

ನವದೆಹಲಿ: ವಿಜಯ್ ಹಜಾರೆ ಟ್ರೋಫಿಯಲ್ಲಿ ಭಾರತದ ಸ್ಟಾರ್ ಆಟಗಾರರ ಆರ್ಭಟ ಮುಂದುವರೆದಿದ್ದು, ಬರೋಡಾ ಪರ ಕಣಕ್ಕಿಳಿದಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದಾರೆ.
ಹೌದು.. ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಶನಿವಾರ ನಡೆದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಬರೋಡಾ ಪರ ಬರೋಡಾ ಪರ ಒಂದೇ ಓವರ್‌ನಲ್ಲಿ ಐದು ಸಿಕ್ಸರ್ ಒಂದು ಬೌಂಡರಿ ಸಹಿತ 34 ರನ್ ಚಚ್ಚಿ ಬೌಲರ್ ಬೆವರಿಳಿಸಿದ್ದಾರೆ. ಈ ದಾಖಲೆಯ ರನ್ ಗಳ ಮೂಲಕ ಪಾಂಡ್ಯಾ ಕೇವಲ 93 ಎಸೆತಗಳಲ್ಲಿ 133 ರನ್ ಗಳಿಸಿದ್ದಾರೆ.
ಈ ಇನ್ನಿಂಗ್ಸ್ ನಲ್ಲಿ ಪಾಂಡ್ಯ ಒಟ್ಟಾರೆಯಾಗಿ 11 ಸಿಕ್ಸರ್‌ಗಳು ಮತ್ತು ಎಂಟು ಬೌಂಡರಿಗಳನ್ನು ಬಾರಿಸಿ ವಿದರ್ಭ ತಂಡದ ಮೇಲೆ ತಿರುಗೇಟು ನೀಡಿದರು. ಒಂದು ಹಂತದಲ್ಲಿ ಬರೋಡಾ ತಂಡ ಕೇವಲ 71 ರನ್ ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ನಂತರ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಮೂಲಕ ಪರಿಸ್ಥಿತಿ ಸುಧಾರಿಸಿತು. ಮೊದಲಾರ್ಧದಲ್ಲಿ ಆರು ವಿಕೆಟ್‌ಗೆ 136 ರನ್‌ಗಳಿಗೆ ಇಳಿಸುವ ಮೂಲಕ ಪಂದ್ಯವನ್ನು ನಿಯಂತ್ರಿಸಿದ್ದರು.
ಸಂಕಷ್ಟದಲ್ಲಿದ್ದ ಪಾಂಡ್ಯಾ ನೆರವು!
ರಾಜ್ಕೋಟ್ನ ನಿರಂಜನ್ ಶಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ವಿದರ್ಭ ಹಾಗೂ ಬರೋಡಾ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಬೌಲಿಂಗ್ ಆಯ್ದುಕೊಂಡಿದ್ದ ನಾಯಕ ಹರ್ಷ್ ದುಬೆ ನಿರ್ಧಾರವನ್ನು ಸಮರ್ಥಿಸುವಂತೆ ವಿದರ್ಭ ತಂಡದ ಬೌಲರ್ಗಳು ದಾಳಿ ಸಂಘಟಿಸಿದ್ದರು.
ಪರಿಣಾಮ ಬರೋಡಾ ತಂಡವು 71 ರನ್ಗಳಿಸುವಷ್ಟರಲ್ಲಿ 5 ಪ್ರಮುಖ ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲಿಗೆ 62 ಎಸೆತಗಳಲ್ಲಿ 66 ರನ್ ಬಾರಿಸಿದ್ದ ಪಾಂಡ್ಯ ಒಂದೇ ಓವರ್‌ನಲ್ಲಿ 34 ರನ್ ಚಚ್ಚಿದರು.
ಪಾರ್ಥ್ ರೇಖಾಡೆ ಎಸೆತದ ಈ ಓವರ್‌ನಲ್ಲಿ ಬ್ಯಾಕ್ ಟು ಬ್ಯಾಕ್ 5 ಸಿಕ್ಸ್ ಸಿಡಿಸಿದ ಹಾರ್ದಿಕ್ ಪಾಂಡ್ಯ ಕೊನೆಯ ಎಸೆತದಲ್ಲಿ ಫೋರ್ ಬಾರಿಸಿದರು. ಈ ಮೂಲಕ ಕೇವಲ 68 ಎಸೆತಗಳಲ್ಲಿ ಶತಕ ಪೂರೈಸಿದರು. ಶತಕದ ಬಳಿಕ ಕೂಡ ಸ್ಫೋಟಕ ಇನಿಂಗ್ಸ್ ಮುಂದುವರೆಸಿದ ಪಾಂಡ್ಯ 92 ಎಸೆತಗಳಲ್ಲಿ 11 ಭರ್ಜರಿ ಸಿಕ್ಸರ್ ಹಾಗೂ 8 ಫೋರ್ಗಳೊಂದಿಗೆ 133 ರನ್ ಬಾರಿಸಿದರು.
ಪಾಂಡ್ಯಾಗೆ ಚೊಚ್ಚಲ ಲಿಸ್ಟ್ ಎ ಶತಕ
ಸ್ಪರ್ಧೆಯ ಮೊದಲ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಪಾಂಡ್ಯ, ತಮ್ಮ 119 ನೇ ಪಂದ್ಯದಲ್ಲಿ ತಮ್ಮ ಚೊಚ್ಚಲ ಲಿಸ್ಟ್ ಎ ಶತಕವನ್ನು ಗಳಿಸುವ ಮೂಲಕ ಎಲ್ಲಾ ರೀತಿಯಲ್ಲೂ ಮಿಂಚಿದರು.
ಈ ಪಂದ್ಯದಲ್ಲಿ ಬರೋಡಾ ತಂಡವು 50 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗೆ 293 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಗಳಿಸಿತು. ಇದಕ್ಕೂ ಮುನ್ನ ಅವರು 92 ರನ್ಗಳಿಸಿದ್ದು ಗರಿಷ್ಠ ಸ್ಕೋರ್ ಆಗಿತ್ತು. ಇದೀಗ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಪಾಂಡ್ಯ ಏಕದಿನ ಕ್ರಿಕೆಟ್ನಲ್ಲಿ ಶತಕದ ಖಾತೆ ತೆರೆದಿದ್ದಾರೆ.
Advertisement