

ನವದೆಹಲಿ: ಐಸಿಸಿ ಟಿ20 ವಿಶ್ವಕಪ್ 2026ರ ಟೂರ್ನಿಯಲ್ಲಿ ನಮೀಬಿಯಾ ವಿರುದ್ಧದ 2ನೇ ಗೆಲುವಿನೊಂದಿಗೆ ಭಾರತ ತಂಡ ಮತ್ತೊಂದು ಅಮೋಘ ದಾಖಲೆ ನಿರ್ಮಿಸಿದ್ದು, ಪ್ರಬಲ ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ಯಾವ ತಂಡವೂ ಮಾಡದ ದಾಖಲೆ ನಿರ್ಮಿಸಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 210 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ನಮೀಬಿಯಾ 18.2 ಓವರ್ ನಲ್ಲಿ 116 ರನ್ ಗಳಿಗೆ ಆಲೌಟ್ ಆಗುವ ಮೂಲಕ 93 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.
ಸ್ಪಿನ್ನರ್ ಗಳಿಗೆ ಗರಿಷ್ಠ ವಿಕೆಟ್
ಇಂದಿನ ಪಂದ್ಯದಲ್ಲಿ ಸ್ಪಿನ್ನರ್ ಗಳಿಗೆ ಗರಿಷ್ಠ ಅಂದರೆ 10 ವಿಕೆಟ್ ಗಳು ಬಂದಿದ್ದು, ಭಾರತದಲ್ಲಿ ಪುರುಷರ T20I ಪಂದ್ಯವೊಂದರಲ್ಲಿ ಸ್ಪಿನ್ನರ್ ಗಳಿಗೆ ಸಿಕ್ಕ ಗರಿಷ್ಠ ಸಂಖ್ಯೆಯ ವಿಕೆಟ್ ಗಳಾಗಿವೆ. ಈ ಹಿಂದೆ 2016 ರ T20 ವಿಶ್ವಕಪ್‌ನಲ್ಲಿ ನಾಗ್ಪುರದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯದಲ್ಲಿ ಸ್ಪಿನ್ನರ್ ಗಳಿಗೆ 12 ವಿಕೆಟ್‌ಗಳು ದೊರೆತಿತ್ತು.
ಅಂತೆಯೇ ಹಾಲಿ ಟೂರ್ನಮೆಂಟ್‌ನ 18 ಪಂದ್ಯಗಳಲ್ಲಿ, ಸ್ಪಿನ್ನರ್‌ಗಳು ಇಲ್ಲಿಯವರೆಗೆ 50.4% ಓವರ್‌ಗಳನ್ನು ಬೌಲ್ ಮಾಡಿದ್ದಾರೆ. ಇದು T20 ವಿಶ್ವಕಪ್ ಆವೃತ್ತಿಯಲ್ಲಿ ಅತ್ಯಧಿಕವಾಗಿದೆ. ನಂತರ 2012 ರಲ್ಲಿ (ಶ್ರೀಲಂಕಾದಲ್ಲಿ) 45.8% ಓವರ್‌ಗಳು ಬೌಲ್ ಮಾಡಲಾಗಿತ್ತು.
ಜಗತ್ತಿನ ಯಾವ ತಂಡವೂ ಮಾಡದ ದಾಖಲೆ ಬರೆದ ಟೀಂ ಇಂಡಿಯಾ!
ಇನ್ನು ನಮೀಬಿಯಾ ವಿರುದ್ಧದ ಗೆಲುವಿನ ಬಳಿಕ ಭಾರತ ತಂಡ ಮತ್ತೊಂದು ಅಮೋಘ ಸಾಧನೆ ಮಾಡಿದ್ದು, ಇದು ಟಿ20 ವಿಶ್ವಕಪ್ ನಲ್ಲಿ ಭಾರತಕ್ಕೆ ಸಿಕ್ಕ ಸತತ 10ನೇ ಗೆಲುವಾಗಿದೆ.
ಅಂತೆಯೇ ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತ 10 ಗೆಲುವುಗಳನ್ನು ದಾಖಲಿಸಿದ ಮೊದಲ ತಂಡ ಎಂಬ ಕೀರ್ತಿಗೂ ಭಾರತ ಭಾಜನವಾಗಿದೆ. 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಭಾರತ ಅದೇ ಅಜೇಯ ಸಾಧನೆಯನ್ನು 2026ರಲ್ಲೂ ಮುಂದುವರೆಸಿದೆ.
ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ 2ನೇ ಸ್ಥಾನದಲ್ಲಿದ್ದು, 2024ರಲ್ಲಿ ದಕ್ಷಿಣ ಆಫ್ರಿಕಾ ಮತ್ತು 2022 ರಿಂದ 2024ರವೆರಗೂ ಆಸ್ಟ್ರೇಲಿಯಾ ತಂಡಗಳು ತಲಾ ಸತತ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದವು. ಇದೇ ಭಾರತ ತಂಡ 2012ರಿಂದ 2014ರವರೆಗೆ ಭಾರತ ಸತತ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು.
Most consecutive wins in Men’s T20 WC
10* - India (2024-2026)
8 - South Africa (2024)
8 - Australia (2022-2024)
7 - England (2010-2012)
7 - India (2012-2014)
ಅತೀ ದೊಡ್ಡ ಜಯ
ನಮೀಬಿಯಾ ವಿರುದ್ಧ ಭಾರತಕ್ಕೆ ಸಿಕ್ಕ 93 ರನ್ ಅಂತರದ ಜಯ ಟಿ20 ವಿಶ್ವಕಪ್ ಟೂರ್ನಿ ಇತಿಹಾಸದಲ್ಲಿ ರನ್ ಗಳ ಲೆಕ್ಕಾಚಾರದಲ್ಲಿ ಭಾರತಕ್ಕೆ ಸಿಕ್ಕ ಅತಿ ದೊಡ್ಡ ಗೆಲುವಾಗಿದೆ. ಇದಕ್ಕೂ ಮೊದಲು 2012ರಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 90 ರನ್ ಗಳ ಜಯ ದಾಖಲಿಸಿತ್ತು.
Biggest victory margins for India at T20 WC (by runs)
93 runs vs NAM, Delhi, 2026
90 runs vs ENG, Colombo RPS, 2012
73 runs vs AUS, Mirpur, 2014
71 runs vs ZIM, Melbourne, 2022
68 runs vs ENG, Providence, 2024 SF
Advertisement