

ಡಾರ್ವಿನ್: ಬಾಂಗ್ಲಾದೇಶದ ಯುವ ಬ್ಯಾಟರ್ ತಾಂಜಿದ್ ಹಸನ್ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೇ ಅಮೋಘ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದು, ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಶತಕ ಬಾರಿಸಿದ ಬಾಂಗ್ಲಾದೇಶದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ಶುಕ್ರವಾರ ಡಾರ್ವಿನ್‌ನ ಮಾರಾ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿದ್ದು, 2026ರ ಆಗಸ್ಟ್ 14 ಬಾಂಗ್ಲಾದೇಶ ಕ್ರಿಕೆಟ್ ಇತಿಹಾಸದಲ್ಲಿ ಎಂದೆಂದಿಗೂ ಸ್ಮರಣೀಯ ದಿನವಾಗಿ ಉಳಿಯಲಿದೆ.
ಆಸ್ಟ್ರೇಲಿಯಾ ನೆಲದಲ್ಲಿ ಬಾಂಗ್ಲಾದೇಶದ ಪರ ಟೆಸ್ಟ್ ಶತಕ ಬಾರಿಸಿದ ಮೊದಲ ಬ್ಯಾಟರ್ ಎಂಬ ಐತಿಹಾಸಿಕ ಸಾಧನೆಯನ್ನು ತಾಂಜಿದ್ ತಮ್ಮದಾಗಿಸಿಕೊಂಡಿದ್ದಾರೆ. ಕೇವಲ ಎರಡನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ 25 ವರ್ಷದ ತಾಂಜಿದ್, ಉತ್ತರ ಆಸ್ಟ್ರೇಲಿಯಾದ ರಾಜಧಾನಿ ಡಾರ್ವಿನ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಆಸೀಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು.
ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಗೆಲುವಿನ ಕನಸು ಕಾಣುತ್ತಿರುವ ಬಾಂಗ್ಲಾದೇಶಕ್ಕೆ ತಾಂಜಿದ್ ಅವರ ಶತಕ ಭಾರಿ ಆತ್ಮವಿಶ್ವಾಸ ನೀಡಿದೆ. ತಾಂಜಿದ್ 62 ರನ್ ಗಳಿಸಿದ್ದ ವೇಳೆ ನಾಥನ್ ಲಿಯಾನ್ ಎಸೆತದಲ್ಲಿ ಚೆಂಡನ್ನು ಎಡ್ಜ್ ಮಾಡಿದರು. ಅದು ಮೊದಲ ಸ್ಲಿಪ್‌ನತ್ತ ಹಾರಿದರೂ, ಸಾಮಾನ್ಯವಾಗಿ ಅತ್ಯುತ್ತಮ ಕ್ಯಾಚ್‌ಗಳಿಗೆ ಹೆಸರಾಗಿರುವ ಸ್ಟೀವ್ ಸ್ಮಿತ್ ಆ ಕಠಿಣ ಅವಕಾಶವನ್ನು ಕೈಚೆಲ್ಲಿದರು. ಇದರಿಂದ ತಾಂಜಿದ್‌ಗೆ ಮತ್ತೊಂದು ಅವಕಾಶ ದೊರೆಯಿತು.
ಶತಕ ಸಿಡಿಸಿ ವಿಕೆಟ್
2ನೇ ಸೆಷನ್‌ನ ಮಧ್ಯಭಾಗದಲ್ಲಿ ನಾಥನ್ ಲಿಯಾನ್ ಎಸೆತವನ್ನು ಮಿಡ್-ಆಫ್ ಮೂಲಕ ತಳ್ಳಿದ ತಾಂಜಿದ್ ಶತಕ ಪೂರೈಸಿದರು. 188 ಎಸೆತಗಳಲ್ಲಿ ಶತಕ ಪೂರೈಸಿದ ತಾಂಜಿದ್, ತಮ್ಮ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ ಲಿಯಾನ್ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿದರು. ಆದರೆ ಶತಕ ಪೂರೈಸಿದ ಕೆಲವೇ ಹೊತ್ತಿನಲ್ಲಿ ಮತ್ತೊಂದು ದೊಡ್ಡ ಹೊಡೆತಕ್ಕೆ ಮುಂದಾದ ತಾಂಜಿದ್ ವಿಕೆಟ್ ಕಳೆದುಕೊಂಡರು. ಲಿಯಾನ್ ಎಸೆತವನ್ನು ಮೈದಾನದ ಹೊರಗೆ ಅಟ್ಟಲು ಯತ್ನಿಸಿದ ಅವರು, ಡೀಪ್ ಮಿಡ್-ಆಫ್‌ನಲ್ಲಿ ನಿಂತಿದ್ದ ಮಿಚೆಲ್ ಸ್ಟಾರ್ಕ್‌ಗೆ ಕ್ಯಾಚ್ ನೀಡಿದರು.
ತಾಂಜಿದ್ ಶತಕ ಪೂರೈಸುತ್ತಿದ್ದಂತೆ ಇಡೀ ಬಾಂಗ್ಲಾದೇಶ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಸಂಭ್ರಮ ಮುಗಿಲುಮುಟ್ಟಿತು. ಮೊದಲ ದಿನದ ಆಟದಲ್ಲಿ ಬಾಂಗ್ಲಾದೇಶದ ಬೌಲರ್‌ಗಳು ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಕೇವಲ 198 ರನ್‌ಗಳಿಗೆ ಆಲೌಟ್ ಮಾಡಿದ್ದರಿಂದ, ಎರಡನೇ ದಿನ ಬೆಳಗ್ಗೆ ಉತ್ತಮ ಆರಂಭ ಪಡೆಯುವ ನಿರೀಕ್ಷೆಯಲ್ಲಿತ್ತು.
ತಾಂಜಿದ್ ಮತ್ತು ಮೊಮಿನುಲ್ ಹಕ್ ಆ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಮೊದಲ ದಿನದ ಅಂತ್ಯಕ್ಕೆ 1 ವಿಕೆಟ್‌ಗೆ 96 ರನ್ ಗಳಿಸಿದ್ದ ಬಾಂಗ್ಲಾದೇಶ, ಎರಡನೇ ದಿನದ ಆರಂಭದಲ್ಲೂ ಮೊದಲ ಒಂದು ಗಂಟೆ ಅತ್ಯಂತ ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಮಾಡಿತು.
ಗುರುವಾರದ ಹೋಲಿಕೆಯಲ್ಲಿ ಆಸ್ಟ್ರೇಲಿಯಾದ ಬೌಲರ್‌ಗಳು ಹೆಚ್ಚು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿದರೂ, ಬಾಂಗ್ಲಾದೇಶದ ಇಬ್ಬರು ಬ್ಯಾಟರ್‌ಗಳು ತಾಳ್ಮೆಯ ಆಟವಾಡಿದರು. ಸಿಂಗಲ್ಸ್ ಸಿಕ್ಕಾಗ ರನ್ ಕಲೆಹಾಕುತ್ತಾ, ಅಪರೂಪಕ್ಕೆ ಸಿಗುತ್ತಿದ್ದ ಕೆಟ್ಟ ಎಸೆತಗಳನ್ನು ಮಾತ್ರ ಬೌಂಡರಿಗೆ ಅಟ್ಟಿದರು. ಡ್ರಿಂಕ್ಸ್ ಬ್ರೇಕ್‌ಗೂ ಮುನ್ನ ತಾಂಜಿದ್ ಅರ್ಧಶತಕ ಪೂರೈಸಿದರು. ಅವರು 102 ಎಸೆತಗಳಲ್ಲಿ 50 ರನ್ ಗಳಿಸಿದರು.
ಬಾಂಗ್ಲಾ ಹೋರಾಟ
ಮೊಮಿನುಲ್ ಹಕ್ ಕೂಡ ಅರ್ಧಶತಕದತ್ತ ಸಾಗುತ್ತಿರುವಂತೆ ಕಂಡುಬಂದರು. ಆದರೆ 49 ರನ್ ಗಳಿಸಿದ್ದಾಗ ಜೋಶ್ ಹೇಜಲ್‌ವುಡ್ ಎಸೆತವನ್ನು ಆಫ್-ಸೈಡ್‌ನಲ್ಲಿ ಬೌಂಡರಿಗೆ ಅಟ್ಟಲು ಯತ್ನಿಸಿದರು. ಚೆಂಡು ಬ್ಯಾಟ್‌ನ ಅಂಚಿಗೆ ತಾಗಿ ವಿಕೆಟ್‌ಕೀಪರ್ ಅಲೆಕ್ಸ್ ಕ್ಯಾರಿ ಕೈ ಸೇರಿತು.
ತಾಂಜಿದ್ ಮತ್ತು ಮೊಮಿನುಲ್ ನಡುವೆ 102 ರನ್‌ಗಳ ಜೊತೆಯಾಟ ಮೂಡಿತ್ತು. ಈ ಜೋಡಿ ಬಾಂಗ್ಲಾದೇಶದ ಮೊತ್ತವನ್ನು 2 ವಿಕೆಟ್‌ಗೆ 138 ರನ್‌ಗಳಿಗೆ ಕೊಂಡೊಯ್ದಿತು. ಆಗ ಬಾಂಗ್ಲಾದೇಶ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ಮೊತ್ತಕ್ಕಿಂತ 60 ರನ್ ಹಿಂದಿತ್ತು. ನಂತರ ನಾಯಕ ನಜ್ಮುಲ್ ಹಸನ್ ಶಾಂಟೊ ಕ್ರೀಸ್‌ಗೆ ಆಗಮಿಸಿ ತಾಂಜಿದ್ ಜೊತೆಗೂಡಿದರು. ದಣಿಯುತ್ತಿದ್ದ ಆಸ್ಟ್ರೇಲಿಯಾ ಬೌಲರ್‌ಗಳ ವಿರುದ್ಧ ಶಾಂಟೊ ರನ್ ವೇಗವನ್ನು ತಕ್ಷಣವೇ ಹೆಚ್ಚಿಸಿದರು.
ತಾಂಜಿದ್ ಔಟಾದ ಬಳಿಕ ನಾಯಕ ಶಾಂಟೊಗೆ ಮುಶ್ಫಿಕರ್ ರಹೀಂ ಸಾಥ್ ನೀಡಿದರು. ಇವರಿಬ್ಬರು ಕ್ರೀಸ್‌ಗೆ ಬಂದ ಬಳಿಕ ಬಾಂಗ್ಲಾದೇಶದ ರನ್ ಗಳಿಕೆಯ ವೇಗ ಮತ್ತಷ್ಟು ಹೆಚ್ಚಾಯಿತು.