

ರಾಜ್ ಕೋಟ್: ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿರುವ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಚಂಡೀಗಢ ವಿರುದ್ಧ ರನ್ ಮಳೆಯನೇ ಹರಿಸಿದ್ದಾರೆ.
ಹೌದು.. ಭಾರತ ಕ್ರಿಕೆಟ್ ತಂಡದ ಅನುಭವಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಅಮೋಘ ಲಯವನ್ನು ಮುಂದುವರೆಸಿದ್ದು, ವಿದರ್ಭ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಅವರು, ಇಂದು ಚಂಡೀಗಢ ವಿರುದ್ಧದ ಪಂದ್ಯದಲ್ಲೂ ಸ್ಫೋಟಕ ಬ್ಯಾಟಿಂಗ್ ನಡೆಸಿದರು.
ಇಂದು ರಾಜ್ ಕೋಟ್ ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಬರೋಡಾ ಪರ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 31 ಎಸೆತಗಳಲ್ಲಿ 9 ಸಿಕ್ಸರ್ ಮತ್ತು 2 ಬೌಂಡರಿಗಳ ನೆರವಿನಿಂದ 75 ರನ್ ಪೇರಿಸಿ ತಂಡದ ಬೃಹತ್ ಮೊತ್ತದಲ್ಲಿ ಮಹತ್ತರ ಪಾತ್ರವಹಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಬರೋಡಾ ಆರಂಭಿಕ ಆಘಾತದ ಹೊರತಾಗಿಯೂ ಪ್ರಿಯಾಂಶು ಮೋಲಿಯಾ (113 ರನ್) ಶತಕ, ವಿಷ್ಣು ಸೋಲಂಕಿ (54 ರನ್), ಹಾರ್ದಿಕ್ ಪಾಂಡ್ಯ (75 ರನ್) ಮತ್ತು ಜಿತೇಶ್ ಶರ್ಮಾ (73 ರನ್) ಅರ್ಧಶತಕಗಳ ನೆರವಿನಿಂದ 49.1ಓವರ್ ನಲ್ಲಿ 391 ರನ್ ಗಳಿಸಿ ಆಲೌಟ್ ಆಯಿತು.
ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಚಂಡೀಗಢ 40 ಓವರ್ ನಲ್ಲಿ 242 ರನ್ ಗಳಿಸಿ ಆಲೌಟ್ ಆಗುವ ಮೂಲಕ 149 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಚಂಡೀಗಢ ಪರ ಶಿವಂ ಬಾಂಬ್ರಿ (100) ಶತಕ ಸಿಡಿಸಿದರೆ, ತರಣ್ ಪ್ರೀತ್ ಸಿಂಗ್ 44 ರನ್ ಬರೋಡಾಕ್ಕೆ ಪ್ರತಿರೋಧ ತೋರಿದರು.
ಆದರೆ ಉಳಿದಾವ ಬ್ಯಾಟರ್ ಗಳಿಂದ ಉತ್ತಮ ಇನ್ನಿಂಗ್ಸ್ ಮೂಡಿಬರಲಿಲ್ಲ. ಪರಿಣಾಮ 40 ಓವರ್ ನಲ್ಲಿ 242 ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ ಬರೋಡ ತಂಡ 149 ರನ್‌ಗಳ ಬೃಹತ್ ಗೆಲುವು ದಾಖಲಿಸಿತು.
Advertisement