2025ರ ಸೆಪ್ಟೆಂಬರ್‌ನಲ್ಲಿ ನಡೆದ ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಐದು ವಿಕೆಟ್‌ಗಳ ಜಯಗಳಿಸಿದರೂ, ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ಇಲ್ಲಿಯವರೆಗೆ ಟ್ರೋಫಿಯನ್ನು ಮುಟ್ಟಲು ಸಾಧ್ಯವಾಗಿಲ್ಲ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಪಡೆಯಲು ಭಾರತೀಯ ಆಟಗಾರರು ನಿರಾಕಿರಿಸಿದ್ದರಿಂದ ಟ್ರೋಫಿ ಇದೀಗ ದುಬೈನ ಎಸಿಸಿ ಕಚೇರಿಯಲ್ಲಿಯೇ ಇದೆ. ಭಾರತೀಯ ಆಟಗಾರರು ತಮ್ಮ ಪಾಕಿಸ್ತಾನಿ ಸಹವರ್ತಿಗಳೊಂದಿಗೆ ಕೈಕುಲುಕಲು ನಿರಾಕರಿಸಿದ್ದು ಕೂಡ ಪಂದ್ಯಾವಳಿಯಲ್ಲಿ ಚರ್ಚೆಯ ವಿಚಾರವಾಗಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ನಂತರದ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಂತರ ಭಾರತ ಈ ನಡೆಯನ್ನು ಅನುಸರಿಸಿತು.
ಏಷ್ಯಾಕಪ್ ಬಗ್ಗೆ ಮಾತನಾಡುತ್ತಾ ಪಾಕಿಸ್ತಾನದ ಮಾಜಿ ನಾಯಕ ಶಾಹೀನ್ ಅಫ್ರಿದಿ ಬುಧವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 'ಗಡಿಯಾಚೆಗಿನ ಜನರು ಕ್ರೀಡಾ ಮನೋಭಾವವನ್ನು ಉಲ್ಲಂಘಿಸಿದ್ದಾರೆ. ನಮ್ಮ ಕೆಲಸ ಕ್ರಿಕೆಟ್ ಆಡುವುದು ಮತ್ತು ಅದುವೇ ನಮ್ಮ ಮುಖ್ಯ ಗಮನವಾಗಿದೆ. ನಾವು ಮೈದಾನದಲ್ಲಿ ಪ್ರತಿಕ್ರಿಯಿಸಲು ಪ್ರಯತ್ನಿಸುತ್ತೇವೆ' ಎಂದು ಅಫ್ರಿದಿ ಹೇಳಿದ್ದಾರೆ.
ಅಫ್ರಿದಿ ಅವರ ಈ ಹೇಳಿಕೆ ಇದೀಗ ಸಾಮಾಜಿಕ ಮಾಧ್ಯಮ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿದೆ. 'ಖಾಲಿ ಪಾತ್ರೆಗಳು ಹೆಚ್ಚು ಶಬ್ದ ಮಾಡುತ್ತವೆ' ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. 'ನೀವು ಇದಕ್ಕೆ ಪ್ರತಿಕ್ರಿಯಿಸಲು ಯೋಗ್ಯರೇ' ಎಂದು ಮತ್ತೊಬ್ಬರು ಬರೆದಿದ್ದಾರೆ. 'ನನ್ನ ಜೀವನದಲ್ಲಿ ನನಗೆ ಅಂತಹ ವಿಶ್ವಾಸ ಬೇಕು' ಎಂದು ಮತ್ತೊಬ್ಬ ಬಳಕೆದಾರರು ಅಣಕಿಸಿದ್ದಾರೆ. 'ಮೈದಾನದಲ್ಲಿ ನೋಡೋಣ' ಎಂದು ಬಳಕೆದಾರರೊಬ್ಬರು ಸವಾಲೆಸೆದಿದ್ದಾರೆ.
ಅಫ್ರಿದಿ ಸದ್ಯ ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಲಾಹೋರ್‌ನ ಹೈ ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ ಪಿಸಿಬಿಯ ವೈದ್ಯಕೀಯ ಸಮಿತಿಯಿಂದ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಪಿಸಿಬಿ ಬುಧವಾರ ವೇಗಿ ಪುನರ್ವಸತಿ ಮಾಡುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಿತು. ಆದರೆ, ಅವರ ಗಾಯದ ಪ್ರಮಾಣ ಅಥವಾ ಅವರು ಪೂರ್ಣ ಫಿಟ್ನೆಸ್ ಪಡೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಉಲ್ಲೇಖಿಸಿಲ್ಲ.
ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಶಾಹೀನ್ ಮೊಣಕಾಲಿಗೆ ಗಾಯವಾಗಿತ್ತು. ಪಿಸಿಬಿ ಅವರನ್ನು ಪುನರ್ವಸತಿಗಾಗಿ ಕರೆಸಿಕೊಂಡ ನಂತರ ಅವರನ್ನು ಅವರ ತಂಡವಾದ ಬ್ರಿಸ್ಬೇನ್ ಹೀಟ್ ಬಿಡುಗಡೆ ಮಾಡಿತು.
ಶಾಹೀನ್ ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿರುವುದು ಇದೇ ಮೊದಲಲ್ಲ. 2021ರಲ್ಲಿ ಗಾಲೆಯಲ್ಲಿ ನಡೆದ ಟೆಸ್ಟ್ ಪಂದ್ಯದ ಸಮಯದಲ್ಲಿ ಫೀಲ್ಡಿಂಗ್ ಮಾಡುವಾಗಲೂ ಇದು ಸಂಭವಿಸಿತ್ತು ಮತ್ತು ಗಾಯವು ಅವರನ್ನು ಹಲವಾರು ತಿಂಗಳು ಆಟದಿಂದ ಹೊರಗಿಟ್ಟಿತು.
ಪಾಕಿಸ್ತಾನದ ವೇಗದ ದಾಳಿಯಲ್ಲಿ ಅಫ್ರಿದಿ ಪ್ರಮುಖ ವ್ಯಕ್ತಿಯಾಗಿದ್ದು, ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿರುವ ಟಿ20 ವಿಶ್ವಕಪ್‌ನಲ್ಲಿ ತಂಡದ ಅವಕಾಶಗಳಿಗೆ ಅವರ ಲಭ್ಯತೆಯು ನಿರ್ಣಾಯಕವಾಗಬಹುದು.
'ಅವರು ವಿಶ್ವಕಪ್‌ಗೆ ಫಿಟ್ ಆಗುತ್ತಾರೆ ಎಂದು ನಾವು ಭಾವಿಸುತ್ತೇವೆ. ಆದರೆ, ವೈದ್ಯಕೀಯ ಸಮಿತಿಯ ಸಲಹೆಯ ಮೇರೆಗೆ (ಪಾಕಿಸ್ತಾನ ಕ್ರಿಕೆಟ್) ಮಂಡಳಿಯಿಂದ ಅಂತಿಮ ನಿರ್ಧಾರ ಬರಲಿದೆ' ಎಂದು ಪಾಕಿಸ್ತಾನದ ಟಿ20 ನಾಯಕ ಸಲ್ಮಾನ್ ಅಲಿ ಆಘಾ ಹೇಳಿದ್ದಾರೆ.
Advertisement