ಭಾರತ ವಿರುದ್ಧದ ಪಂದ್ಯ ಬಹಿಷ್ಕಾರ; ಹಲವು ರಾಷ್ಟ್ರಗಳ ಕ್ರಿಕೆಟ್ ಮಂಡಳಿಗೆ ಪಾಕಿಸ್ತಾನ ಮಣೆ; ಒಂಟಿಯಾದ PCB!
ಫೆಬ್ರುವರಿ 15 ರಂದು ಭಾರತ ವಿರುದ್ಧ ನಡೆಯಲಿರುವ ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಅಂತರರಾಷ್ಟ್ರೀಯ ಬೆಂಬಲ ಪಡೆಯಲು ಮುಂದಾಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇತರ ಹಲವಾರು ಸದಸ್ಯ ಮಂಡಳಿಗಳನ್ನು ಸಂಪರ್ಕಿಸಿದೆ ಎಂದು ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ. ಪಾಕಿಸ್ತಾನ ಎಷ್ಟೇ ಪ್ರಯತ್ನಿಸಿದರೂ, ಫಲಿತಾಂಶಗಳು ನಿರಾಶಾದಾಯಕವಾಗಿವೆ. ಒಂದೇ ಒಂದು ಕ್ರಿಕೆಟ್ ಮಂಡಳಿಯು ಕೂಡ ಪಾಕಿಸ್ತಾನದ ನಿಲುವನ್ನು ಬೆಂಬಲಿಸಿಲ್ಲ ಎನ್ನಲಾಗಿದೆ.
ಪಾಕಿಸ್ತಾನ ಸರ್ಕಾರ ಸಾಮಾಜಿಕ ಮಾಧ್ಯಮಗಳ ಮೂಲಕ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಸಾರ್ವಜನಿಕ ಘೋಷಣೆ ಮಾಡಿದರೂ, ಈ ಬಹಿಷ್ಕಾರದ ಕುರಿತು ಪಿಸಿಬಿ ಇನ್ನೂ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಜೊತೆ ಔಪಚಾರಿಕ ಮಾಹಿತಿ ಹಂಚಿಕೊಂಡಿಲ್ಲ. ಈ ಬೆನ್ನಲ್ಲೇ ತನ್ನ ಬೆಂಬಲಕ್ಕೆ ನಿಲ್ಲುವಂತೆ ಇತರೆ ರಾಷ್ಟ್ರಗಳ ಕದ ತಟ್ಟುತ್ತಿದೆ ಎಂದು ವರದಿಯಾಗಿದೆ.
ಇತರ ಮಂಡಳಿಗಳು ಪಿಸಿಬಿಗೆ ನೀಡಿರುವ ಪ್ರತಿಕ್ರಿಯೆಗಳು ಸ್ಪಷ್ಟವಾಗಿಲ್ಲದಿದ್ದರೂ, ಈ ಪರಿಸ್ಥಿತಿಯಲ್ಲಿ ಪಾಕಿಸ್ತಾನಕ್ಕೆ ಆಕ್ಷೇಪಣೆ ಸಲ್ಲಿಸಲು ಯಾವುದೇ ಕಾನೂನುಬದ್ಧ ಹಕ್ಕು ಅಥವಾ ಅಧಿಕಾರವಿಲ್ಲ ಎಂಬುದು ಒಮ್ಮತದ ಅಭಿಪ್ರಾಯವಾಗಿದೆ. ಹೆಚ್ಚಿನ ಮಂಡಳಿಗಳು ಪಾಕಿಸ್ತಾನದ ನಿಲುವು ನಿಯಮಗಳ ಅಡಿಯಲ್ಲಿ ಮಾನ್ಯವಾಗಿಲ್ಲ ಎಂದು ನಂಬುತ್ತವೆ. ಭದ್ರತೆ ನೆಪವೊಡ್ಡಿ ಪಂದ್ಯಾವಳಿಯಿಂದ ಹೊರಗುಳಿದಿರುವ ಬಾಂಗ್ಲಾದೇಶಕ್ಕೆ ಬೆಂಬಲ ನೀಡುವ ಸಲುವಾಗಿ ಪಿಸಿಬಿ ಪಂದ್ಯಾವಳಿಯನ್ನು ಬಹಿಷ್ಕರಿಸುವ ನಿರ್ಧಾರವು ಅನಗತ್ಯ ಎಂದೇ ಹಲವರು ಭಾವಿಸುತ್ತಾರೆ.
ಪಾಕಿಸ್ತಾನದ ಈ ನಡೆಯ ಹಿಂದಿನ ಉದ್ದೇಶವನ್ನು ದುರ್ಬಲಗೊಳಿಸುವ ಹಲವಾರು ವಿರೋಧಾಭಾಸಗಳನ್ನು ಸದಸ್ಯ ಮಂಡಳಿಗಳು ಎತ್ತಿ ತೋರಿಸಿವೆ ಎಂದು ತಿಳಿದುಬಂದಿದೆ.
ಪಾಕಿಸ್ತಾನದ ಯುವ ತಂಡವು ಇತ್ತೀಚೆಗೆ U19 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಯಾವುದೇ ಪ್ರತಿಭಟನೆ ಅಥವಾ ಬಹಿಷ್ಕಾರದ ಉಲ್ಲೇಖವಿಲ್ಲದೆ ಆಡಿತು. ಪಾಕಿಸ್ತಾನ ಮಹಿಳಾ A ತಂಡವು ಬ್ಯಾಂಕಾಕ್‌ನಲ್ಲಿ ನಡೆಯಲಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ 2026 ಪಂದ್ಯದಿಂದ ಹಿಂದೆ ಸರಿಯುವ ಯಾವುದೇ ಯೋಜನೆ ಹೊಂದಿಲ್ಲವಾದ್ದರಿಂದ, ಅದೇ ದಿನ (ಫೆಬ್ರುವರಿ 15) ಭಾರತ A ವಿರುದ್ಧ ಆಡಲಿದೆ.
ಪಾಕಿಸ್ತಾನದ ಎಲ್ಲ ಪಂದ್ಯಗಳು ತಟಸ್ಥ ಸ್ಥಳವಾದ ಶ್ರೀಲಂಕಾದ ಕೊಲಂಬೊದಲ್ಲಿ ನಡೆಯುವುದರಿಂದ, ಭಾರತಕ್ಕೆ ಪ್ರಯಾಣಿಸುವ ಕುರಿತು ಬಾಂಗ್ಲಾದೇಶ ಉಲ್ಲೇಖಿಸಿರುವ 'ಭದ್ರತಾ ಕಾಳಜಿಗಳು' ಪಾಕಿಸ್ತಾನದ ನಿರ್ಧಾರಕ್ಕೆ ಯಾವುದೇ ತಾರ್ಕಿಕ ಸಂಬಂಧ ಹೊಂದಿಲ್ಲ.

