ಐಪಿಎಲ್ 2026ನೇ ಪಂದ್ಯದಲ್ಲಿ ಶನಿವಾರ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ಭರ್ಜರಿ ಗೆಲುವು ಸಾಧಿಸುವ ಮೂಲಕ ಐಪಿಎಲ್ ಅಂಕಪಟ್ಟಿಯಲ್ಲಿ ಮೇಲೇರಿದೆ. ಟಾಸ್ ಗೆದ್ದ ಹೈದರಾಬಾದ್ ತಂಡ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ, ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 228 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಎಸ್ಆರ್‌ಎಚ್ ತಂಡವು 18.3 ಓವರ್‌ಗಳಲ್ಲಿಯೇ ಐದು ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿ ಆರ್‌ಆರ್ ವಿರುದ್ಧ ಐದು ವಿಕೆಟ್‌ಗಳ ಗೆಲುವು ಸಾಧಿಸಿತು.
ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲಿ ಆರ್‌ಆರ್ ಪರವಾಗಿ ಅದ್ಭುತವಾಗಿ ಆಡಿದ 15 ವರ್ಷದ ವೈಭವ್ ಸೂರ್ಯವಂಶಿ ಇದೀಗ ಗಾಯದಿಂದ ಬಳಲುತ್ತಿದ್ದಾರೆ. ವೈಭವ್ ಎಸ್‌ಆರ್‌ಎಚ್ ವಿರುದ್ಧ 36 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ಬರೆದರು. ಇದು ಐಪಿಎಲ್ ಇತಿಹಾಸದಲ್ಲಿ ಮೂರನೇ ಅತ್ಯಂತ ವೇಗದ ಶತಕವಾಗಿದೆ.
ಆದಾಗ್ಯೂ, 15 ವರ್ಷದ ಬಾಲಕ ಎರಡನೇ ಇನಿಂಗ್ಸ್‌ನಲ್ಲಿ ಬೌಂಡರಿ ಕಡೆಗೆ ಹೋಗುತ್ತಿದ್ದ ಚೆಂಡನ್ನು ಬೆನ್ನಟ್ಟುವ ವೇಳೆ ನೋವಿನಿಂದ ಬಳಲುತ್ತಿರುವುದು ಕಂಡು ಬಂತು. ಬಳಿಕ ಕುಂಟುತ್ತಲೇ ಮೈದಾನದಿಂದ ಹೊರನಡೆದರು. ಜೋಫ್ರಾ ಆರ್ಚರ್ ಅವರ ಎಸೆತವನ್ನು ಇಶಾನ್ ಕಿಶನ್ ಕವರ್ಸ್ ಕಡೆಗೆ ಹೊಡೆದರು. ಮೂರನೇ ಓವರ್‌ನ ಕೊನೆಯ ಎಸೆತದ ವೇಳೆ, ವೈಭವ್ ಚೆಂಡನ್ನು ತಡೆಯಲು ಓಡಿದರಾದರೂ, ತಡೆಯಲು ಸಾಧಅಯವಾಗಲಿಲ್ಲ. ತಕ್ಷಣವೇ ಅವರು ಅಸ್ವಸ್ಥತೆಯಿಂದ ಕೆಳಗೆ ಬಿದ್ದರು ಮತ್ತು ಫಿಜಿಯೋಗಳು ಆಗಮಿಸಿ ಅವರನ್ನು ಗಮನಿಸಿದರು.
ಮತ್ತೆ ಎದ್ದು ನಿಂತರೂ ಅವರು ಕಂಫರ್ಟ್ ಆಗಿರುವಂತೆ ಕಾಣಲಿಲ್ಲ. ವಾಸ್ತವವಾಗಿ, ಅವರಿಗೆ ಮೈದಾನದಿಂದ ಹೊರ ನಡೆಯಲು ಕೂಡ ಬೆಂಬಲ ಬೇಕಿತ್ತು. ಕುಂಟುತ್ತಲೇ ಅವರು ಅಂತಿಮವಾಗಿ ಮೈದಾನದಿಂದ ಹೊರನಡೆದರು. ಜೈಪುರದ ಬಿಸಿಲಿನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 14 ಓವರ್‌ಗಳ ಕಾಲ ಬ್ಯಾಟಿಂಗ್ ಮಾಡಿದ ಅವರು, ದೇಹದಲ್ಲಿ ನೀರಿನ ಕೊರತೆಯನ್ನು ಅನುಭವಿಸಿರಬಹುದು. ಇದರಿಂದಾಗಿಯೇ ಅವರು ಮೈದಾನದಿಂದ ಹೊರನಡೆಯುವಂತಾಯಿತು.
ಪಂದ್ಯದ ನಂತರ ಬ್ಯಾಟಿಂಗ್ ತರಬೇತುದಾರ ವಿಕ್ರಮ್ ರಾಥೋರ್, 'ಅವರ ಮಂಡಿರಜ್ಜುಗಳಲ್ಲಿ ನೋವು ಕಾಣಿಸಿದೆ. ಆದರೆ, ಈಗ ಅವರು ಚೆನ್ನಾಗಿ ಕಾಣುತ್ತಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗಿದೆ. ಆದ್ದರಿಂದ ಅವರು ಚೆನ್ನಾಗಿ ಕಾಣುತ್ತಿದ್ದಾರೆ. ನಾಳೆ ಅವರ ಸ್ಥಿತಿ ಬಗ್ಗೆ ನಮಗೆ ಸ್ಪಷ್ಟ ಚಿತ್ರಣ ತಿಳಿಯುತ್ತದೆ. ಸದ್ಯ ಯಾವುದೇ ಗಂಭೀರ ಪರಿಸ್ಥಿತಿಯಿಲ್ಲ' ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
Advertisement