

ಬಾಂಗ್ಲಾದೇಶ ಕ್ರಿಕೆಟ್ ತಂಡದ ತಾರೆ ಮುಸ್ತಾಫಿಜುರ್ ರೆಹಮಾನ್ ಹನ್ನೊಂದನೇ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್ 11) ನಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೂಚನೆ ಮೇರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ವೇಗಿಯನ್ನು ಬಿಡುಗಡೆ ಮಾಡಿದ ಬಳಿಕ ಅವರು ಪಿಎಸ್‌ಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂರು ಬಾರಿ ಚಾಂಪಿಯನ್ ಆಗಿರುವ ಕೆಕೆಆರ್ ಐಪಿಎಲ್ 2026ರ ಮಿನಿ-ಹರಾಜಿನಲ್ಲಿ ಮುಸ್ತಾಫಿಜುರ್ ಅವರನ್ನು ₹9.20 ಕೋಟಿಗೆ ಖರೀದಿಸಿತ್ತು.
ಪಾಕಿಸ್ತಾನ ಸೂಪರ್ ಲೀಗ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆ 'ಎಕ್ಸ್'ನಲ್ಲಿ ಮುಸ್ತಾಫಿಜುರ್ ಅವರ ಲೀಗ್ ಆಗಮನವನ್ನು ಪ್ರಕಟಿಸಿದೆ. ಅವರು ಯಾವ ಫ್ರಾಂಚೈಸ್ ಪರ ಆಡುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕೆಕೆಆರ್ ಹೇಳಿದ್ದೇನು?
'ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಗೆ ಮುನ್ನ ತಂಡದಿಂದ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡುವಂತೆ ಬಿಸಿಸಿಐ/ಐಪಿಎಲ್ ಸೂಚನೆ ನೀಡಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಸೂಚನೆಯ ಮೇರೆಗೆ ಸೂಕ್ತ ಪ್ರಕ್ರಿಯೆ ಮತ್ತು ಸಮಾಲೋಚನೆಗಳ ನಂತರ ಬಿಡುಗಡೆ ಮಾಡಲಾಗಿದೆ. ಐಪಿಎಲ್ ನಿಯಮಗಳಿಗೆ ಅನುಸಾರವಾಗಿ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಬದಲಿ ಆಟಗಾರನನ್ನು ಬಿಸಿಸಿಐ ಅನುಮತಿಸಲಿದೆ ಮತ್ತು ಹೆಚ್ಚಿನ ವಿವರಗಳನ್ನು ಸರಿಯಾದ ಸಮಯದಲ್ಲಿ ತಿಳಿಸಲಾಗುವುದು ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ದೃಢಪಡಿಸಿದೆ.
ಸುದ್ದಿಸಂಸ್ಥೆ ಪಿಟಿಐ ಪ್ರಕಾರ, 'ಎಲ್ಲ ಐಪಿಎಲ್ ಆಟಗಾರರ ಸಂಬಳವನ್ನು ವಿಮೆಯಿಂದ ರಕ್ಷಿಸಲಾಗುತ್ತದೆ. ವಿದೇಶಿ ಆಟಗಾರರಿಗೆ, ತಂಡದ ಶಿಬಿರಕ್ಕೆ ಸೇರಿದ ನಂತರ ಅಥವಾ ಪಂದ್ಯಾವಳಿ ನಡೆಯುತ್ತಿರುವಾಗ ಅವರು ಗಾಯಗೊಂಡರೆ, ಫ್ರಾಂಚೈಸಿ ಸಾಮಾನ್ಯವಾಗಿ ಈ ವಿಮೆಯ ಮೂಲಕ ಪಾವತಿಯನ್ನು ಭರಿಸುತ್ತದೆ. ಹೆಚ್ಚಿನ ಆಟಗಾರರಿಗೆ, ಅವರು ಗಾಯಗೊಂಡರೆ ವಿಮೆಯು ಅವರ ಸಂಬಳದ ಅರ್ಧದಷ್ಟು (ಶೇ 50) ಮಾತ್ರ ಒಳಗೊಳ್ಳುತ್ತದೆ. ಆದಾಗ್ಯೂ, ಮುಸ್ತಾಫಿಜುರ್ ಪ್ರಕರಣವು ಪ್ರಮಾಣಿತ ವಿಮಾ ಷರತ್ತುಗಳ ಅಡಿಯಲ್ಲಿ ಬರುವುದಿಲ್ಲ. ಗಾಯ ಅಥವಾ ಲೀಗ್‌ನಲ್ಲಿ ಭಾಗವಹಿಸುವಿಕೆಗೆ ಸಂಬಂಧಿಸಿದ ಕ್ರಿಕೆಟ್ ಕಾರಣದಿಂದ ಬಿಡುಗಡೆ ಆಗಿಲ್ಲದ ಕಾರಣ, ಒಪ್ಪಂದದಡಿಯಲ್ಲಿ KKR ಅವರಿಗೆ ಯಾವುದೇ ಮೊತ್ತವನ್ನು ಪಾವತಿಸಲು ಬದ್ಧವಾಗಿಲ್ಲ.
'ಆದರೆ, ಮುಸ್ತಾಫಿಜುರ್‌ಗೆ ಕಾನೂನು ಮಾರ್ಗವನ್ನು ಆರಿಸಿಕೊಳ್ಳುವುದನ್ನು ಬಿಟ್ಟು ಹೆಚ್ಚಿನ ಆಯ್ಕೆಗಳಿಲ್ಲ ಮತ್ತು ಅದೂ ಸಹ ಐಪಿಎಲ್ ಭಾರತೀಯ ಕಾನೂನು ವ್ಯಾಪ್ತಿಗೆ ಬರುತ್ತದೆ. ಯಾವುದೇ ವಿದೇಶಿ ಕ್ರಿಕೆಟಿಗರು ಇದರ ಮೂಲಕ ಹೋಗಲು ಅಥವಾ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಎಸ್) ಮಾರ್ಗವನ್ನು ಅನುಸರಿಸಲು ಬಯಸುವುದಿಲ್ಲ' ಎಂದು ಮೂಲಗಳು ತಿಳಿಸಿವೆ.
Advertisement