲವರಿಗೆ ತಂಡದಲ್ಲಿ ಸ್ಥಾನ ನೀಡಿದರೆ, ಡೆತ್ ಬೌಲಿಂಗ್‌ನಲ್ಲಿ ವಿಶೇಷವಾಗಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬಲಿಷ್ಠ ಬೌಲರ್‌ಗಳನ್ನು ಹೊಂದಿರುವುದು ಹೆಚ್ಚು ಮುಖ್ಯ. ಹಾರ್ದಿಕ್ ಪಾಂಡ್ಯ ಫೈನಲ್‌ಗೆ ಅಲಭ್ಯರಾಗಿದ್ದರೆ, ಅರ್ಶದೀಪ್ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆಯಬಹುದು ಎಂದು 38 ವರ್ಷದ ಅಶ್ವಿನ್ ಹೇಳಿದರು.
'ಆರ್ಶದೀಪ್ ಬೌಲಿಂಗ್ ಮಾಡಿದ ರೀತಿ, ಅವರ ಅಗತ್ಯವಿದೆ ಎಂದು ನಾವು ಏಕೆ ಹೇಳುತ್ತಿದ್ದೇವೆ ಎಂಬುದನ್ನು ಸಾಬೀತುಪಡಿಸಿದೆ. ಆದ್ದರಿಂದ, ಹಾರ್ಧಿಕ್ ಆಡದಿದ್ದರೆ, ಭಾರತ ಅರ್ಶದೀಪ್ ಅವರನ್ನು ಆಡಿಸಬೇಕಾಗುತ್ತದೆ. ಎಲ್ಲವೂ ಉತ್ತಮವಾಗಿದ್ದರೆ ಹಾರ್ಧಿಕ್ ಅವಶ್ಯಕ. ಇಲ್ಲದಿದ್ದರೆ, ಅರ್ಶದೀಪ್ ಅವರನ್ನು ಆಡಿಸಲಾಗುತ್ತದೆ ಮತ್ತು ಅವರು ಭಾರತಕ್ಕೆ ಏಕೆ ಪ್ರಮುಖ ಬೌಲರ್ ಎಂಬುದನ್ನು ಮತ್ತೊಮ್ಮೆ ತೋರಿಸಬಹುದು' ಎಂದರು.
Advertisement