

ವಿಜಯ್ ಹಜಾರೆ ಟ್ರೋಫಿಯ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ಬಾರಿಸುವ ಮೂಲಕ ಭಾರತೀಯ ಕ್ರಿಕೆಟ್ ತಂಡದ ತಾರೆ ಸರ್ಫರಾಜ್ ಖಾನ್ ಇತಿಹಾಸ ಬರೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯದ ಸರ್ಫರಾಜ್, ಕೇವಲ 15 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. 2020-21ರಲ್ಲಿ ಛತ್ತೀಸಗಢ ವಿರುದ್ಧ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಬರೋಡಾದ ಅತಿತ್ ಶೇತ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಮೊದಲ ಎಸೆತದಿಂದಲೇ ಬೌಲರ್‌ಗಳನ್ನು ತರಾಟೆಗೆ ತೆಗೆದುಕೊಂಡ ಸರ್ಫರಾಜ್, ಭರ್ಜರಿ ಫಾರ್ಮ್‌ನಲ್ಲಿ ಕಾಣಿಸಿಕೊಂಡರು. ಟೀಂ ಇಂಡಿಯಾದ ಸ್ಟಾರ್ ಆಟಗಾರ ಅಭಿಷೇಕ್ ಶರ್ಮಾ ಅವರ ಬೌಲಿಂಗ್‌ನಲ್ಲಿ ಒಂದೇ ಓವರ್‌ನಲ್ಲಿ 30 ರನ್ ಗಳಿಸಿದರು. ಪಂಜಾಬ್ ವಿರುದ್ಧದ ಮುಂಬೈ ಪಂದ್ಯದಲ್ಲಿ 20 ಎಸೆತಗಳಲ್ಲಿ 62 ರನ್‌ಗಳಿಸಿದ ಅವರ ಇನಿಂಗ್ಸ್‌ನಲ್ಲಿ ಏಳು ಬೌಂಡರಿ ಮತ್ತು ಐದು ಸಿಕ್ಸರ್‌ಗಳು ಇದ್ದವು.
ಸರ್ಫರಾಜ್ ಅವರ ಅದ್ಭುತ ಬ್ಯಾಟಿಂಗ್ ಹೊರತಾಗಿಯೂ, ಮುಂಬೈ ತಂಡವು ಪಂಜಾಬ್ ವಿರುದ್ಧದ ವಿಜಯ್ ಹಜಾರೆ ಟ್ರೋಫಿಯ 7ನೇ ಸುತ್ತಿನ ಪಂದ್ಯದಲ್ಲಿ ಕೇವಲ ಒಂದು ರನ್‌ನಿಂದ ಸೋತಿತು.
216 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡವು ಕ್ರಮವಾಗಿ 23 ಮತ್ತು 21 ರನ್‌ಗಳಿಗೆ ಅಂಗ್‌ಕ್ರಿಶ್ ರಘುವಂಶಿ ಮತ್ತು ಮುಶೀರ್ ಖಾನ್ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಸರ್ಫರಾಜ್ 20 ಎಸೆತಗಳಲ್ಲಿ 62 ರನ್ ಗಳಿಸುವ ಮೂಲಕ ಮುಂಬೈಯನ್ನು ಮತ್ತೆ ಹಳಿಗೆ ತಂದರು. ಆದಾಗ್ಯೂ, ಮಾಯಾಂಕ್ ಮಾರ್ಕಂಡೆ ಅವರನ್ನು ಔಟ್ ಮಾಡಿದರು.
ನಾಯಕ ಶ್ರೇಯಸ್ ಅಯ್ಯರ್ 45 ರನ್ ಗಳಿಸಿ ಇನಿಂಗ್ಸ್ ಅನ್ನು ಸ್ಥಿರಗೊಳಿಸಿದರು ಆದರೆ, ಮಾರ್ಕಂಡೆ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ತಮೋರೆ ಕ್ರಮವಾಗಿ 15, 12 ಮತ್ತು 15 ರನ್ ಗಳಿಸಿ ನಿರ್ಗಮಿಸಿದರು. ಪಂಜಾಬ್ ಪರ, ಗುರ್ನೂರ್ ಬ್ರಾರ್ ಮತ್ತು ಮಯಾಂಕ್ ಮಾರ್ಕಂಡೆ ತಲಾ ನಾಲ್ಕು ವಿಕೆಟ್ ಪಡೆದರು. ಕ್ರಿಶ್ ಭಗತ್ ಮತ್ತು ಹರ್ನೂರ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ 216 ರನ್ ಗಳಿಸಿತು. ರಮಣದೀಪ್ ಸಿಂಗ್ 74 ಎಸೆತಗಳಲ್ಲಿ 72 ರನ್ ಗಳಿಸಿ ಅಗ್ರ ಸ್ಕೋರರ್ ಆದರು. ಅನ್ಮೋಲ್‌ಪ್ರೀತ್ ಸಿಂಗ್ 75 ಎಸೆತಗಳಲ್ಲಿ 57 ರನ್ ಗಳಿಸಿದರು. ಮುಂಬೈ ಪರ ಮುಶೀರ್ ಖಾನ್ ಮೂರು ವಿಕೆಟ್ ಪಡೆದರೆ, ಓಂಕಾರ್ ತರ್ಮಲೆ, ಶಿವಂ ದುಬೆ ಮತ್ತು ಶಶಾಂಕ್ ಅತ್ತರ್ಡೆ ತಲಾ ಎರಡು ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ ಪಂಜಾಬ್ ತಂಡವು ಗ್ರೂಪ್ ಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪಂಜಾಬ್ ಮತ್ತು ಮುಂಬೈ ಎರಡೂ ತಂಡಗಳು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿವೆ.
Advertisement