

ಪಾಕಿಸ್ತಾನ ಸರ್ಕಾರ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬಾಂಗ್ಲಾದೇಶವನ್ನು ಬೆಂಬಲಿಸುವ ಮೂಲಕ ತಮ್ಮ ಕ್ರಿಕೆಟ್‌ಗೆ ಹಾನಿ ಮಾಡಿಕೊಳ್ಳುತ್ತಿವೆ. ಈ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳದೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಬಳಲುತ್ತಿವೆ ಎಂದು ಭಾರತದ ಮಾಜಿ ಕ್ರಿಕೆಟಿಗ ಮದನ್ ಲಾಲ್ ಹೇಳಿದ್ದಾರೆ.
ಎನ್‌ಐ ಜೊತೆ ಮಾತನಾಡಿದ ಅವರು, 'ಪಾಕಿಸ್ತಾನ ಸರ್ಕಾರ ಅಥವಾ ಪಿಸಿಬಿ, ಅವರೆಲ್ಲರೂ ತಮ್ಮ ಕ್ರಿಕೆಟ್‌ಗೆ ಹಾನಿ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಇದು ಅವರ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಸರಿಯಾಗಿ ಯೋಚಿಸಲು ಯಾರಾದರೂ ಇರಬೇಕು. ಅವರು ಈ ಸಮಯದಲ್ಲಿ ಸರಿಯಾಗಿ ಯೋಚಿಸುತ್ತಿಲ್ಲ. ಬಾಂಗ್ಲಾದೇಶವನ್ನು ಬೆಂಬಲಿಸುವ ಪಾಕಿಸ್ತಾನದ ನಿರ್ಧಾರವು ಅರ್ಥಹೀನ ಮತ್ತು ಸ್ವಯಂ ಹಾನಿಕರ. ಭಾರತ ಇದರ ಬಗ್ಗೆ ಚಿಂತಿಸಬೇಕಾಗಿಲ್ಲ. ಆದರೆ, ಈ ಆಯ್ಕೆಗಳಿಂದಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಎರಡೂ ನಕಾರಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಮುಖ್ಯ ವಿಷಯವೆಂದರೆ ನ್ಯೂಜಿಲೆಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ವಿಶ್ವ ಕ್ರಿಕೆಟ್‌ನಲ್ಲಿ ಪ್ರಮುಖ ರಾಷ್ಟ್ರಗಳಾಗಿದ್ದು, ಅವು ದೊಡ್ಡ ಜನಸಂದಣಿ, ಆದಾಯ ಮತ್ತು ಪ್ರಾಯೋಜಕತ್ವಗಳನ್ನು ಪಡೆಯಲಿವೆ' ಎಂದರು.
ಫೆಬ್ರುವರಿ 15 ರಂದು ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಗುಂಪು ಹಂತದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಲು ನಿರ್ಧರಿಸಿದ ನಂತರ ಮದನ್ ಲಾಲ್ ಅವರ ಹೇಳಿಕೆ ಹೊರಬಿದ್ದಿದೆ.
ಭಾರತ ಮತ್ತು ಶ್ರೀಲಂಕಾ ಆಯೋಜಿಸುತ್ತಿರುವ ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ಕಳೆದ ತಿಂಗಳು ತನ್ನ ತಂಡವನ್ನು ಪ್ರಕಟಿಸಿತ್ತು.
'ಪಾಕಿಸ್ತಾನ ಸರ್ಕಾರವು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಐಸಿಸಿ ವಿಶ್ವ ಟಿ20 2026ರಲ್ಲಿ ಭಾಗವಹಿಸಲು ಅನುಮೋದನೆ ನೀಡಿದೆ; ಆದಾಗ್ಯೂ, ಫೆಬ್ರುವರಿ 15 ರಂದು ಭಾರತದ ವಿರುದ್ಧ ನಿಗದಿಯಾಗಿರುವ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಮೈದಾನಕ್ಕೆ ಇಳಿಯುವುದಿಲ್ಲ' ಎಂದು ಪಾಕಿಸ್ತಾನ ಸರ್ಕಾರ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದೆ.
ವಿಶ್ವಕಪ್‌ಗೂ ಮುನ್ನ ಭಾರತ ತಂಡ ಅದ್ಭುತ ಫಾರ್ಮ್‌ನಲ್ಲಿದ್ದು, ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯನ್ನು 4-1 ಅಂತರದಿಂದ ಗೆದ್ದಿದೆ.
ಐಸಿಸಿ ಟಿ20 ವಿಶ್ವಕಪ್‌ಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಕಳಪೆ ದಾಖಲೆ ಹೊಂದಿದೆ. ಎರಡೂ ತಂಡಗಳು ಎಂಟು ಬಾರಿ ಮುಖಾಮುಖಿಯಾಗಿದ್ದು, ಭಾರತ ದಾಖಲೆಯ 7 ಬಾರಿ ಗೆಲುವು ಸಾಧಿಸಿದೆ. ಐಸಿಸಿ ಟಿ20 ವಿಶ್ವಕಪ್ ಫೆಬ್ರುವರಿ 7 ರಂದು ಆರಂಭವಾಗಲಿದೆ.
Advertisement