‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ದಿನದಾಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೊರ್ಕೆಲ್, ಪ್ರಸಿದ್ಧ್ ಅವರ ಮಾನಸಿಕ ದೃಢತೆಯನ್ನು ಶ್ಲಾಘಿಸಿದರು.
Prasidh Krishna
ಪ್ರಸಿದ್ದ್ ಕೃಷ್ಣ
Updated on

ಕೊಲಂಬೊ: ಹೊರಗಿನ ಟೀಕೆಗಳು ಹಾಗೂ ಒತ್ತಡಗಳಿಗೆ ಕಿವಿಗೊಡದೆ ತಮ್ಮ ಆಟದ ಮೇಲೆ ಗಮನ ಕೇಂದ್ರೀಕರಿಸಿ ಪರಿಶ್ರಮಿಸುತ್ತಿರುವ ಭಾರತದ ವೇಗಿ ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಬೆಳೆದಿದ್ದಾರೆ ಎಂದು ಭಾರತ ತಂಡದ ಬೌಲಿಂಗ್ ಕೋಚ್ ಮಾರ್ನೆ ಮೊರ್ಕೆಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನ ಮೂರನೇ ದಿನ ಪ್ರಸಿದ್ಧ್ ಕೃಷ್ಣ 14 ಓವರ್‌ಗಳ ಕಠಿಣ ಸ್ಪೆಲ್ ಬೌಲಿಂಗ್ ಮಾಡಿ 47 ರನ್ ನೀಡಿ 3 ವಿಕೆಟ್ ಪಡೆದರು. ಈ ಮೂಲಕ ಭಾರತದ ಬೌಲಿಂಗ್ ದಾಳಿಯನ್ನು ಮುನ್ನಡೆಸಿದರು.

ದಿನದಾಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೊರ್ಕೆಲ್, ಪ್ರಸಿದ್ಧ್ ಅವರ ಮಾನಸಿಕ ದೃಢತೆಯನ್ನು ಶ್ಲಾಘಿಸಿದರು.

“ಪ್ರಸಿದ್ಧ್ ಕೃಷ್ಣ ಅವರ ಈ ಸ್ಪೆಲ್ ಅವರ ಪಾತ್ರವನ್ನು ತೋರಿಸುತ್ತದೆ. ಮಾಧ್ಯಮಗಳು, ಕಾಮೆಂಟೇಟರ್‌ಗಳ ಟೀಕೆಗಳ ನಡುವೆಯೂ ಅವುಗಳನ್ನು ಎದುರಿಸಿ ಬೌಲಿಂಗ್ ಮಾಡುತ್ತಿರುವುದು ಶ್ಲಾಘನೀಯ. ಸದ್ಯ ಅವರ ಬೌಲಿಂಗ್ ಅತ್ಯಂತ ಪ್ರಭಾವಶಾಲಿಯಾಗಿದೆ,” ಎಂದು ಮೊರ್ಕೆಲ್ ಹೇಳಿದರು.

Prasidh Krishna
2nd Test Day 3: ಫಾಲೋ ಆನ್ ಭೀತಿಯಲ್ಲಿ ಲಂಕಾಪಡೆ, ಮಳೆಯಿಂದಾಗಿ 3ನೇ ದಿನದಾಟ ಮೊಟಕು!

‘ಟೀಕಾಕಾರರ ಮೌನಗೊಳಿಸಿದ್ದಾರೆ’

ಭಾರತ ತಂಡಕ್ಕೆ ಸೇರುತ್ತಿದ್ದಂತೆ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆ ಹಾಗೂ ಪ್ರತಿಯೊಂದು ಚಲನವಲನದ ಮೇಲಿನ ವಿಶ್ಲೇಷಣೆ ಆಟಗಾರರ ಮೇಲೆ ಒತ್ತಡ ಹೇರುತ್ತದೆ ಎಂದು ಮೊರ್ಕೆಲ್ ಹೇಳಿದರು.

“ಆ ಧ್ವನಿಗಳನ್ನು ಮೌನಗೊಳಿಸಿ ಕೇವಲ ಕ್ರಿಕೆಟ್ ಆಡುವುದರ ಮೇಲೆ ಗಮನ ಹರಿಸುವುದು ಮುಖ್ಯ. ಪ್ರಸಿದ್ಧ್ ಅವರಲ್ಲಾದ ದೊಡ್ಡ ಬದಲಾವಣೆ ಎಂದರೆ, ಅವರ ಬಗ್ಗೆ ಮಾಡಲಾಗುವ ಟೀಕೆಗಳು ಮತ್ತು ಇತರ ಮಾತುಗಳನ್ನು ಬದಿಗಿಟ್ಟು ಕ್ರಿಕೆಟ್ ಅನ್ನು ಆನಂದಿಸುತ್ತಿರುವುದು. ಪ್ರಸಿದ್ಧ್ ಅತ್ಯಂತ ಕಠಿಣ ಪರಿಶ್ರಮಿ ಆಟಗಾರರಾಗಿದ್ದು, ಎದುರಾಳಿ ತಂಡದ ಬಗ್ಗೆ ಸಾಕಷ್ಟು ಅಧ್ಯಯನ ಮತ್ತು ಸಂಶೋಧನೆ ನಡೆಸುತ್ತಾರೆ ಎಂದು ಮೊರ್ಕೆಲ್ ಹೇಳಿದರು” ಎಂದರು.

“ಅವರು ಆಟವನ್ನು ಆಳವಾಗಿ ಅರ್ಥಮಾಡಿಕೊಳ್ಳುವ ವಿದ್ಯಾರ್ಥಿಯಂತಿದ್ದಾರೆ. ಅವರು ವಿಶ್ವದರ್ಜೆಯ ಬೌಲರ್ ಆಗಿ ಬೆಳೆಯುತ್ತಿರುವುದನ್ನು ನೋಡುವುದು ಸಂತಸದ ಸಂಗತಿ. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಭಾರತ ಪರ ದೀರ್ಘಕಾಲ ಆಡುವ ಸಾಮರ್ಥ್ಯ ಮತ್ತು ಪ್ರತಿಭೆ ಅವರಲ್ಲಿದೆ” ಎಂದು ಮೊರ್ಕೆಲ್ ಅಭಿಪ್ರಾಯಪಟ್ಟರು.

ವೇಗ ಮತ್ತು ಬೌನ್ಸ್ ಪ್ರಸಿದ್ಧ್‌ರ ಅಸ್ತ್ರ

ಪಿಚ್‌ನಿಂದ ಹೆಚ್ಚಿನ ನೆರವು ಸಿಗದ ಸಂದರ್ಭದಲ್ಲೂ ವಿಶ್ವದರ್ಜೆಯ ಬೌಲರ್‌ಗಳು ತಮ್ಮದೇ ಆದ ರೀತಿಯಲ್ಲಿ ಅವಕಾಶಗಳನ್ನು ಸೃಷ್ಟಿಸಬೇಕು ಎಂದು ಮೊರ್ಕೆಲ್ ಹೇಳಿದರು.

“ಪ್ರಸಿದ್ಧ್ ಅವರಿಗೆ ಹೆಚ್ಚುವರಿ ವೇಗ ಮತ್ತು ಬೌನ್ಸ್ ಇದೆ. ಹೀಗಾಗಿ ಅಪಾಯವಿದ್ದರೂ ಪ್ರತಿಫಲ ಸಿಗಬಹುದಾದ ನಿರ್ದಿಷ್ಟ ಹಂತಗಳಲ್ಲಿ ಅವರನ್ನು ಬಳಸಿಕೊಳ್ಳುತ್ತೇವೆ. ಕೆಲವು ಸಂದರ್ಭಗಳಲ್ಲಿ ಈ ಪಾತ್ರ ನಿರ್ವಹಿಸುವ ವೇಳೆ ಪ್ರಸಿದ್ಧ್ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿರುವುದನ್ನೂ ಮೊರ್ಕೆಲ್ ಒಪ್ಪಿಕೊಂಡರು. ಆದರೆ ಅದು ತಂಡ ನೀಡಿರುವ ಜವಾಬ್ದಾರಿಯ ಸಹಜ ಭಾಗ ಎಂದು ಹೇಳಿದರು.

“ಇಂಗ್ಲೆಂಡ್‌ನಲ್ಲಿ 2025ರಲ್ಲಿ ಹಲವು ಬಾರಿ ನಾವು ಅವರ ಬಳಿ ನಿರ್ದಿಷ್ಟ ಕೆಲಸ ಮಾಡುವಂತೆ ಕೇಳಿಕೊಂಡಿದ್ದೆವು. ಫಲಿತಾಂಶ ಅವರ ಪರವಾಗಿರದಿದ್ದರೂ ಇಡೀ ತಂಡ ಅವರ ಬೆನ್ನಿಗೆ ನಿಂತಿತ್ತು,” ಎಂದು ಮೊರ್ಕೆಲ್ ಹೇಳಿದರು.

ಪ್ರಸಿದ್ಧ್ ಕಳೆದ ಎರಡು-ಮೂರು ವರ್ಷಗಳಲ್ಲಿ ತಂಡಕ್ಕಾಗಿ ಕಠಿಣ ಕೆಲಸವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಇದೀಗ ಅವರ ಆಟವೂ ಮತ್ತಷ್ಟು ಬೆಳೆದಿದ್ದು, ಫುಲ್ಲರ್ ಲೆಂಗ್ತ್‌ನಲ್ಲಿ ಹೆಚ್ಚು ಸ್ಥಿರವಾಗಿ ಬೌಲಿಂಗ್ ಮಾಡಲು ಸಾಧ್ಯವಾಗುತ್ತಿದೆ ಎಂದು ಮೊರ್ಕೆಲ್ ಮೆಚ್ಚುಗೆ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com