

ನವದೆಹಲಿ: ಫೆಬ್ರವರಿ 15 ರಂದು ನಡೆಯಲಿರುವ T20 ವಿಶ್ವಕಪ್ 2026 ಪಂದ್ಯದಲ್ಲಿ ಭಾರತದ ವಿರುದ್ಧ ತನ್ನ ತಂಡ ಆಡದಂತೆ ಕಳೆದ ಭಾನುವಾರ ಪಾಕಿಸ್ತಾನ ಸರ್ಕಾರ ಕಳುಹಿಸಿರುವ ಸಂದೇಶ ಜಾಗತಿಕ ಕ್ರಿಕೆಟನಾದ್ಯಂತ ಆತಂಕದ ಅಲೆ ಎಬ್ಬಿಸಿದೆ.
ಎರಡು ವರ್ಷಕ್ಕೊಮ್ಮೆ ನಡೆಯುವ ಟೂರ್ನಿಯಲ್ಲಿ ಪಾಕ್ ಭಾಗವಹಿಸಲು ಅನುಮತಿ ನೀಡಿದ್ದರೂ ಭಾರತದ ವಿರುದ್ಧ ಒಂದು ಪಂದ್ಯ ಆಡದಂತೆ ನಿರ್ಬಂಧಿಸಿದೆ. ಐಸಿಸಿ ಟೂರ್ನಿಯಿಂದ ಹೊರಬಿದ್ದಿರುವ ಬಾಂಗ್ಲಾದೇಶದ ಪರ ಬೆಂಬಲ ವ್ಯಕ್ತಪಡಿಸಿ, ಪಾಕಿಸ್ತಾನ ಕೂಡಾ ಇದೇ ನಿರ್ಧಾರ ತೆಗೆದುಕೊಂಡಿದೆ.
ಬಾಂಗ್ಲಾದೇಶಕ್ಕೆ ಐಸಿಸಿ ನಿರ್ಗಮನದ ಬಾಗಿಲು ತೋರಿಸಿದಾಗಿನಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಇಡೀ ಪಂದ್ಯಾವಳಿಯನ್ನು ಬಹಿಷ್ಕರಿಸುವ ಆಲೋಚನೆಯೊಂದಿಗೆ ಚೆಲ್ಲಾಟವಾಡುತ್ತಿದೆ. ಆದಾಗ್ಯೂ, ಅಂತಿಮವಾಗಿ, ಭಾರತದ ವಿರುದ್ಧ ಕೇವಲ ಒಂದು ಪಂದ್ಯವನ್ನು ಆಡದಿರಲು ನಿರ್ಧರಿಸಿದೆ. ಆದರೆ, ಈ ರೀತಿಯ ನಿರ್ಬಂಧಕ್ಕೆ ಐಸಿಸಿ ನಿಯಮಗಳು ಏನು ಹೇಳುತ್ತವೇ ಎಂಬುದನ್ನು ನೋಡೋಣಾ.
ತಾಂತ್ರಿಕವಾಗಿ, ಪಾಕಿಸ್ತಾನ ಪಂದ್ಯಾವಳಿಯಲ್ಲಿ ಕೇವಲ ಒಂದು ಪಂದ್ಯವನ್ನು ಆಡದಿರಬಹುದು. ಇದು ಆಗದಂತೆ ತಡೆಯುವುದಕ್ಕೆ ಐಸಿಸಿಗೆ ಯಾವುದೇ ನಿಯಂತ್ರಣವಿಲ್ಲ. ಆದಾಗ್ಯೂ, ICC ಕಟ್ಟುನಿಟ್ಟಾದ ನಿಯಮಗಳನ್ನು ಹೊಂದಿದೆ.ಹಾಗೆ ಮಾಡುವ ತಂಡಗಳು ಗಂಭೀರ ಪರಿಣಾಮಗಳಿಲ್ಲದೆ ಬಿಡುವುದಿಲ್ಲ. ಫೆಬ್ರವರಿ 15 ರಂದು ಭಾರತ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ನಿರ್ಬಂಧಿಸಿದ್ದರೆ ICC ನಿಯಮಗಳು, ಪಂದ್ಯದ ಷರತ್ತುಗಳು ಹೇಗೆ ಅನ್ವಯಿಸುತ್ತವೆ ಎಂಬುದು ಇಲ್ಲಿದೆ.
"ವಾಕೋವರ್" ನಿಯಮ: ICC ಟೂರ್ನಿಯಲ್ಲಿ ಒಂದು ತಂಡ ಆಡದಿರಲು ನಿರ್ಧರಿಸಿದರೆ, ಪಂದ್ಯವನ್ನು ಎದುರಾಳಿ ತಂಡಕ್ಕೆ ವಾಕ್ ಓವರ್ ಆಗಿ ನೀಡಲಾಗುತ್ತದೆ. ಹಾಗಾದರೆ ಭಾರತಕ್ಕೆ ಪಾಯಿಂಟ್ ಸಿಗುತ್ತದೆ. ಆದರೆ ಅವರು ಕ್ರೀಡಾಂಗಣದಲ್ಲಿ ಇರಬೇಕಾಗುತ್ತದೆ. ಭಾರತ ತಂಡದ ನಾಯಕ (ಸೂರ್ಯಕುಮಾರ್ ಯಾದವ್) ಟಾಸ್‌ಗಾಗಿ ಬಂದು ಪಾಕಿಸ್ತಾನದ ನಾಯಕ (ಸಲ್ಮಾನ್ ಅಲಿ ಅಘಾ) ಕಾಣಿಸಿಕೊಳ್ಳದಿದ್ದರೆ, ಮ್ಯಾಚ್ ರೆಫರಿ ಭಾರತಕ್ಕೆ ಅಧಿಕೃತವಾಗಿ ಎರಡು ಪಾಯಿಂಟ್ ನೀಡುತ್ತಾರೆ.
ಇದೆಲ್ಲದ್ದೆ, ಕ್ರೀಡಾ ಪೆನಾಲ್ಟಿ ಕೂಡ ಇದೆ. ನಿಯಮ 16.10.7 ರ ಅಡಿಯಲ್ಲಿ ಪಂದ್ಯ ಆಡದ ತಂಡ (ಪಾಕಿಸ್ತಾನ) ಪೂರ್ಣ 20-ಓವರ್‌ಗಳ ಇನ್ನಿಂಗ್ಸ್ ಆಡಿದೆ ಆದರೆ 0 ರನ್ ಗಳಿಸಿದೆ ಎಂದು ಪರಿಗಣಿಸಲಾಗುತ್ತದೆ. ಇದು ಗಮನಾರ್ಹವಾದ ನಿವ್ವಳ ರನ್ ರೇಟ್ ನಷ್ಟಕ್ಕೆ ಕಾರಣವಾಗುತ್ತದೆ. ಅವರು ತಮ್ಮ ಇತರ ಪಂದ್ಯಗಳನ್ನು ಗೆದ್ದರೂ ಸಹ ಸೂಪರ್ 8 ಗೆ ಅರ್ಹತೆ ಪಡೆಯುವುದು ಅತ್ಯಂತ ಕಷ್ಟಕರವಾಗಿಸುತ್ತದೆ.
* ಹಣಕಾಸು ಮತ್ತು ಕಮರ್ಷಿಯಲ್ ಪೆನಾಲ್ಟಿ: ಇಲ್ಲಿಯೇ ಪಾಕಿಸ್ತಾನಕ್ಕೆ ನಿಜವಾದ ತೊಂದರೆ ಪ್ರಾರಂಭವಾಗುತ್ತದೆ. ಭಾರತ-ಪಾಕಿಸ್ತಾನ ಪಂದ್ಯ ಪಂದ್ಯಾವಳಿಯಷ್ಟೇ ಅಲ್ಲ ಇಡೀ ಕ್ರಿಕೆಟ್ ನಲ್ಲಿ ಹಣದ ಹೊಳೆ ಹರಿಸುತ್ತದೆ. ಬ್ರಾಡ್‌ಕಾಸ್ಟರ್‌ಗಳು (JioStar ನಂತಹ) ಜಾಹೀರಾತು ಆದಾಯದಲ್ಲಿ ಅಂದಾಜು $25 ಮಿಲಿಯನ್‌ನಿಂದ $30 ಮಿಲಿಯನ್‌ಗಳನ್ನು ಕಳೆದುಕೊಳ್ಳುತ್ತಾರೆ. ಈ ಪ್ರಕ್ರಿಯೆಯಲ್ಲಿಐಸಿಸಿ ಬಳಿ ರಿಯಾಯಿತಿಯನ್ನು ಪ್ರಸಾರ ಸಂಸ್ಥೆ ಕೇಳಬಹುದು. ICC ಈ ಕಾನೂನು ಹಕ್ಕುಗಳು ಮತ್ತು ಹಣಕಾಸಿನ ನಷ್ಟಗಳನ್ನು ನೇರವಾಗಿ PCB ಗೆ ರವಾನಿಸುವ ಹಕ್ಕನ್ನು ICC ಹೊಂದಿದೆ. ICCಯು PCBಯ ವಾರ್ಷಿಕ ಆದಾಯದ ಪಾಲನ್ನು ತಡೆಹಿಡಿಯಬಹುದು.ಇದು ಪಾಕಿಸ್ತಾನದ ಕ್ರಿಕೆಟ್ ಬಜೆಟ್‌ನ ಸರಿಸುಮಾರು ಶೇ. 70 ರಿಂದ 80 ರಷ್ಟು ಭಾಗವನ್ನು ಹೊಂದಿದೆ. ಇದರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಸಾಕಷ್ಟು ಆರ್ಥಿಕ ಹೊಡೆತ ಎದುರಾಗಬಹುದು.
"ಸರ್ಕಾರದ ಹಸ್ತಕ್ಷೇಪ" ಷರತ್ತು: ಐಸಿಸಿ ಸಂವಿಧಾನದ ( (Article 2.4 D) ಪ್ರಕಾರ ಸದಸ್ಯ ಮಂಡಳಿಗಳು ತಮ್ಮ ವ್ಯವಹಾರಗಳನ್ನು ಸ್ವಾಯತ್ತವಾಗಿ ನಿರ್ವಹಿಸಲಿದ್ದು, ಸರ್ಕಾರದ ಹಸ್ತಕ್ಷೇಪವನ್ನು ತಪ್ಪಿಸುತ್ತದೆ. ಸರ್ಕಾರದ ಆದೇಶಗಳನ್ನು ಅನುಸರಿಸಿ ಪಾಕಿಸ್ತಾನವನ್ನು ಐಸಿಸಿ ನಿರ್ಬಂಧಗಳಿಂದ ರಕ್ಷಿಸಬೇಕು ಎಂದು ಪಿಸಿಬಿ ಮಾಜಿ ಅಧ್ಯಕ್ಷ ಎಹ್ಸಾನ್ ಮಣಿ ವಾದಿಸಿದರೂ, ಪಾಕಿಸ್ತಾನದ ಆಯ್ಕೆ ಪಂದ್ಯಾವಳಿಯ ಸಮಗ್ರತೆಯ ಉಲ್ಲಂಘನೆಯಾಗಿ ಕಂಡುಬರುತ್ತದೆ.
ಈ ಹಿಂದೆ (1996 ಮತ್ತು 2003), ಭದ್ರತಾ ಕಾಳಜಿಯ ಕಾರಣದಿಂದ ತಂಡಗಳು ಪಂದ್ಯಗಳನ್ನು ಬಹಿಷ್ಕರಿಸಿದವು (ಉದಾಹರಣೆಗೆ, ಆಸ್ಟ್ರೇಲಿಯಾ ಶ್ರೀಲಂಕಾದಲ್ಲಿ ಆಡಿರಲಿಲ್ಲ. ಆದಾಗ್ಯೂ, ತಟಸ್ಥ ಸ್ಥಳವಾದ ಶ್ರೀಲಂಕಾದಲ್ಲಿಯೂ ಪಾಕಿಸ್ತಾನ ಪಂದ್ಯವನ್ನು ಬಹಿಷ್ಕರಿಸಿದರೆ ಸರ್ಕಾರದ ಹಸ್ತಕ್ಷೇಪ ಕಾರಣದಿಂದ ಈ ಕ್ರಮವು ಐಸಿಸಿ ಸಂವಿಧಾನದ ನೇರ ಉಲ್ಲಂಘನೆಯಾಗುತ್ತದೆ.
Advertisement