ಬುಧವಾರ ನಡೆದ ಐಪಿಎಲ್ 2026ರ ಪಂದ್ಯದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಅವರನ್ನು ಭೇಟಿಯಾದರು. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ರಜತ್ ಪಾಟೀದಾರ್ ನೇತೃತ್ವದ ತಂಡವು ಎಲ್‌ಎಸ್‌ಜಿ ವಿರುದ್ಧ ಐದು ವಿಕೆಟ್‌ಗಳ ಸುಲಭ ಜಯ ಸಾಧಿಸಿತು. ಲಕ್ನೋವನ್ನು 146 ರನ್‌ಗಳಿಗೆ ಆಲೌಟ್ ಮಾಡಿತು ಮತ್ತು ವಿರಾಟ್ ಕೊಹ್ಲಿ ಅವರ 49 ರನ್‌ಗಳ ನೆರವಿನಿಂದ ಕೇವಲ 15.1 ಓವರ್‌ಗಳಲ್ಲಿಯೇ ಗೆಲುವಿನ ದಡ ಸೇರಿತು. ಪಂದ್ಯದ ನಂತರ, ಭಾರತ ಮತ್ತು ಆರ್‌ಸಿಬಿ ಸ್ಟಾರ್ ಆಟಗಾರ ಕೊಹ್ಲಿ ಜೊತೆಗೆ ಗೋಯೆಂಕಾ ಮೈದಾನದಲ್ಲಿ ಸಂವಾದ ನಡೆಸಿದರು.
ವೇಗಿಗಳಾದ ಜಾಶ್ ಹೇಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಅವರ ಆಕರ್ಷಕ ಬೌಲಿಂಗ್ ಮತ್ತು ಯುವ ಆಟಗಾರ ರಸಿಕ್ ಸಲಾಂ ದಾರ್ ಅವರು ಎದುರಾಳಿ ತಂಡದ ಬ್ಯಾಟರ್‌ಗಳ ಬೆವರಿಳಿಸಿದರು. ಅಂತಿಮವಾಗಿ ಆರ್‌ಸಿಬಿ, ಎಲ್‌ಎಸ್‌ಜಿಯನ್ನು ಐದು ವಿಕೆಟ್‌ಗಳಿಂದ ಸೋಲಿಸಿತು.
ಪಂದ್ಯಕ್ಕೂ ಮುನ್ನ ಊಹಿಸಿದ್ದಕ್ಕಿಂತ ಸ್ವಲ್ಪ ನಿಧಾನಗತಿಯ ಪಿಚ್‌ನಿಂದಾಗಿ, ಆರ್‌ಸಿಬಿಗೆ ಮಧ್ಯಮ ಕ್ರಮಾಂಕದಲ್ಲಿ 147 ರನ್‌ಗಳ ಗುರಿ ಬೆನ್ನಟ್ಟುವಲ್ಲಿ ಕೊಂಚ ಹಿನ್ನಡೆಯಾದಂತೆ ಕಂಡುಬಂತು. ಆದರೆ, ವಿರಾಟ್ ಕೊಹ್ಲಿ (49) ಮತ್ತು ನಾಯಕ ರಜತ್ ಪಾಟೀದಾರ್ (27) ಅವರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ತಂಡವು ಇನ್ನೂ 29 ಎಸೆತಗಳು ಬಾಕಿ ಇರುವಾಗಲೇ ಗುರಿಯನ್ನು ತಲುಪಿತು.
ಚೇಸಿಂಗ್ ಸಮಯದಲ್ಲಿ ಕೊಹ್ಲಿ ವಿಶಿಷ್ಟ ಇನಿಂಗ್ಸ್ ಆಡಿದರು. ಆರಂಭದಲ್ಲಿ 200ಕ್ಕೂ ಹೆಚ್ಚು ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದರು. ಫಿಲ್ ಸಾಲ್ಟ್ ಔಟಾದ ಬಳಿತ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ 57 ರನ್‌ಗಳ ಜೊತೆಯಾಟವಾಡಿದರು.
ಆರ್‌ಸಿಬಿ ಪರವಾಗಿ ರಸಿಕ್ ಸಲಾಂ ದಾರ್ (4/24), ಭುವನೇಶ್ವರ್ ಕುಮಾರ್ (3/27) ಮತ್ತು ಜಾಶ್ ಹೇಜಲ್‌ವುಡ್ (1/20) ಅವರ ಅಸಾಧಾರಣ ಸ್ಪೆಲ್‌ಗಳ ಮೂಲಕ ಆರ್‌ಸಿಬಿ ಎಲ್‌ಎಸ್‌ಜಿ ಮೇಲೆ ಮೇಲುಗೈ ಸಾಧಿಸಿತು.
Advertisement