

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಗುರುವಾರ ಐಸಿಸಿಗೆ ಎರಡನೇ ಪತ್ರವನ್ನು ಔಪಚಾರಿಕವಾಗಿ ಕಳುಹಿಸಿದ್ದು, T20 ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸುವ ಬಗೆಗಿನ ನಿರ್ದಿಷ್ಟ ಭದ್ರತಾ ಕಾಳಜಿಗಳನ್ನು ವಿವರಿಸಿದೆ ಮತ್ತು ಶ್ರೀಲಂಕಾಕ್ಕೆ ಸ್ಥಳವನ್ನು ಬದಲಾಯಿಸುವ ಬೇಡಿಕೆಯನ್ನು ಪುನರುಚ್ಚರಿಸಿದೆ. ಫೆಬ್ರುವರಿ 7 ರಂದು ವಿಶ್ವಕಪ್ ಆರಂಭವಾಗಲಿದ್ದು, ಬಾಂಗ್ಲಾದೇಶ ನಾಲ್ಕು ಪಂದ್ಯಗಳನ್ನು (ಮೂರು ಕೋಲ್ಕತ್ತಾದಲ್ಲಿ ಮತ್ತು ಒಂದು ಮುಂಬೈನಲ್ಲಿ) ಆಡಲು ನಿರ್ಧರಿಸಲಾಗಿದೆ. ಬಿಸಿಸಿಐ ಸೂಚನೆ ಮೇರೆಗೆ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಬಿಡುಗಡೆ ಮಾಡಿದ ನಂತರ ಬಾಂಗ್ಲಾ ತಂಡದ ಆಟಗಾರರ ಸುರಕ್ಷತೆಯನ್ನು ಉಲ್ಲೇಖಿಸಿ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದ್ದಾರೆ.
'ಕ್ರೀಡಾ ಸಚಿವಾಲಯದ ಸಲಹೆಗಾರ ಆಸಿಫ್ ನಜ್ರುಲ್ ಅವರೊಂದಿಗೆ ಚರ್ಚಿಸಿದ ನಂತರ, ಬಿಸಿಬಿ ಮತ್ತೊಮ್ಮೆ ಐಸಿಸಿಗೆ ಪತ್ರ ಕಳುಹಿಸಿದೆ. ಭದ್ರತೆಗೆ ಸಂಬಂಧಿಸಿದಂತೆ ಕಾಳಜಿಯ ಕ್ಷೇತ್ರಗಳ ಬಗ್ಗೆ ತಿಳಿದುಕೊಳ್ಳಲು ಐಸಿಸಿ ಬಯಸಿದೆ ಮತ್ತು ಬಿಸಿಬಿ ಅವುಗಳನ್ನು ಉಲ್ಲೇಖಿಸಿದೆ' ಎಂದು ಕ್ರಿಕೆಟ್ ಮಂಡಳಿಗೆ ಹತ್ತಿರವಿರುವ ಮೂಲವೊಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದೆ.
ಆದಾಗ್ಯೂ, ಪತ್ರದ ವಿಶೇಷತೆಗಳ ಕುರಿತು ಅವರು ಹೆಚ್ಚಿನ ವಿವರಣೆ ನೀಡಿಲ್ಲ. ಬಾಂಗ್ಲಾದೇಶದ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಬಿಸಿಬಿ ಮತ್ತು ಐಸಿಸಿ ನಡುವೆ ನಿರಂತರವಾದ ಮಾತುಕತೆಯ ನಡುವೆ ಈ ಬೆಳವಣಿಗೆ ಸಂಭವಿಸಿದೆ. ಜಾಗತಿಕ ಸಂಸ್ಥೆ ಇಲ್ಲಿಯವರೆಗೆ ಮೌನ ಕಾಯ್ದುಕೊಂಡಿದೆ ಮತ್ತು ಬಾಂಗ್ಲಾ ಕ್ರಿಕೆಟ್ ಮಂಡಳಿ ಫ್ಲ್ಯಾಗ್ ಮಾಡಿದ ಭದ್ರತಾ ಆತಂಕಗಳ ನಿಖರ ಸ್ವರೂಪದ ಬಗ್ಗೆ ಸ್ಪಷ್ಟತೆ ಕೋರಿದೆ.
ಈ ವಿಷಯದಲ್ಲಿ ಬಿಸಿಬಿ ಸ್ವತಃ ಭಿನ್ನಾಭಿಪ್ರಾಯ ಹೊಂದಿದೆ ಎಂದು ತಿಳಿದುಬಂದಿದೆ. ಮಂಡಳಿಯ ಒಂದು ವರ್ಗವು ನಜ್ರುಲ್ ಅವರ ಕಠಿಣ ನಿಲುವನ್ನು ಬೆಂಬಲಿಸುತ್ತಿದ್ದರೆ, ಇನ್ನೊಂದು ಗುಂಪು ಐಸಿಸಿ ಮತ್ತು ಭಾರತೀಯ ಅಧಿಕಾರಿಗಳೊಂದಿಗೆ ಚರ್ಚೆಯ ಮಾರ್ಗಗಳನ್ನು ಮುಕ್ತವಾಗಿರಿಸಿಕೊಳ್ಳುವ ಪರವಾಗಿದೆ.
ಭಾರತದಲ್ಲಿ ತಂಗುವ ಸಮಯದಲ್ಲಿ ಇಡೀ ಬಾಂಗ್ಲಾದೇಶ ತಂಡಕ್ಕೆ ವರ್ಧಿತ ಮತ್ತು ಪರಿಪೂರ್ಣ ಭದ್ರತಾ ವ್ಯವಸ್ಥೆಗಳ ಅಗತ್ಯವನ್ನು ಅವರು ಒತ್ತಿ ಹೇಳುತ್ತಿದ್ದಾರೆ.
ಈ ಹಿಂದೆ ಭಾರತದ ವಿರುದ್ಧ ಬಹಿರಂಗ ಟೀಕೆ ಮಾಡುತ್ತಿದ್ದ ನಜ್ರುಲ್, ಬಿಸಿಸಿಐ ಜೊತೆಗಿನ ಸಾಂಪ್ರದಾಯಿಕ ಸ್ನೇಹಪರ ಮತ್ತು ಸಹಕಾರಿ ಸಂಬಂಧಕ್ಕಿಂತ ಭಿನ್ನವಾಗಿ, ರಾಜಿಯಾಗದ ಮಾರ್ಗವನ್ನು ಮುಂದಿಟ್ಟಿದ್ದಾರೆಂದು ನಂಬಲಾಗಿದೆ.
ಈಮಧ್ಯೆ, ಬಾಂಗ್ಲಾದೇಶ ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಹಿದ್ ಹೊಸೇನ್, ಬಾಂಗ್ಲಾದೇಶ ಕ್ರಿಕೆಟ್ ತಂಡವು ವಿಶ್ವಕಪ್ ಪಂದ್ಯಾವಳಿಗಾಗಿ ಭಾರತಕ್ಕೆ ಭೇಟಿ ನೀಡುವುದಿಲ್ಲ ಎಂದು ದೃಢಪಡಿಸಿದರು. ಸುರಕ್ಷತಾ ಕಾರಣಗಳಿಗಾಗಿ ತಂಡವನ್ನು ಭಾರತಕ್ಕೆ ಕಳುಹಿಸದಿರುವ ಮತ್ತು ಬಾಂಗ್ಲಾದೇಶದ ಪಂದ್ಯಗಳನ್ನು ಸಹ-ಆತಿಥೇಯ ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂಬ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಅವರ ನಿಲುವನ್ನು ಅವರು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಹೇಳಿದ್ದಾರೆ.
'ನಾವು ಖಂಡಿತವಾಗಿಯೂ ಭಾರತದ ಹೊರಗೆ ಆಡುತ್ತೇವೆ'. ಆಟಗಾರರು ಮತ್ತು ಬೆಂಬಲಿಗರು ಇಬ್ಬರೂ ಭಾರತಕ್ಕೆ ಪ್ರಯಾಣಿಸಬೇಕಾಗುತ್ತದೆ. ಸರ್ಕಾರ ಅವರ ಭದ್ರತೆಯನ್ನು ಪರಿಗಣಿಸಬೇಕು' ಎಂದು ಅವರು ಹೇಳಿದರು.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳಿಗೆ ಸಂಬಂಧಿಸಿದ ಘಟನೆಗಳ ನಂತರ ಮುಸ್ತಾಫಿಜುರ್ ಅವರನ್ನು ಕೆಕೆಆರ್‌ನಿಂದ ಬಿಡುಗಡೆ ಮಾಡಲಾಗಿದೆ.
ಬಾಂಗ್ಲಾದೇಶದ ಪಂದ್ಯಗಳನ್ನು ಕೋಲ್ಕತ್ತಾ ಮತ್ತು ಮುಂಬೈನಿಂದ ಕೊಲಂಬೊಗೆ ಸ್ಥಳಾಂತರಿಸುವ ಬಗ್ಗೆ ಐಸಿಸಿ ಈವರೆಗೆ ಯಾವುದೇ ಸೂಚನೆ ನೀಡಿಲ್ಲ. ಆದಾಗ್ಯೂ, ಭದ್ರತಾ ಕಾಳಜಿಗಳನ್ನು ನಿರ್ಣಯಿಸುವಲ್ಲಿ ಐಸಿಸಿ ತನ್ನೊಂದಿಗೆ ಕೆಲಸ ಮಾಡಲು ಇಚ್ಛೆ ವ್ಯಕ್ತಪಡಿಸಿದೆ ಎಂದು ಬಿಸಿಬಿ ಪ್ರತಿಪಾದಿಸಿದೆ.
Advertisement