

ನವದೆಹಲಿ: ಐಪಿಎಲ್ 2026ರ 14ನೇ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ ರೋಚಕ ಗೆಲುವು ದಾಖಲಿಸಿದೆ. ಕೊನೆಯ ಎಸೆತದಲ್ಲಿ 2 ರನ್ ಬೇಕಿತ್ತು. ಆದರೆ ಡೆಲ್ಲಿ ಪರ ಬ್ಯಾಟರ್ ಡೇವಿಡ್ ಮಿಲ್ಲರ್ ರನ್ ಬಾರಿಸಲು ವಿಫಲರಾದರು. ಅಂತಿಮವಾಗಿ ಗುಜರಾತ್ ಟೈಟನ್ಸ್ 1 ರನ್ ನಿಂದ ರೋಚಕ ಗೆಲುವು ದಾಖಲಿಸಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 210 ರನ್ ಗಳಿಸಿತು. 211 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 209 ರನ್ ಪೇರಿಸಿದ್ದು 1 ರನ್ ನಿಂದ ಸೋಲು ಕಂಡಿದೆ.
ಡೆಲ್ಲಿ ಪರ ಪತುನ್ ನಿಸಾಂಕಾ 41 ರನ್ ಹಾಗೂ ಕೆಎಲ್ ರಾಹುಲ್ 92 ರನ್ ಬಾರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಕೊನೆಯಲ್ಲಿ ಬಂದ ಡೇವಿಡ್ ಮಿಲ್ಲರ್ 20 ಎಸೆತಗಳಲ್ಲಿ 41 ರನ್ ಬಾರಿಸಿದರು. ಇನ್ನೇನು ತಂಡವನ್ನು ಗೆಲ್ಲಿಸಿಕೊಡುತ್ತಾರೆ ಎಂದು ಭಾಸವಾಗಿತ್ತು. ಆದರೆ ಕೊನೆಯ ರನ್ ಬಾರಿಸದೇ ಪಂದ್ಯ ಕೈಚೆಲ್ಲಿದರು.
ಗುಜರಾತ್ ಪರ ನಾಯಕ ಶುಭ್‌ಮನ್ ಗಿಲ್ 45 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 70 ರನ್ ಗಳಿಸಿದರು. ದೆಹಲಿ ಪರ ಮುಖೇಶ್ ಕುಮಾರ್ 2 ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದರು. ಗಿಲ್ ಜೊತೆಗೆ, ಜೋಸ್ ಬಟ್ಲರ್ ಮತ್ತು ವಾಷಿಂಗ್ಟನ್ ಸುಂದರ್ ಕೂಡ ಗುಜರಾತ್ ಪರ ಅರ್ಧಶತಕಗಳನ್ನು ಗಳಿಸಿದರು. ಸುಂದರ್ 32 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 55 ರನ್ ಗಳಿಸಿದರು. ಬಟ್ಲರ್ 27 ಎಸೆತಗಳಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 52 ರನ್ ಗಳಿಸಿದರು. ಈ ಪಂದ್ಯದಲ್ಲಿ, ಬಟ್ಲರ್ ತಮ್ಮ ಟಿ 20 ವೃತ್ತಿಜೀವನದಲ್ಲಿ 600 ಸಿಕ್ಸರ್‌ಗಳ ಮೈಲಿಗಲ್ಲನ್ನು ತಲುಪಿದರು.
Advertisement