‘ಅರ್ಧ ಮಿಲಿಯನ್ ಪೌಂಡ್’.. 'ಮೊದಲ ದಿನವೇ ಸೋಲಿಗೆ ಅಡಿಪಾಯ': ಬಾಂಗ್ಲಾ ವಿರುದ್ಧ ಆಘಾತಕಾರಿ ಸೋಲಿನ ಬಗ್ಗೆ Pat Cummins ಅಚ್ಚರಿ ಹೇಳಿಕೆ!

ಬಾಂಗ್ಲಾದೇಶ ಆಟಗಾರರು ಪಂದ್ಯದ ಎಲ್ಲಾ ವಿಭಾಗಗಳಲ್ಲೂ ನಮಗಿಂತ ಅತ್ಯುತ್ತಮ ಪ್ರದರ್ಶನ ನೀಡಿದರು. ಅವರು ತೋರಿದ ತಾಳ್ಮೆ ಮತ್ತು ಶಿಸ್ತು ಅದ್ಭುತವಾಗಿತ್ತು..
Pat Cummins
ಪ್ಯಾಟ್ ಕಮಿನ್ಸ್
Updated on

ಡಾರ್ವಿನ್: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಸೋಲಿನ ಬೆನ್ನಲ್ಲೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸೋಲಿನ ಬಗ್ಗೆ ಮಾತನಾಡಿದ್ದು, ಮೊದಲ ದಿನವೇ ಸೋಲಿಗೆ ಅಡಿಪಾಯ ಬಿದ್ದಿತ್ತು ಎಂಬ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಡಾರ್ವಿನ್​ನ ಮರಾರಾ ಓವಲ್ ಮೈದಾನದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 9 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದೆ. ಆಸ್ಟ್ರೇಲಿಯಾ ನೀಡಿದ್ದ 57 ರನ್ ಗಳ ಅಲ್ಪ ಗುರಿಯನ್ನು ಬಾಂಗ್ಲಾದೇಶ ಕೇವಲ 1 ವಿಕೆಟ್ ಕಳೆದುಕೊಂಡು ಗುರಿಮುಟ್ಟಿತು.

ಆ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ ಬಾಂಗ್ಲಾದೇಶ ತನ್ನ ಮೊದಲ ಟೆಸ್ಟ್ ಜಯವನ್ನು ಸಂಭ್ರಮಿಸಿತು. ಇನ್ನು ಈ ಪಂದ್ಯ ಬಳಿಕ ಮಾತನಾಡಿದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್, ಪಂದ್ಯದ ಮೊದಲ ದಿನವೇ ತಮ್ಮ ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.

Pat Cummins
1st Test: ಆಸಿಸ್ ನೆಲದಲ್ಲೇ ಕಾಂಗರೂಗಳ ಬಗ್ಗು ಬಡಿದು ಇತಿಹಾಸ ಬರೆದ ಬಾಂಗ್ಲಾದೇಶ

'ಪಂದ್ಯದ ಮೊದಲ ದಿನವೇ ನಾವು ಹಿನ್ನಡೆ ಅನುಭವಿಸಿದೆವು. ಪಂದ್ಯಕ್ಕೆ ನಮ್ಮ ಸಿದ್ಧತೆಗಳು ಅತ್ಯುತ್ತಮವಾಗಿದ್ದವು. ಆದ್ದರಿಂದ ಸೋಲಿಗೆ ಯಾವುದೇ ನೆಪಗಳನ್ನು ಹೇಳಲು ಬಯಸುವುದಿಲ್ಲ. ಬಾಂಗ್ಲಾದೇಶ್ ಅತ್ಯುತ್ತಮವಾಗಿ ಆಡಿತು. ಮೊದಲ ದಿನ ಪಿಚ್‌ನಲ್ಲಿ ಬೌಲರ್‌ಗಳಿಗೆ ಕೊಂಚ ನೆರವಿತ್ತು ನಿಜ, ಆದರೆ ನಮ್ಮ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯುವ ದಾರಿ ಹುಡುಕಬೇಕಿತ್ತು. ಬಳಿಕ ನಮಗೂ ಬೌಲಿಂಗ್‌ನಲ್ಲಿ ಎದುರಾಳಿಗಳನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಬಾಂಗ್ಲಾದೇಶ ತಂಡದ ಶಿಸ್ತಿನ ಆಟಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವ ಅವರು, 'ಬಾಂಗ್ಲಾದೇಶ ಆಟಗಾರರು ಪಂದ್ಯದ ಎಲ್ಲಾ ವಿಭಾಗಗಳಲ್ಲೂ ನಮಗಿಂತ ಅತ್ಯುತ್ತಮ ಪ್ರದರ್ಶನ ನೀಡಿದರು. ಅವರು ತೋರಿದ ತಾಳ್ಮೆ ಮತ್ತು ಶಿಸ್ತು ಅದ್ಭುತವಾಗಿತ್ತು. ಒಮ್ಮೆ ನಾವು ಪಂದ್ಯದಲ್ಲಿ ಹಿಂದೆ ಬಿದ್ದ ನಂತರ, ಮರಳಿ ಕಮ್‌ಬ್ಯಾಕ್ ಮಾಡುವುದು ನಮಗೆ ತುಂಬಾ ಕಷ್ಟವಾಯಿತು' ಎಂದು ಹೇಳಿದರು.

Pat Cummins
ಆಸಿಸ್ ವಿರುದ್ಧ ಭರ್ಜರಿ ಜಯ, WTC Final Raceನಲ್ಲಿ 4ನೇ ಸ್ಥಾನಕ್ಕೆ ಜಿಗಿದ ಬಾಂಗ್ಲಾದೇಶ, ಭಾರತದ ಪರಿಸ್ಥಿತಿ ಏನು?

ಪಂದ್ಯಕ್ಕೂ ಮುನ್ನ ನೀಡಿದ್ದ ಹೇಳಿಕೆ ವೈರಲ್

ಏತನ್ಮಧ್ಯೆ ಈ ಪಂದ್ಯಕ್ಕೂ ಮುನ್ನ ಇದೇ ಪ್ಯಾಟ್ ಕಮಿನ್ಸ್ ಬಾಂಗ್ಲಾದೇಶ ಕುರಿತು ನೀಡಿದ್ದ ಹೇಳಿಕೆಯೊಂದು ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಈ ವರ್ಷದ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ಸರಣಿಗೆ ಉತ್ತಮವಾಗಿ ಸಿದ್ಧತೆ ನಡೆಸಲು ತಮ್ಮ ಸಹ ಆಟಗಾರರು ಲಾಭದಾಯಕ ‘ದಿ ಹಂಡ್ರೆಡ್’ ಒಪ್ಪಂದಗಳನ್ನು ತ್ಯಜಿಸುತ್ತಿರುವುದನ್ನು ಕಮಿನ್ಸ್ ಉಲ್ಲೇಖಿಸಿದ್ದರು.

“ನಮ್ಮ ಕೆಲವು ಆಟಗಾರರು 20 ದಿನಗಳ ಕೆಲಸಕ್ಕಾಗಿ ಸಿಗಬಹುದಾದ ಅರ್ಧ ಮಿಲಿಯನ್ ಪೌಂಡ್‌ಗಳನ್ನೇ ನಿರಾಕರಿಸಿ, ಬಾಂಗ್ಲಾದೇಶ ವಿರುದ್ಧದ ಆ ಎರಡು ಟೆಸ್ಟ್ ಪಂದ್ಯಗಳನ್ನು ಆಡಲು ಮುಂದಾಗುತ್ತಿದ್ದಾರೆ” ಎಂದು ಪ್ಯಾಟ್ ಕಮಿನ್ಸ್ ಹೇಳಿದ್ದರು. ಅವರ ಇದೇ ಹೇಳಿಕೆ ವೈರಲ್ ಆಗುತ್ತಲೇ ಈ ಬಗ್ಗೆಯೂ ಉತ್ತರಿಸಿರುವ ಕಮಿನ್ಸ್ 'ತಮ್ಮ ತಂಡದ ಸಿದ್ಧತೆಯಲ್ಲಿ ತಮಗೆ ಯಾವುದೇ ದೂರುಗಳಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.

“ಬಹುಶಃ ಮೊದಲ ದಿನವೇ. ನಮ್ಮ ಸಿದ್ಧತೆ ಬಹುತೇಕ ಪರಿಪೂರ್ಣವಾಗಿತ್ತು ಎಂದು ನಾನು ಭಾವಿಸಿದ್ದೆ. ಅದು ಅತ್ಯುತ್ತಮವಾಗಿತ್ತು. ಹಾಗಾಗಿ ಯಾವುದೇ ನೆಪಗಳಿಲ್ಲ. ಅವರು ತುಂಬಾ ಚೆನ್ನಾಗಿ ಆಡಿದರು. ಮೊದಲ ದಿನದ ಪಿಚ್ ಆರಂಭದಲ್ಲಿ ಸ್ವಲ್ಪ ನೆರವು ನೀಡುತ್ತಿತ್ತು ಎಂದು ನನಗೆ ಅನಿಸಿತು. ಆದರೆ ನಾವು ಆಡಿದಷ್ಟು ಕಡಿಮೆ ಅವಧಿಗಿಂತ ಸ್ವಲ್ಪ ಹೆಚ್ಚು ಕಾಲ ಬ್ಯಾಟಿಂಗ್ ಮಾಡಲು ಮಾರ್ಗ ಕಂಡುಕೊಳ್ಳಬೇಕಿತ್ತು. ನಂತರ ಬೌಲಿಂಗ್‌ನಲ್ಲೂ ನಾವು ಅವರ ಮೇಲೆ ಸಾಕಷ್ಟು ಒತ್ತಡ ಹೇರಲು ಸಾಧ್ಯವಾಗಲಿಲ್ಲ. ಆದರೆ ಅವರು ತುಂಬಾ ಚೆನ್ನಾಗಿ ಆಡಿದರು” ಎಂದು ಅವರು ಹೇಳಿದ್ದಾರೆ.

ತಂಡದಲ್ಲಿ ಬದಲಾವಣೆ

ಎರಡನೇ ಟೆಸ್ಟ್‌ನಲ್ಲಿ ಆಟಗಾರರ ಬದಲಾವಣೆ ಕಾಣಬಹುದೇ ಎಂದು ಕೇಳಿದಾಗ, ಪ್ರಮುಖ ಬದಲಾವಣೆಗಳನ್ನು ಮಾಡುವ ಸಾಧ್ಯತೆಯನ್ನು ಅವರು ತಳ್ಳಿಹಾಕಲಿಲ್ಲ. ಆದರೆ ಈ ಬಗ್ಗೆ ತಕ್ಷಣದ ನಿರ್ಧಾರಕ್ಕೆ ಬದಲಾಗಿ, ನಡೆದದ್ದನ್ನು ವಿಶ್ಲೇಷಿಸಲು ತಂಡಕ್ಕೆ ಸ್ವಲ್ಪ ಸಮಯ ಬೇಕಿದೆ ಎಂದು ಕಮಿನ್ಸ್ ಹೇಳಿದರು.

“ಈ ರೀತಿಯ ಪಂದ್ಯ ನಡೆದಾಗಲೆಲ್ಲಾ, ಮುಂದಿನ ಪಂದ್ಯಕ್ಕೆ ತಂಡದ ಸಂಯೋಜನೆ ಮತ್ತು ಆಟಗಾರರ ಹೊಂದಾಣಿಕೆಗಳ ಬಗ್ಗೆ ನಾವು ಯೋಚಿಸುತ್ತೇವೆ. ಆದರೆ ಪಂದ್ಯ ಈಗಷ್ಟೇ ಮುಗಿದಿದೆ. ಹಾಗಾಗಿ ಈ ಬಗ್ಗೆ ಯೋಚಿಸುತ್ತೇವೆ. ನಾವು ಸೋಲಿನಿಂದ ಉತ್ತಮವಾಗಿ ಪುಟಿದೇಳುವ ತಂಡ. ಹೀಗಾಗಿ ಬ್ಯಾಟರ್‌ಗಳು ಸೇರಿದಂತೆ ಪ್ರತಿಯೊಂದು ವಿಭಾಗವೂ ಒಟ್ಟಾಗಿ ಕುಳಿತು ಈ ಪಂದ್ಯದ ಬಗ್ಗೆ ಹಾಗೂ ಎಲ್ಲಿ ಸುಧಾರಿಸಬಹುದು ಎಂಬುದರ ಬಗ್ಗೆ ಚರ್ಚೆ ನಡೆಸಲಿದೆ” ಎಂದು ಆಸ್ಟ್ರೇಲಿಯಾ ನಾಯಕ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com