

ಮುಂಬಯಿ: ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಅವರು ತಮ್ಮ ಗೆಳತಿ ಸೋಫಿ ಶೈನ್ ಅವರನ್ನು ಫೆಬ್ರುವರಿಯಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಗಳು ಬಹಿರಂಗಪಡಿಸಿವೆ.
ಶಿಖರ್ ಧವನ್ ಅವರು ಐರ್ಲೆಂಡ್‌ನ ಸೋಫಿ ಶೈನ್ ಜತೆ ಡೇಟಿಂಗ್ ಮಾಡುತ್ತಿರುವ ವಿಚಾರವನ್ನು ಕಳೆದ ವರ್ಷವೇ ಖಚಿತಪಡಿಸಿದ್ದರು. ಇದೀಗ ಈ ಜೋಡಿ ಸದ್ಯದಲ್ಲೇ ಹಸೆಮಣೆ ಏರುತ್ತಿದ್ದಾರೆ.
ಮೂಲಗಳ ಪ್ರಕಾರ, ಫೆಬ್ರವರಿ ಮೂರನೇ ವಾರದಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ಅದ್ದೂರಿ ವಿವಾಹ ಸಮಾರಂಭ ನಡೆಯಲಿದ್ದು, ಕ್ರಿಕೆಟ್ ಮತ್ತು ಬಾಲಿವುಡ್‌ನ ಸ್ಟಾರ್‌ಗಳು ಭಾಗವಹಿಸಲಿದ್ದಾರೆ. ವಿವಾಹ ಸಮಾರಂಭದ ಸಿದ್ಧತೆಗಳು ಈಗಾಗಲೇ ನಡೆಯುತ್ತಿವೆ.
ಆರಂಭಿಕ ದಿನಗಳಲ್ಲಿ ತಮ್ಮ ಸಂಬಂಧದ ಕುರಿತು ಗೌಪ್ಯತೆ ಕಾಯ್ದುಕೊಂಡಿದ್ದರು. ಆದರೆ, 2025ರಲ್ಲಿ ಅನೇಕ ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಸದ್ಯ, ಸೋಫಿ ಶೈನ್ ಅವರು ಶಿಖರ್ ಧವನ್ ಫೌಂಡೇಶನ್‌ನ ಮುಖ್ಯಸ್ಥರಾಗಿದ್ದಾರೆ.
ಧವನ್ ಹಾಗೂ ಸೋಫಿ ಶೈನ್, ಕಳೆದ ಕೆಲವು ವರ್ಷಗಳ ಹಿಂದೆ ದುಬೈನಲ್ಲಿ ಭೇಟಿಯಾಗಿದ್ದರು. ಅಲ್ಲಿ ಚಿಗುರಿದ ಸ್ನೇಹ ಸಂಬಂಧವಾಗಿ ಬದಲಾಗಿದೆ. ಇಬ್ಬರೂ ಕಳೆದ ಒಂದು ವರ್ಷದಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಧವನ್ ಈ ಹಿಂದೆ ಆಸ್ಟ್ರೇಲಿಯಾ ಮೂಲದ ಆಯೇಶಾ ಮುಖರ್ಜಿ ಜತೆ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಪತ್ನಿಯ ಅತಿಯಾದ ಕಿರುಕುಳದಿಂದ ಬೇಸತ್ತು ಧವನ್ ಕೊನೆಗೆ ಕೋರ್ಟ್ ಮೊರೆ ಹೋಗಿ ವಿಚ್ಛೇದನ ಪಡೆದಿದ್ದರು. 2024 ಅಕ್ಟೋಬರ್ 4 ರಂದು ದೆಹಲಿಯ ಕೌಟುಂಬಿಕ ನ್ಯಾಯಾಲಯವು ಧವನ್‌ಗೆ ಆಯೇಷಾ ಮುಖರ್ಜಿಯಿಂದ ಅಧಿಕೃತವಾಗಿ ವಿಚ್ಛೇದನವನ್ನು ನೀಡಿತ್ತು.
ಶಿಖರ್ ಧವನ್ ಅವರು 2024 ಆಗಸ್ಟ್‌ನಲ್ಲಿ ಎಲ್ಲ ಮಾದರಿಯ ಅಂತಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. ಭಾರತ ಪರ ಧವನ್ ಒಟ್ಟು 167 ಏಕದಿನ ಪಂದ್ಯಗಳನ್ನು ಆಡಿದ್ದು, 6793 ರನ್ ಬಾರಿಸಿದ್ದಾರೆ. ಇದರಲ್ಲಿ 39 ಅಧರ್ಶತಕ ಮತ್ತು 17 ಶತಕ ಒಳಗೊಂಡಿದೆ.
Advertisement