

ವಡೋದರ: ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ರನ್ ಮೆಷಿನ್ ವಿರಾಟ್ ಕೊಹ್ಲಿ ತಮ್ಮ ಒಂದೇ ಇನ್ನಿಂಗ್ಸ್ ನಲ್ಲಿ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಶ್ರೀಲಂಕಾದ ಬ್ಯಾಟಿಂಗ್ ದಂತಕಥೆ ಕುಮಾರ ಸಂಗಕ್ಕಾರ ಅವರ ದಾಖಲೆಗಳನ್ನು ಮುರಿದಿದ್ದಾರೆ.
ಗುಜರಾತ್ ನ ವಡೋದರಾದ ಬಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡ ನೀಡಿರುವ 301 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿರುವ ಭಾರತ ತಂಡಕ್ಕೆ ಆಸರೆಯಾಗಿ ನಿಂತಿರುವ ವಿರಾಟ್ ಕೊಹ್ಲಿ ಅಮೋಘ ಇನ್ನಿಂಗ್ಸ್ ಆಡಿದ್ದು ತಮ್ಮ ಈ ಬ್ಯಾಟಿಂಗ್ ಮೂಲಕ ಎರಡೆರಡು ವಿಶ್ವದಾಖಲೆಗಳನ್ನು ಮುರಿದಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ 44 ಎಸೆತಗಳಲ್ಲಿ ಅಜೇಯ 50 ರನ್ ಗಳಿಸಿರುವ ವಿರಾಟ್ ಕೊಹ್ಲಿ ಈ ಇನ್ನಿಂಗ್ಸ್ ಮೂಲಕ ತಮ್ಮ ಅಂತಾರಾಷ್ಟ್ರೀಯ ರನ್ ಗಳಿಕೆಯನ್ನು 28 ಸಾವಿರ ಗಡಿ ದಾಟಿಸಿದರು. ಆ ಮೂಲಕ ಈ ಸಾಧನೆ ಮಾಡಿದ ಮತ್ತು ಭಾರತದ ಪರ ಗರಿಷ್ಠ ಅಂತಾರಾಷ್ಟ್ರೀಯ ರನ್ ಗಳಿಸಿದ 2ನೇ ಆಟಗಾರ ಎಂಬ ಕೀರ್ತಿಗೂ ಭಾಜನರಾದರು.
ಸಚಿನ್ ತೆಂಡೂಲ್ಕರ್ ದಾಖಲೆ ಪತನ
ಇನ್ನು ಇಂದಿನ ತಮ್ಮ ಅಮೋಘ ಇನ್ನಿಂಗ್ಸ್ ಮೂಲಕ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ದಾಖಲೆ ಮುರಿದಿದ್ದು, ಇಂದು ಅಂತಾರಾಷ್ಟ್ರೀಯ ರನ್ ಗಳಿಕೆಯನ್ನು 28 ಸಾವಿರ ಗಡಿ ದಾಟಿಸಿದ ಕೊಹ್ಲಿ ಈ ಸಾಧನೆ ಮಾಡಿದ ಅತ್ಯಂತ ವೇಗದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಕೊಹ್ಲಿ 624 ಇನ್ನಿಂಗ್ಸ್ ಗಳಲ್ಲಿ 28 ಸಾವಿರ ರನ್ ಗಳಿಸಿದ್ದರೆ, ಸಚಿನ್ ಈ ಸಾಧನೆಗಾಗಿ 644 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಆ ಮೂಲಕ ಕೊಹ್ಲಿ ಇನ್ನೂ 20 ಕಡಿಮೆ ಇನ್ನಿಂಗ್ಸ್ ಗಳಲ್ಲಿ ಈ ಸಾಧನೆಗೈದು ಅವರ ಅಪರೂಪದ ದಾಖಲೆ ಹಿಂದಿಕ್ಕಿದ್ದಾರೆ.
ಕುಮಾರ ಸಂಗಕ್ಕಾರ ದಾಖಲೆಯೂ ಪತನ
ಇದೇ ವೇಳೆ ಕೊಹ್ಲಿ ಶ್ರೀಲಂಕಾದ ಬ್ಯಾಟಿಂಗ್ ದಂತಕಥೆ ಕುಮಾರ ಸಂಗಕ್ಕಾರ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗರಿಷ್ಛ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಕುಮಾರ ಸಂಗಕ್ಕಾರ ಅವರನ್ನುಕೊಹ್ಲಿ ಮೂರನೇ ಸ್ಥಾನಕ್ಕೆ ತಳ್ಳಿ ತಾವು 2ನೇ ಸ್ಥಾನಕ್ಕೇರಿದ್ದಾರೆ. ಇಂದಿನ ಇನ್ನಿಂಗ್ಸ್ ಸಹಿತ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ರನ್ ಗಳಿಕೆಯನ್ನು 28,032ಕ್ಕೆ ಏರಿಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಈ ಪಟ್ಟಿಯಲ್ಲಿ 28016 ರನ್ ಗಳಿಸಿದ್ದ ಕುಮಾರ ಸಂಗಕ್ಕಾರ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಈ ಪಟ್ಟಿಯಲ್ಲಿ ಭಾರತದ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು ಸಚಿನ್ 34357 ಅಂತಾರಾಷ್ಟ್ರೀಯ ರನ್ ಗಳಿಸಿದ್ದಾರೆ. ಸಚಿನ್ ಈ ದಾಖಲೆ ಮುರಿಯಲು ಕೊಹ್ಲಿಗೆ ಇನ್ನೂ ಸುಮಾರು 6 ಸಾವಿರ ರನ್ ಗಳ ಅಂತರವಿದೆ. ಈಗಾಗಲೇ ಟಿ20 ಮತ್ತು ಟೆಸ್ಟ್ ಕ್ರಿಕೆಟ್ ನಿವೃತ್ತಿ ಘೋಷಿಸಿರುವ ಕೊಹ್ಲಿ ಈ ದಾಖಲೆ ಮುರಿಯುವುದು ಅಸಾಧ್ಯ ಎನ್ನಲಾಗುತ್ತಿದೆ.
ಭಾರತದ ಪರ ಅತೀ ಹೆಚ್ಚು ಅರ್ಧಶತಕ, 2ನೇ ಆಟಗಾರ
ಅಂತೆಯೇ ಇಂದು ಮತ್ತೊಂದು ಅರ್ಧಶತಕ ಗಳಿಸಿದ ಕೊಹ್ಲಿ ಆ ಮೂಲಕ ತಮ್ಮ ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಅರ್ಧಶತಕ ಗಳಿಸಿದ 2ನೇ ಆಟಗಾರರಾಗಿದ್ದಾರೆ. ಕೊಹ್ಲಿ ಈ ವರೆಗೂ 130 ಏಕದಿನ ಅರ್ಧಶತಕಗಳನ್ನು ಗಳಿಸಿದ್ದು, 145 ಅರ್ಧಶತಕ ಗಳಿಸಿರುವ ಸಚಿನ್ ಈ ಪಟ್ಟಿಯಲ್ಲೂ ಅಗ್ರ ಸ್ಥಾನಿಯಾಗಿದ್ದಾರೆ. ಉಳಿದಂತೆ ತಲಾ 94 ಅರ್ಧಶತಕ ಸಿಡಿಸಿರುವ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ. 93 ಅರ್ಧಶತಕ ಗಳಿಸಿರುವ ಸೌರವ್ ಗಂಗೂಲಿ 4ನೇ ಸ್ಥಾನದಲ್ಲಿದ್ದಾರೆ.
Advertisement