

ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರನ್ನು ಕೃತಕ ಬುದ್ಧಿಮತ್ತೆ(AI)ಗೆ ಹೋಲಿಸಿದ ಹೇಳಿಕೆ ಈಗ ಕ್ರಿಕೆಟ್ ಅಭಿಮಾನಿಗಳಲ್ಲಿ ಹಾಸ್ಯ ಮತ್ತು ಅಚ್ಚರಿಗೆ ಕಾರಣವಾಗಿದೆ.
ಈ ಹಾಸ್ಯಮಯ ನಿರೂಪಣೆಯನ್ನು ಮೊದಲು ಪಾಕಿಸ್ತಾನ ಕ್ರಿಕೆಟ್ ವಿಶ್ಲೇಷಕ ನೌಮನ್ ನಿಯಾಜ್ ಹುಟ್ಟುಹಾಕಿದರು. ಐಪಿಎಲ್ ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿರುವ ರಾಜಸ್ತಾನ ತಂಡದ ಬ್ಯಾಟರ್ ವೈಭವ್ ಸೂರ್ಯವಂಶಿ ಬ್ಯಾಟ್ ನಲ್ಲಿ AI ಚಿಪ್ ಇದ್ದು, ಅದರಿಂದ ಅವರು ಅಂತಹ ಬೃಹತ್ ಸಿಕ್ಸರ್‌ಗಳನ್ನು ಹೊಡೆಯಲು ಸಾಧ್ಯವಾಯಿತು ಎಂದು ತಮಾಷೆಯಾಗಿ ಹೇಳಿದ್ದಾರೆ.
ಈ ಹೇಳಿಕೆ ಪ್ರತಿಕ್ರಿಯಿಸಿದ ಸೂರ್ಯವಂಶಿ, "ಚಿಪ್" ಅನ್ನು ದೇವರು ಕೊಟ್ಟಿದ್ದಾನೆ. ನಾನು ನನಗೆ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದೇನೆ ಎಂದು ತಿರುಗೇಟು ನೀಡಿದ್ದರು.
"For the Love of Cricket" ಪಾಡ್‌ಕ್ಯಾಸ್ಟ್‌ನಲ್ಲಿ ಇಂಗ್ಲೆಂಡ್‌ನ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ಅವರೊಂದಿಗೆ ಮಾತನಾಡಿದ ಗುಜರಾತ್ ಟೈಟಾನ್ಸ್ ಆಟಗಾರ ಜೋಸ್ ಬಟ್ಲರ್, ರಾಜಸ್ಥಾನ್ ರಾಯಲ್ಸ್ ವೇಗಿ ಜೋಫ್ರಾ ಆರ್ಚರ್‌ಗೆ, ಸೂರ್ಯವಂಶಿ "AI-ಸೃಷ್ಟಿಯೇ?" ಎಂದು ತಮಾಷೆಯಾಗಿ ಕೇಳಿದ್ದಾಗಿ ಬಹಿರಂಗಪಡಿಸಿದರು.
"ನಾನು ನಿಜವಾಗಿಯೂ ಜೋಫ್ರಾಗೆ ಸಂದೇಶ ಕಳುಹಿಸಿದ್ದೆ. 'ಅವರು AI- ಸಿಷ್ಟಿಯೇ? ಎಲಾನ್ ಮಸ್ಕ್ ಈ ಹದಿಹರೆಯದ ಬ್ಯಾಟಿಂಗ್ ಮಾಂತ್ರಿಕನನ್ನು ಸೃಷ್ಟಿಸಿದ್ದಾರೆಯೇ?' ಎಂದು ಕೇಳಿದೆ. ಆದರೆ ಇಲ್ಲ, ಅವರು ನಿಜವಾದ ಆಟಗಾರ. ಮತ್ತು ಅವರು ನೋಡಲು ಅದ್ಭುತ. ಅವರು ಗಂಭೀರವಾಗಿ, ರೋಮಾಂಚಕಾರಿ ಆಟಗಾರರಾಗುತ್ತಿದ್ದಾರೆ. ಈ ಬೇಸಿಗೆಯಲ್ಲಿ ನಾವು ಅವರನ್ನು ಇಂಗ್ಲೆಂಡ್‌ನಲ್ಲಿ ನೋಡುವ ಉತ್ತಮ ಅವಕಾಶವಿದೆ ಎಂದು ಆರ್ಚರ್" ಹೇಳಿರುವುದಾಗಿ ಬಟ್ಲರ್ ತಿಳಿಸಿದ್ದಾರೆ.
ಸೂರ್ಯವಂಶಿ ಐಪಿಎಲ್ 2025 ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ತಮ್ಮ ಚೊಚ್ಚಲ ಶತಕವನ್ನು ಬಾರಿಸುವ ಮೂಲಕ ಸುದ್ದಿ ಮಾಡಿದರು. ಅದರ ನಂತರ ಅವರು ಈ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮತ್ತೊಂದು ಶತಕ ಬಾರಿಸಿದರು.
Advertisement