

ಜಮೈಕಾ: ಕ್ರಿಕೆಟ್ ಪಂದ್ಯದ ವೇಳೆ ಬೌಲರ್ ಎಸೆದ ಚೆಂಡು ಅಪಾಯಕಾರಿಯಾಗಿ ಬ್ಯಾಟರ್ ತಲೆಗೆ ಬಡಿದ ಪರಿಣಾಮ ಪಂದ್ಯವನ್ನೇ ರದ್ದು ಮಾಡಿರುವ ವಿಲಕ್ಷಣ ಘಟನೆ ವೆಸ್ಟ್ ಇಂಡೀಸ್ ನಲ್ಲಿ ನಡೆದಿದೆ.
ವೆಸ್ಟ್ ಇಂಡೀಸ್ ಚಾಂಪಿಯನ್ಶಿಪ್ ಪಂದ್ಯವೊಂದು ಅಪಾಯಕಾರಿ ಪಿಚ್ ಕಾರಣದಿಂದ ರದ್ದುಗೊಂಡಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ವೆಸ್ಟ್ ಇಂಡೀಸ್‌ನ ಹಿರಿಯ ವೇಗಿ ಜೇಡನ್ ಸೀಲ್ಸ್ ಎಸೆದ ಒಂದು ಬಾಲ್ ಪಿಚ್ ಮೇಲೆ ಬಿದ್ದು ಭಾರೀ ಮಟ್ಟದಲ್ಲಿ ಬೌನ್ಸ್ ಆಗಿ ಬ್ಯಾಟ್ಸಮನ್ ಹೆಲ್ಮೆಟ್‌ಗೆ ಹೊಡೆದಿದೆ. ಇದಾದ ಬಳಿಕ ಅಂಪೈರ್‌ಗಳು ಪಂದ್ಯವನ್ನು ನಿಲ್ಲಿಸಲು ನಿರ್ಧರಿಸಿದರು. ಇದು ಚರ್ಚೆಗೆ ಗ್ರಾಸವಾಗಿದೆ.
ಬೌಲರ್ ಎಸೆದ ಚೆಂಡು ಅನಿರೀಕ್ಷಿತ ಬೌನ್ಸ್‌ನಿಂದ ಚೆಂಡು ಬ್ಯಾಟ್ಸ್‌ಮನ್ ಹೆಲ್ಮೆಟ್‌ಗೆ ಬಡಿದು ಗಾಯಗೊಳಿಸಿತು. ಅಂಪೈರ್‌ಗಳು ಪಿಚ್ ಸುರಕ್ಷಿತವಲ್ಲ ಎಂದು ಪರಿಗಣಿಸಿ ಪಂದ್ಯವನ್ನು ನಿಲ್ಲಿಸಿದರು. ಆಟಗಾರನ ಸುರಕ್ಷತೆ ಮತ್ತು ಆಟದ ನ್ಯಾಯಸಮ್ಮತತೆಯನ್ನು ಖಾತರಿಪಡಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಇಷ್ಟಕ್ಕೂ ಆಗಿದ್ದೇನು?
ವೆಸ್ಟ್ ಇಂಡೀಸ್‌ನ ಸರ್ ವಿವ್ ರಿಚರ್ಡ್ಸ್ ಮೈದಾನದಲ್ಲಿ ಲೀವರ್ಡ್ ಐಲ್ಯಾಂಡ್ ಹಾಗೂ ಟ್ರಿನಿಡಾಡ್ ಮತ್ತು ಟೊಬಾಗೋ ತಂಡದ ನಡುವೆ ಪಂದ್ಯ ನಡೆಯುತ್ತಿತ್ತು. ಲೀವರ್ಡ್ ಐಲ್ಯಾಂಡ್ ಆಟಗಾರ ಜೆರೆಮಿಯಾ ಲೂಯಿಸ್ ಬ್ಯಾಟಿಂಗ್ ಮಾಡುತ್ತಿದ್ದರು. ಆಗ ಟ್ರಿನಿಡಾಡ್ ಮತ್ತು ಟೊಬಾಗೋ ತಂಡದ ಬೌಲರ್ ಸೀಲ್ಸ್ ಮಾಡಿದ ಎಸೆತ ಅನಿರೀಕ್ಷಿತ ಬೌನ್ಸ್ ಉಂಟುಮಾಡಿತು. ಇದು ಬ್ಯಾಟರ್ ಜೆರೆಮಿಯಾ ಲೂಯಿಸ್ ಹೆಲ್ಮೆಟ್‌ಗೆ ಬಡಿಯಿತು.
ಜೆರೆಮಿಯಾ ಲೂಯಿಸ್ ತಕ್ಷಣವೇ ನೆಲಕ್ಕೆ ಬಿದ್ದರು. ಈ ಬಾಲ್ ಹೆಲ್ಮೆಟ್ ಅನ್ನು ಹಾನಿ ಮಾಡಿತ್ತು. ಈ ವೇಳೆ ಜೆರೆಮಿಯಾ ಲೂಯಿಸ್ ಹತಾಶೆಯಿಂದ ಹೆಲ್ಮೆಟ್ ಅನ್ನು ಒದ್ದು ಮೈದಾನದಿಂದ ಹೊರನಡೆದರು. ಲೂಯಿಸ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರು ಸ್ಥಿರವಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ವೆಸ್ಟ್ ಇಂಡೀಸ್ ಕ್ರಿಕೆಟ್ ಸ್ಪಷ್ಟನೆ
ಪಂದ್ಯದ ನಂತರ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಹೇಳಿಕೆ ಬಿಡುಗಡೆ ಮಾಡಿದ್ದು, ‘ಸರ್ ವಿವ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಅಪಾಯಕಾರಿ ಪಿಚ್ ಪರಿಸ್ಥಿತಿಯಿಂದಾಗಿ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಲೀವರ್ಡ್ ಐಲ್ಯಾಂಡ್ ಮತ್ತು ಟ್ರಿನಿಡಾಡ್- ಟೊಬಾಗೊ ದ್ವಿಪಕ್ಷೀಯ ಸರಣಿಯ ಈ ಪಂದ್ಯವನ್ನು ಡ್ರಾ ಎಂದು ರದ್ದುಗೊಳಿಸಲಾಗಿದೆ’ ಎಂದು ಹೇಳಿದೆ.
ಚಾಂಪಿಯನ್ ಶಿಪ್ ಫೈನಲ್ ಗೂ ಕುತ್ತು
ಮೈದಾನದಲ್ಲಿರುವ ಅಂಪೈರ್‌ಗಳು ಆಟ ಮುಂದುವರಿಯುವುದು ಅಪಾಯಕಾರಿ ಎಂದು ನಿರ್ಧರಿಸಿದ್ದರಿಂದ ಪಂದ್ಯ ರದ್ದುಗೊಳಿಸಲಾಗಿದೆ. ಚಾಂಪಿಯನ್ ಶಿಪ್ ಫೈನಲ್ ಮೇ 17-20ರವರೆಗೆ ನಡೆಯಲಿದೆ. ಅಲ್ಲಿಯವರೆಗೆ ಇಲ್ಲಿ ಯಾವುದೇ ಪಂದ್ಯ ನಡೆಸಬಾರದು ಎಂದು ನಿರ್ಧರಿಸಲಾಗಿದೆ.
ಪಂದ್ಯದ ಕುರಿತು
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಲೀವಾರ್ಡ್ 131 ರನ್ ಗಳಿಸಿ ಆಲ್ಔಟ್ ಆಯಿತು. ನಂತರ ಟ್ರಿನಿಡಾಡ್ ಮತ್ತು ಟೊಬಾಗೋ ತಂಡ 175 ರನ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಮೂರನೇ ದಿನದಾಟದಲ್ಲಿ ಬ್ಯಾಟಿಂಗ್ಗೆ ಇಳಿದ ಲೀವರ್ಡ್ ಐಲ್ಯಾಂಡ್ 140 ರನ್ಗೆ 7 ವಿಕೆಟ್ ಕಳೆದುಕೊಂಡಿತ್ತು. ಈ ಏಳೂ ವಿಕೆಟ್‌ಗಳನ್ನು ಸೀಲ್ಸ್ ಕಬಳಿಸಿದ್ದರು.
Advertisement