

ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ (WPL 2026)ನ ಉದ್ಧಾಟನಾ ಪಂದ್ಯದಲ್ಲೇ ರಣರೋಚಕ ಫಲಿತಾಂಶ ಬಂದಿದ್ದು, ಬೆಂಗಳೂರು ರಾಯಲ್ ಚಾಲೆಂಜರ್ಸ್ ಪಡೆ 3 ವಿಕೆಟ್ ವಿರೋಚಿತ ಗೆಲುವು ಸಾಧಿಸಿತು.
ನಿನ್ನೆ ನವೀ ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮೆ ಕ್ರೀಡಾಂಗಣದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ 2026ನ ಮೊದಲ ಪಂದ್ಯ ಅತ್ಯಂತ ರಣರೋಚಕವಾಗಿತ್ತು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 154 ರನ್ ಕಲೆಹಾಕಿದರೆ, ಆರ್ಸಿಬಿ 20 ಓವರ್ಗಳಲ್ಲಿ 157 ರನ್ ಬಾರಿಸಿ 3 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್ ಕಲೆಹಾಕಿತು.
155 ರನ್ಗಳ ಗುರಿ ಬೆನ್ನತ್ತಿದ ಆರ್ಸಿಬಿ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿ ವಿರೋಚಿತ ಗೆಲುವು ಸಾಧಿಸಿತು.
ಕೊನೆಯ ಓವರ್ ಹೈಡ್ರಾಮಾ
ಇನ್ನು ಈ ಪಂದ್ಯದಲ್ಲಿ ಆರ್ ಸಿಬಿಗೆ ಗೆಲ್ಲಲು ಕೊನೆಯ ಓವರ್ ನಲ್ಲಿ 18 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ನಾಟ್ ಸ್ಕೀವರ್ ಬ್ರಂಟ್ ಎಸೆದ ಅಂತಿಮ ಓವರ್ನಲ್ಲಿ ಕೇವಲ 4 ಎಸೆತಗಳಲ್ಲಿ 20 ರನ್ ಚಚ್ಚಿದರು.
ಇದರಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿ ಗಳು ಸೇರಿದ್ದವು. ಈ ಮೂಲಕ ನಡಿನ್ ಡಿ ಕ್ಲರ್ಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 3 ವಿಕೆಟ್ಗಳ ರೋಚಕ ಜಯ ತಂದುಕೊಟ್ಟರು.
ಹೀರೋ ಆದ ನಡಿನ್ ಡಿ ಕ್ಲರ್ಕ್
ಇನ್ನು ಈ ಪಂದ್ಯದ ಹೀರೋ ಎಂದರೆ ಅದು ಅಕ್ಷರಶ: ನಡಿನ್ ಡಿ ಕ್ಲರ್ಕ್.. ಮೊದಲು ಬೌಲಿಂಗ್ ನಲ್ಲಿ ಮ್ಯಾಜಿಕ್ ಮಾಡಿದ ನಡಿನ್ ಡಿ ಕ್ಲರ್ಕ್ 4 ಓವರ್ ಎಸೆದು ಕೇವಲ 26 ರನ್ ನೀಡಿ 4 ವಿಕೆಟ್ ಪಡೆದು ಮುಂಬೈಗೆ ಮಾರಕವಾದರು.
ಬಳಿಕ ಬ್ಯಾಟಿಂಗ್ ನಲ್ಲೂ ಕಮಾಲ್ ಮಾಡಿದ ಅವರು ಕೇವಲ 44 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 7 ಬೌಂಡರಿ ಸಹಿತ ಅಜೇಯ 63 ಸಿಡಿಸಿದರು. ಪ್ರಮುಖವಾಗಿ ಅಂತಿಮ ಓವರ್ ನಲ್ಲಿ ಅವರು ಗಳಿಸಿದ 2 ಸಿಕ್ಸರ್ ಮತ್ತು 2 ಬೌಂಡರಿ ಮುಂಬೈನಿಂದ ಗೆಲುವನ್ನು ಕಸಿಯಿತು.
Advertisement