ಆಸಿಸ್ ವಿರುದ್ಧ ಟೆಸ್ಟ್ ಕ್ರಿಕೆಟ್ ಜರ್ನಿ ಆರಂಭಿಸಿದ ನೆಲದಲ್ಲೇ 23 ವರ್ಷಗಳ ಬಳಿಕ ಬಾಂಗ್ಲಾದೇಶ ಐತಿಹಾಸಿಕ ವಿಜಯ

23 ವರ್ಷಗಳ ಹಿಂದೆ ಆಸ್ಟ್ರೇಲಿಯಾ ವಿರುದ್ಧ ತನ್ನ ಟೆಸ್ಟ್ ಪಯಣ ಆರಂಭಿಸಿದ್ದ ಡಾರ್ವಿನ್‌ನಲ್ಲೇ ಬಾಂಗ್ಲಾದೇಶ ಇದೀಗ ಯಾರೂ ಊಹಿಸದಂತಹ ಐತಿಹಾಸಿಕ ಸಾಧನೆ ಮಾಡಿದೆ.
Bangladesh began their Test journey against Australia
ಆಸ್ಟ್ರೇಲಿಯಾ ವಿರುದ್ದ ಬಾಂಗ್ಲಾದೇಶ ಐತಿಹಾಸಿಕ ಜಯ
Updated on

ಡಾರ್ವಿನ್: ಬಾಂಗ್ಲಾದೇಶ ಜಾಗತಿಕ ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತನ್ನ ಟೆಸ್ಟ್ ಕ್ರಿಕೆಟ್ ಜರ್ನಿ ಆರಂಭಿಸಿದ್ದ ಮೈದಾನದಲ್ಲೇ ಪ್ರಬಲ ಆಸಿಸ್ ತಂಡವನ್ನು ತವರಿನಲ್ಲೇ ಮಣಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

ಹೌದು.. ತೀವ್ರ ಕುತೂಹಲ ಕೆರಳಿಸಿದ್ದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಭರ್ಜರಿ ಜಯ ಸಾಧಿಸುವುದರೊಂದಿಗೆ ಐತಿಹಾಸಿಕ ಸಾಧನೆ ಮಾಡಿದೆ. 23 ವರ್ಷಗಳ ಹಿಂದೆ ಆಸ್ಟ್ರೇಲಿಯಾ ವಿರುದ್ಧ ತನ್ನ ಟೆಸ್ಟ್ ಪಯಣ ಆರಂಭಿಸಿದ್ದ ಡಾರ್ವಿನ್‌ನಲ್ಲೇ ಬಾಂಗ್ಲಾದೇಶ ಇದೀಗ ಯಾರೂ ಊಹಿಸದಂತಹ ಐತಿಹಾಸಿಕ ಸಾಧನೆ ಮಾಡಿದೆ.

ಪ್ಯಾಟ್ ಕಮಿನ್ಸ್ ನೇತೃತ್ವದ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸರಣಿಯ ಮೊದಲ ಟೆಸ್ಟ್‌ನಲ್ಲಿ 9 ವಿಕೆಟ್‌ಗಳಿಂದ ಮಣಿಸಿದ ಬಾಂಗ್ಲಾದೇಶ, ಆ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಮೊದಲ ಗೆಲುವು ದಾಖಲಿಸಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾವನ್ನು ಕೇವಲ 198 ರನ್‌ಗಳಿಗೆ ಆಲೌಟ್ ಮಾಡಿದ್ದ ಬಾಂಗ್ಲಾದೇಶ ಪಂದ್ಯದುದ್ದಕ್ಕೂ ಮೇಲುಗೈ ಸಾಧಿಸಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾವನ್ನು 284 ರನ್‌ಗಳಿಗೆ ಕಟ್ಟಿಹಾಕಿದ ಪ್ರವಾಸಿ ತಂಡಕ್ಕೆ ಗೆಲುವಿಗಾಗಿ ಕೇವಲ 57 ರನ್‌ಗಳ ಗುರಿ ಎದುರಾಯಿತು. ನಾಲ್ಕನೇ ದಿನದ ಎರಡನೇ ಅವಧಿಯಲ್ಲಿ ಬಾಂಗ್ಲಾದೇಶ ಯಾವುದೇ ಒತ್ತಡಕ್ಕೆ ಒಳಗಾಗದೆ ಗುರಿಯನ್ನು ಕೇವಲ ಒಂದು ವಿಕೆಟ್ ಕಳೆದುಕೊಂಡು ಬೆನ್ನಟ್ಟಿ ಐತಿಹಾಸಿಕ ಗೆಲುವು ಸಾಧಿಸಿತು.

Bangladesh began their Test journey against Australia
1st Test: ಆಸಿಸ್ ನೆಲದಲ್ಲೇ ಕಾಂಗರೂಗಳ ಬಗ್ಗು ಬಡಿದು ಇತಿಹಾಸ ಬರೆದ ಬಾಂಗ್ಲಾದೇಶ

ನಿರಂತರ ಸೋಲಿನಿಂದ ಐತಿಹಾಸಿಕ ಜಯ

ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟ ಆರಂಭಿಕ ದಿನಗಳಲ್ಲಿ ನಿರಂತರ ಸೋಲುಗಳಿಂದ ಕಂಗೆಟ್ಟಿದ್ದ ಬಾಂಗ್ಲಾದೇಶ, ಕಳೆದ ಎರಡೂವರೆ ದಶಕಗಳಲ್ಲಿ ಹಂತ ಹಂತವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. 2000ರಲ್ಲಿ ಟೆಸ್ಟ್ ಮಾನ್ಯತೆ ಪಡೆದಿದ್ದ ತಂಡ ಇದೀಗ ಆಸ್ಟ್ರೇಲಿಯಾದ ನೆಲದಲ್ಲೇ ಬಲಿಷ್ಠ ಆಸೀಸ್ ಪಡೆಯನ್ನು 9 ವಿಕೆಟ್‌ಗಳಿಂದ ಮಣಿಸಿ ತನ್ನ ಟೆಸ್ಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ.

2000ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ

ಬಾಂಗ್ಲಾದೇಶಕ್ಕೆ 2000ರ ಜೂನ್ 26ರಂದು ಐಸಿಸಿ ಟೆಸ್ಟ್ ಮಾನ್ಯತೆ ನೀಡಿತು. ಆ ಮೂಲಕ ಟೆಸ್ಟ್ ಆಡುವ 10ನೇ ದೇಶವಾಗಿ ಅದು ಇತಿಹಾಸ ನಿರ್ಮಿಸಿತು. ಅದೇ ವರ್ಷದ ನವೆಂಬರ್‌ನಲ್ಲಿ ಢಾಕಾದಲ್ಲಿ ಭಾರತ ವಿರುದ್ಧ ತನ್ನ ಚೊಚ್ಚಲ ಟೆಸ್ಟ್ ಪಂದ್ಯ ಆಡಿತು. ನೈಮೂರ್ ರಹಮಾನ್ ನಾಯಕತ್ವದ ಬಾಂಗ್ಲಾದೇಶ ಆ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಸೋತರೂ, ಅಮಿನುಲ್ ಇಸ್ಲಾಂ ಬುಲ್ಬುಲ್ ಅವರ 145 ರನ್‌ಗಳ ಶತಕ ಮತ್ತು ನೈಮೂರ್ ರಹಮಾನ್ ಅವರ 6 ವಿಕೆಟ್‌ಗಳ ಸಾಧನೆ ತಂಡದ ಭವಿಷ್ಯದ ಸಾಮರ್ಥ್ಯದ ಮುನ್ಸೂಚನೆ ನೀಡಿತ್ತು.

ಐದು ವರ್ಷಗಳ ಬಳಿಕ ಮೊದಲ ಟೆಸ್ಟ್ ಗೆಲುವು

ಚೊಚ್ಚಲ ಟೆಸ್ಟ್ ಗೆಲುವಿಗಾಗಿ ಬಾಂಗ್ಲಾದೇಶ ಬರೋಬ್ಬರಿ ಐದು ವರ್ಷ ಕಾಯಬೇಕಾಯಿತು. 34 ಟೆಸ್ಟ್ ಪಂದ್ಯಗಳ ಬಳಿಕ 2005ರ ಜನವರಿಯಲ್ಲಿ ಜಿಂಬಾಬ್ವೆ ವಿರುದ್ಧ ಚಟ್ಟೋಗ್ರಾಮ್‌ನಲ್ಲಿ ಬಾಂಗ್ಲಾದೇಶ ತನ್ನ ಮೊದಲ ಟೆಸ್ಟ್ ಜಯ ದಾಖಲಿಸಿತು. ಮೊಹಮ್ಮದ್ ರಫೀಕ್ ಅವರ 5 ವಿಕೆಟ್‌ಗಳ ಪ್ರದರ್ಶನ ಹಾಗೂ ಎನಾಮುಲ್ ಹಕ್ ಅವರ 6/45 ಬೌಲಿಂಗ್ ನೆರವಿನಿಂದ ಜಿಂಬಾಬ್ವೆಯನ್ನು ಸೋಲಿಸಿದ ಬಾಂಗ್ಲಾದೇಶ, ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಮೊದಲ ದೊಡ್ಡ ಹೆಜ್ಜೆ ಇಟ್ಟಿತು.

ವಿದೇಶಿ ನೆಲದಲ್ಲಿ ಮೊದಲ ಗೆಲುವು

2009ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಿಂಗ್ಸ್‌ಟೌನ್‌ನಲ್ಲಿ 95 ರನ್‌ಗಳ ಗೆಲುವು ಸಾಧಿಸುವ ಮೂಲಕ ಬಾಂಗ್ಲಾದೇಶ ವಿದೇಶಿ ನೆಲದಲ್ಲಿ ತನ್ನ ಮೊದಲ ಟೆಸ್ಟ್ ಜಯ ದಾಖಲಿಸಿತು. ಆ ಗೆಲುವಿನಲ್ಲಿ ಶಕೀಬ್ ಅಲ್ ಹಸನ್ ಮತ್ತು ಮಹಮುದುಲ್ಲಾ ಪ್ರಮುಖ ಪಾತ್ರ ವಹಿಸಿದ್ದರು.

ಇಂಗ್ಲೆಂಡ್, ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ ಗೆಲುವುಗಳು

2016ರಲ್ಲಿ ಢಾಕಾದಲ್ಲಿ ಇಂಗ್ಲೆಂಡ್ ವಿರುದ್ಧ 108 ರನ್‌ಗಳ ಜಯ ಸಾಧಿಸಿದ ಬಾಂಗ್ಲಾದೇಶ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿತು. ಯುವ ಸ್ಪಿನ್ನರ್ ಮೆಹಿದಿ ಹಸನ್ ಮಿರಾಜ್ ಪಂದ್ಯದಲ್ಲಿ 12 ವಿಕೆಟ್ ಪಡೆದು ತಂಡದ ಗೆಲುವಿನ ರೂವಾರಿಯಾದರು.

2017ರಲ್ಲಿ ಢಾಕಾದಲ್ಲೇ ಆಸ್ಟ್ರೇಲಿಯಾವನ್ನು 20 ರನ್‌ಗಳಿಂದ ಸೋಲಿಸುವ ಮೂಲಕ ಬಾಂಗ್ಲಾದೇಶ ಮೊದಲ ಬಾರಿಗೆ ಆಸೀಸ್ ವಿರುದ್ಧ ಟೆಸ್ಟ್ ಜಯ ಸಾಧಿಸಿತು. ಶಕೀಬ್ ಅಲ್ ಹಸನ್ ಅವರ ಆಲ್‌ರೌಂಡ್ ಪ್ರದರ್ಶನ ಈ ಗೆಲುವಿನ ಪ್ರಮುಖ ಕಾರಣವಾಗಿತ್ತು.

23 ವರ್ಷಗಳ ಬಳಿಕ ಆಸ್ಟ್ರೇಲಿಯಾದ ನೆಲದಲ್ಲಿ ‘ಅಸಾಧ್ಯ’ ಸಾಧನೆ!

2026ರ ಡಾರ್ವಿನ್ ಟೆಸ್ಟ್‌ನಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಬಾಂಗ್ಲಾದೇಶ 9 ವಿಕೆಟ್‌ಗಳಿಂದ ಮಣಿಸಿತು. ಇದು ಆಸ್ಟ್ರೇಲಿಯಾದ ನೆಲದಲ್ಲಿ ಬಾಂಗ್ಲಾದೇಶದ ಮೊದಲ ಟೆಸ್ಟ್ ಗೆಲುವು ಮಾತ್ರವಲ್ಲ, 2000ರಲ್ಲಿ ಟೆಸ್ಟ್ ಪಯಣ ಆರಂಭಿಸಿದ ತಂಡದ 26 ವರ್ಷಗಳ ಪ್ರಯಾಣದಲ್ಲಿ ಅತ್ಯಂತ ಸ್ಮರಣೀಯ ಗೆಲುವುಗಳಲ್ಲೊಂದಾಗಿದೆ.

Bangladesh began their Test journey against Australia
Darwin Test: 'ಈಗ ನೀವು ಬಾಂಗ್ಲಾದೇಶದಲ್ಲಿ ಇಲ್ಲ'; ಮಿಚೆಲ್ ಸ್ಟಾರ್ಕ್-ಮೆಹಿದಿ ಹಸನ್ ಮಿರಾಜ್ ನಡುವೆ ತೀವ್ರ ಮಾತಿನ ಚಕಮಕಿ; ರಣಾಂಗಣವಾದ ಕ್ರೀಡಾಂಗಣ! Video

26 ವರ್ಷಗಳ ಪ್ರಯಾಣಕ್ಕೆ ಐತಿಹಾಸಿಕ ಮುಕುಟ

ಭಾರತ ವಿರುದ್ಧದ 2000ರ ಚೊಚ್ಚಲ ಟೆಸ್ಟ್‌ನಲ್ಲಿ 9 ವಿಕೆಟ್‌ಗಳ ಸೋಲಿನಿಂದ ಆರಂಭವಾದ ಬಾಂಗ್ಲಾದೇಶದ ಟೆಸ್ಟ್ ಪಯಣ, ಜಿಂಬಾಬ್ವೆ ವಿರುದ್ಧದ ಮೊದಲ ಗೆಲುವು, ವೆಸ್ಟ್ ಇಂಡೀಸ್ ನೆಲದ ಮೊದಲ ಜಯ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ ವಿಜಯಗಳು, ನ್ಯೂಜಿಲೆಂಡ್ ನೆಲದ ಗೆಲುವು ಹಾಗೂ ಪಾಕಿಸ್ತಾನ ವಿರುದ್ಧದ ಸರಣಿ ಕ್ಲೀನ್ ಸ್ವೀಪ್‌ಗಳ ಮೂಲಕ ಬೆಳೆದಿದೆ.

ಈಗ ಆಸ್ಟ್ರೇಲಿಯಾದ ನೆಲದಲ್ಲೇ ಆಸ್ಟ್ರೇಲಿಯಾವನ್ನು ಮಣಿಸಿರುವುದು ಆ ಪಯಣದ ಮತ್ತೊಂದು ದೊಡ್ಡ ಮೈಲಿಗಲ್ಲಾಗಿದೆ. ಒಂದು ಕಾಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ‘ಹೊಸಬ’ ತಂಡವಾಗಿದ್ದ ಬಾಂಗ್ಲಾದೇಶ, ಈಗ ವಿಶ್ವದ ಅಗ್ರ ತಂಡಗಳಿಗೂ ಸವಾಲೊಡ್ಡಬಲ್ಲ ತಂಡವಾಗಿ ರೂಪುಗೊಂಡಿರುವುದಕ್ಕೆ ಈ ಗೆಲುವು ಸಾಕ್ಷಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com