
ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಭಾರತದ ವಿರುದ್ಧದ ಪಂದ್ಯದಲ್ಲಿ ಭಾರತೀಯ ಸೇನೆ ಕುರಿತು ವಿವಾದಾತ್ಮಕ ಸನ್ಹೆ ಮಾಡಿ ದಂಡ ಹಾಕಿಸಿಕೊಂಡಿದ್ದ ಪಾಕ್ ವೇಗಿ ಹ್ಯಾರಿಸ್ ರೌಫ್ ರ ದಂಡವನ್ನು ತಾವೇ ಪಾವತಿಸುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi) ಹೇಳಿದ್ದಾರೆ.
ಹೌದು.. ಏಷ್ಯಾಕಪ್ (Asia Cup) ಟೂರ್ನಿ ಮುಗಿಯುವ ಹಂತಕ್ಕೆ ಬಂದಿದ್ದರೂ ವಿವಾದಗಳು ಮಾತ್ರ ಅಂತ್ಯಗೊಂಡಿಲ್ಲ. ಒಂದೆಡೆ ಪಾಕಿಸ್ತಾನ ಆಟಗಾರರು ಭಾರತೀಯ ಸೇನೆಯ ಕುರಿತು ವಿವಾದಾತ್ಮಕ ಸನ್ಹೆ ಮಾಡಿ ಐಸಿಸಿಯಿಂದ ದಂಡ ಹಾಕಿಸಿಕೊಂಡಿದ್ದ ಹ್ಯಾರಿಸ್ ರೌಫ್ ಮತ್ತು ಅರ್ಧಶತಕ ಸಿಡಿಸ್ ಗನ್ ಫೈರ್ ಸಂಭ್ರಮಾಚರಣೆ ಮಾಡಿದ್ದ ಫರ್ಹಾನ್ ಪ್ರಕರಣಗಳ ನಡುವೆಯೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಕೂಡ ವಿವಾದಗಳಿಂದ ಹೊರತಾಗಿಲ್ಲ.
ಕೆಲವು ದಿನಗಳ ಹಿಂದೆ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿವಾದಾತ್ಮಕ ಫೋಟೋ ಪೋಸ್ಟ್ ಮಾಡಿದ್ದಕ್ಕಾಗಿ ಟೀಕೆಗಳನ್ನು ಎದುರಿಸಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi) ಮತ್ತೊಮ್ಮೆ ವಿವಾದದಲ್ಲಿ ಸಿಲುಕಿದ್ದಾರೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಅಧ್ಯಕ್ಷರು ಕೂಡ ಆಗಿರುವ ನಖ್ವಿ, ಐಸಿಸಿ (ICC) ಪಾಕ್ ಕ್ರಿಕೆಟಿಗ ಹ್ಯಾರಿಸ್ ರೌಫ್ ಗೆ ವಿಧಿಸಿರುವ ದಂಡವನ್ನು ತಾನು ಪಾವತಿಸುವುದಾಗಿ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಸೆಪ್ಟೆಂಬರ್ 21 ರಂದು ನಡೆದಿದ್ದ ಟೀಂ ಇಂಡಿಯಾ ವಿರುದ್ಧದ ಪಂದ್ಯದ ಸಮಯದಲ್ಲಿ ಪಾಕ್ ವೇಗಿ ಹ್ಯಾರಿಸ್ ರೌಫ್ ಪ್ರಚೋದನಕಾರಿ ಸನ್ನೆಗಳನ್ನು ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಸಿಸಿಐ, ಇದು ಆಟದ ನಿಯಮಗಳಿಗೆ ವಿರುದ್ಧವಾಗಿ ಎಂದು ಐಸಿಸಿಗೆ ದೂರು ನೀಡಿತ್ತು. ದೂರಿನನ್ವಯ ವಿಚಾರಣೆ ನಡೆಸಿದ್ದ ಐಸಿಸಿ, ಹ್ಯಾರಿಸ್ ರೌಫ್ಗೆ ಶೇ.30 ರಷ್ಟು ಪಂದ್ಯ ಶುಲ್ಕವನ್ನು ದಂಡವಾಗಿ ವಿಧಿಸಿತ್ತು. ಇದೀಗ ಆ ದಂಡದ ಮೊತ್ತವನ್ನು ನಾನು ಪಾವತಿಸುವುದಾಗಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಬೆಂಬಲ ಆಟಗಾರನ ದುರ್ವರ್ತನೆ ಸಮರ್ಥಿಸಿದ್ರಾ ಪಿಸಿಬಿ ಅಧ್ಯಕ್ಷ
ಐಸಿಸಿ, ಹ್ಯಾರಿಸ್ ರೌಫ್ ಅವರಿಗೆ ಪಂದ್ಯ ಶುಲ್ಕದ ಶೇಕಡಾ 30 ರಷ್ಟು ದಂಡ ವಿಧಿಸಿದರೆ, ಅದೇ ಪಂದ್ಯದಲ್ಲಿ ಗನ್ ಸೆಲೆಬ್ರೇಷನ್ ಮಾಡಿದ್ದ ಪಾಕಿಸ್ತಾನದ ಆರಂಭಿಕ ಆಟಗಾರ ಸಾಹಿಬ್ಜಾದಾ ಫರ್ಹಾನ್ ಅವರಿಗೆ ಕೇವಲ ಎಚ್ಚರಿಕೆ ನೀಡಿತ್ತು. ಇದೀಗ ಪಿಸಿಬಿ ಅಧ್ಯಕ್ಷ ನಖ್ನಿ ಪಾಕ್ ವೇಗಿ ಹ್ಯಾರಿಸ್ ರೌಫ್ ಅವರಿಗೆ ವಿಧಿಸಲಾದ ಸಂಪೂರ್ಣ ದಂಡವನ್ನು ಪಾವತಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ನಖ್ವಿ ಅವರ ಈ ನಡೆ ರೌಫ್ ಮಾಡಿದ ಫೈಟರ್ ಜೆಟ್ ಅನ್ನು ಹೊಡೆದುರುಳಿಸುವ ಸನ್ನೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿದೆ.
ಬಿಸಿಸಿಐ ಮೇಲ್ಮನವಿ
ಗನ್ ಸೆಲೆಬ್ರೇಷನ್ ಮಾಡಿದ್ದ ಸಾಹಿಬ್‌ಜಾದಾ ಫರ್ಹಾನ್ ಅವರಿಗೆ ಐಸಿಸಿ ಕೇವಲ ಎಚ್ಚರಿಕೆ ನೀಡಿತ್ತು. ಏತನ್ಮಧ್ಯೆ, ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಐಸಿಸಿ ಶೇಕಡಾ 30 ರಷ್ಟು ದಂಡ ವಿಧಿಸಿತ್ತು. ಇದೀಗ ಐಸಿಸಿಯ ಈ ನಿರ್ಧಾರದ ವಿರುದ್ಧ ಬಿಸಿಸಿಐ ಮೇಲ್ಮನವಿ ಸಲ್ಲಿಸಲಿದೆ.
ಸೆಪ್ಟೆಂಬರ್ 14 ರಂದು ಪಾಕಿಸ್ತಾನದ ವಿರುದ್ಧ ಭಾರತ ಜಯಗಳಿಸಿದ ನಂತರ ಸೂರ್ಯಕುಮಾರ್ ಯಾದವ್ ರಾಜಕೀಯ ಪ್ರೇರಿತ ಹೇಳಿಕೆ ನೀಡಿದ್ದಾರೆ ಎಂದು ಪಿಸಿಬಿ ಆರೋಪಿಸಿತ್ತು.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳಿಗೆ ಸಂತಾಪ ಸೂಚಿಸಿ ಮತ್ತು ಆಪರೇಷನ್ ಸಿಂಧೂರ್‌ನಲ್ಲಿ ಭಾಗಿಯಾಗಿರುವ ಭಾರತೀಯ ಸೇನೆಗೆ ವಿಜಯವನ್ನು ಅರ್ಪಿಸುವುದಾಗಿ ಸೂರ್ಯಕುಮಾರ್ ಯಾದವ್ ಹೇಳಿಕೆ ನೀಡಿದ್ದರು. ಪಿಸಿಬಿ ಈ ಬಗ್ಗೆ ಐಸಿಸಿಗೆ ದೂರು ನೀಡಿತ್ತು. ಇದೀಗ ಸೆಪ್ಟೆಂಬರ್ 28 ರಂದು ನಡೆಯುವ ಅಂತಿಮ ಪಂದ್ಯದ ನಂತರ ಬಿಸಿಸಿಐ ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ.
Advertisement