
ನವದೆಹಲಿ: ಪಾಕಿಸ್ತಾನದ ಗೃಹ ಸಚಿವ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಏಷ್ಯಾ ಕಪ್ ಟ್ರೋಫಿಯೊಂದಿಗೆ ಹೋಟೆಲ್‌ನಿಂದ ಪಲಾಯನ ಮಾಡಿದಾಗಿನಿಂದ ಸುದ್ದಿಯಲ್ಲಿದ್ದಾರೆ. ಭಾನುವಾರ ನಡೆದ ಏಷ್ಯಾ ಕಪ್ 2025 ಫೈನಲ್‌ನಲ್ಲಿ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಸೋಲಿಸಿದ ನಂತರ, ವಿಜಯಶಾಲಿ ಭಾರತೀಯ ತಂಡವು ಮೊಹ್ಸಿನ್ ನಖ್ವಿಯಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತು. ಹೀಗಾಗಿ ಕಪ್ ಅನ್ನು ನಖ್ವಿ ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದರು.
ಕಪ್ ಮರಳಿ ಪಡೆಯಲು ಬಿಸಿಸಿಐ ಅಖಾಡಕ್ಕೆ ಇಳಿದಿದೆ. ಇದರ ಬೆನ್ನಲ್ಲೇ ಮೊಹ್ಸಿನ್ ನಖ್ವಿ ಏಷ್ಯಾ ಕಪ್ ಟ್ರೋಫಿಯನ್ನು ಭಾರತಕ್ಕೆ ಹಿಂದಿರುಗಿಸಲು ಸಿದ್ಧರಿದ್ದಾರೆ, ಆದರೆ ಒಂದು ಷರತ್ತಿನ ಮೇಲೆ ಎಂದು ವರದಿಯಾಗಿದೆ. ವಾಸ್ತವವಾಗಿ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಬಗ್ಗೆ ವರದಿಯೊಂದು ಹೊರಬಿದ್ದಿದ್ದು, ಭಾರತೀಯ ತಂಡಕ್ಕೆ ಟ್ರೋಫಿ ಮತ್ತು ಪದಕಗಳನ್ನು ಕಳುಹಿಸಲು ನಖ್ವಿ ಒಂದು ಷರತ್ತು ವಿಧಿಸಿದ್ದಾರೆ ಎಂದು ಹೇಳಲಾಗಿದೆ. ಸೂರ್ಯಕುಮಾರ್ ಯಾದವ್ ಮತ್ತು ಅವರ ತಂಡವು ಔಪಚಾರಿಕ ಸಮಾರಂಭ ನಡೆದರೆ ಮಾತ್ರ ಪದಕಗಳು ಮತ್ತು ಟ್ರೋಫಿಯನ್ನು ಕೊಡುತ್ತೇನೆ. ತಾನೇ ವೈಯಕ್ತಿಕವಾಗಿ ಭಾರತೀಯ ತಂಡಕ್ಕೆ ಟ್ರೋಫಿ ಮತ್ತು ಪದಕಗಳನ್ನು ಹಸ್ತಾಂತರಿಸುತ್ತೇವೆ. ಇದು ನನ್ನ ಷರತ್ತು ಎಂದು ನಖ್ವಿ ಸಂಘಟಕರಿಗೆ ತಿಳಿಸಿದ್ದಾರೆ.
ಏಷ್ಯಾ ಕಪ್ ಟ್ರೋಫಿಯು ನಖ್ವಿ ದುಬೈನಲ್ಲಿ ತಂಗಿರುವ ಹೋಟೆಲ್‌ನಲ್ಲಿಯೆ ಇದೆ. ಎಸಿಸಿಯಲ್ಲಿರುವ ಇತರ ದೇಶಗಳ ಕ್ರಿಕೆಟ್ ಸಂಘಗಳ ಮಧ್ಯಸ್ಥಿಕೆಯ ಮೂಲಕ ಟ್ರೋಫಿಯನ್ನು ಹಿಂದಿರುಗಿಸುವ ಬಗ್ಗೆ ಬಿಸಿಸಿಐ ಚರ್ಚಿಸುತ್ತಿದೆ. ದುಬೈನ ಸ್ಪೋರ್ಟ್ಸ್ ಸಿಟಿಯಲ್ಲಿರುವ ಎಸಿಸಿ ಕಚೇರಿಗೆ ಟ್ರೋಫಿಯನ್ನು ತಲುಪಿಸಲು ನಖ್ವಿ ಅವರನ್ನು ಕೇಳಲಾಗಿದೆ, ಅಲ್ಲಿಂದ ಅದನ್ನು ಭಾರತಕ್ಕೆ ಕಳುಹಿಸಲಾಗುತ್ತದೆ. ಈ ಟ್ರೋಫಿ ನಖ್ವಿ ಅವರ ವೈಯಕ್ತಿಕ ಆಸ್ತಿಯಲ್ಲ, ಬದಲಿಗೆ ಎಸಿಸಿಗೆ ಸೇರಿದೆ ಎಂದು ಬಿಸಿಸಿಐ ಖಾರವಾಗಿ ಪ್ರತಿಕ್ರಿಯಿಸಿದೆ. ಆದ್ದರಿಂದ, ಅವರು ಅದನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಬಾಂಗ್ಲಾದೇಶದಲ್ಲಿ ನಡೆಸಲು ಸಾಧ್ಯವಾಗದ ಎಸಿಸಿಯ ಬಾಕಿ ಇರುವ ವಾರ್ಷಿಕ ಮಹಾಸಭೆ ಮಂಗಳವಾರ ದುಬೈನಲ್ಲಿ ನಿಗದಿಯಾಗಿದೆ. ಇದನ್ನೂ ಮುಂದೂಡಬೇಕೆಂದು ಬಿಸಿಸಿಐ ಒತ್ತಾಯಿಸಿದೆ.
Advertisement