

ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಸೋಮವಾರ ದೃಢಪಡಿಸಿದೆ. ಭಾನುವಾರ ವಡೋದರಾದ ಬಿಸಿಎ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸುಂದರ್ ಬೌಲಿಂಗ್ ಮಾಡುವಾಗ ಎಡ ಪಕ್ಕೆಲುಬಿನಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿತ್ತು. ಅವರನ್ನು ಸ್ಕ್ಯಾನ್‌ಗೆ ಒಳಪಡಿಸಿದ ನಂತರ ಬಸಿಸಿಐ ವೈದ್ಯಕೀಯ ತಂಡವು ತಜ್ಞರ ಅಭಿಪ್ರಾಯ ಪಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.
ಇದೀಗ ವಾಷಿಂಗ್ಟನ್ ಸುಂದರ್ ಬದಲಿಗೆ ದೆಹಲಿ ಮತ್ತು ಎಲ್‌ಎಸ್‌ಜಿ ಆಟಗಾರ ಆಯುಷ್ ಬದೋನಿ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಬುಧವಾರ ನಡೆಯಲಿರುವ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಬದೋನಿ ರಾಜ್‌ಕೋಟ್‌ನಲ್ಲಿ ತಂಡದೊಂದಿಗೆ ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಭಾನುವಾರ ವಡೋದರಾದಲ್ಲಿ ನ್ಯೂಜಿಲೆಂಡ್ ನೀಡಿದ್ದ 301 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಭಾರತ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿತು. ನಾಯಕ ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ರನ್ ಚೇಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಗಿಲ್ 71 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳಿಂದ 56 ರನ್ ಗಳಿಸಿ ಕೊಹ್ಲಿಗೆ ಉತ್ತಮ ಬೆಂಬಲ ನೀಡಿದರು. ಕೊಹ್ಲಿ 91 ಎಸೆತಗಳಲ್ಲಿ 93 ರನ್ ಗಳಿಸಿ ಭಾರತವನ್ನು ಗುರಿಯತ್ತ ಕೊಂಡೊಯ್ದರು.
ಗೆಲುವಿನ ಬಗ್ಗೆ ಮಾತನಾಡಿದ ಗಿಲ್, ವಿಶೇಷವಾಗಿ ನೀವು ಗುರಿಯನ್ನು ಬೆನ್ನಟ್ಟುವಾಗ ಯಾವಾಗಲೂ ಉತ್ತಮ ಅನುಭವವಾಗುತ್ತದೆ. ವರ್ತಮಾನದಲ್ಲಿ ಉಳಿಯುವುದು ಅತ್ಯಂತ ಮುಖ್ಯ, ವಿಶೇಷವಾಗಿ ಕ್ರೀಡಾಪಟುಗಳಿಗೆ. ನಾನು ಅದನ್ನೇ ಮಾಡಲು ಪ್ರಯತ್ನಿಸುತ್ತೇನೆ ಎಂದು ಪಂದ್ಯದ ನಂತರ ಹೇಳಿದರು.
'ಈ ಸಮಯದಲ್ಲಿ, ಕೊಹ್ಲಿ ಬ್ಯಾಟಿಂಗ್ ಅನ್ನು ಸುಲಭವಾಗಿ ಕಾಣುವಂತೆ ಮಾಡುತ್ತಿದ್ದಾರೆ. ಆದರೆ, ಈ ಪಿಚ್‌ಗಳಲ್ಲಿ ಪ್ರಾರಂಭಿಸುವುದು ಕಷ್ಟ. ಅವರು ಮಾಡುವುದನ್ನು ನಾವು ಪುನರಾವರ್ತಿಸುವುದು ಕಷ್ಟ. ಅವರು ರನ್‌ಗಳನ್ನು ಸಂಗ್ರಹಿಸುತ್ತಲೇ ಇರುತ್ತಾರೆ' ಎಂದು ಅವರು ಹೇಳಿದರು.
ಕಳೆದ ಸರಣಿಯಲ್ಲಿ ಅರ್ಷದೀಪ್ ಉತ್ತಮವಾಗಿ ಆಡಿದ್ದರು. ಮೊಹಮ್ಮದ್ ಸಿರಾಜ್ ಇರಲಿಲ್ಲ. ಹೆಚ್ಚು ಏಕದಿನ ಪಂದ್ಯಗಳಿಲ್ಲದ ಕಾರಣ ಪರ್ಯಾಯವಾಗಿ ಮುಂದುವರಿಯಲು ಬಯಸುತ್ತೇವೆ ಎಂದು ವಿಭಿನ್ನ ಆಟಗಾರರಿಗೆ ಅವಕಾಶ ನೀಡುವುದರ ಹಿಂದಿನ ತಾರ್ಕಿಕತೆಯನ್ನು ವಿವರಿಸಿದರು.
ಆಯುಷ್ ಬದೋನಿ ಯಾರು?
ಆಯುಷ್ ಬದೋನಿ ದೆಹಲಿ ರಣಜಿ ಟ್ರೋಫಿ ನಾಯಕರಾಗಿದ್ದು, ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಭಾಗವಾಗಿದ್ದಾರೆ. ಕುತೂಹಲಕಾರಿ ವಿಚಾರವೆಂದರೆ, 2022ರ ಐಪಿಎಲ್‌ನಲ್ಲಿ LSG ಯಲ್ಲಿ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿಯೇ ಆಯುಷ್ ಬದೋನಿ ಅವರಿಗೆ ಫಿನಿಷರ್ ಆಗಿ ಅವಕಾಶ ಸಿಕ್ಕಿತು. ಅವರು ತಮ್ಮ ಚೊಚ್ಚಲ ಪಂದ್ಯದಲ್ಲಿ ಗಮನಾರ್ಹ ಅರ್ಧಶತಕ ಗಳಿಸಿದರು ಮತ್ತು ಅಂದಿನಿಂದ LSG ನಿರಂತರವಾಗಿ ಅವರನ್ನು ನಂಬಿದೆ. ಕಳೆದ ವರ್ಷ ಬದೋನಿ ಅವರಿಗೆ ಅತ್ಯುತ್ತಮ ಐಪಿಎಲ್ ಅಭಿಯಾನವಾಗಿತ್ತು. ಅವರು 32.90 ಸರಾಸರಿಯಲ್ಲಿ ಮತ್ತು 148.19 ಸ್ಟ್ರೈಕ್ ರೇಟ್‌ನಲ್ಲಿ 329 ರನ್‌ಗಳನ್ನು ಗಳಿಸಿದರು.
ಬದೋನಿ ಭಾರತ ಎ ಪರ ಆಡಿದ ಅನುಭವ ಹೊಂದಿದ್ದಾರೆ ಮತ್ತು ಭಾರತದ ಎರಡನೇ ತಂಡಕ್ಕೆ, ವಿಶೇಷವಾಗಿ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ನಿಯಮಿತ ಆಟಗಾರರಾಗಿದ್ದಾರೆ. ಲಿಸ್ಟ್-ಎ ಪಂದ್ಯಗಳಲ್ಲಿ, 26 ವರ್ಷದ ಅವರು 36.47 ಸರಾಸರಿಯಲ್ಲಿ ಮತ್ತು 93.27 ಸ್ಟ್ರೈಕ್ ರೇಟ್‌ನಲ್ಲಿ 700 ರನ್‌ಗಳನ್ನು ಗಳಿಸಿದ್ದಾರೆ. ಜನವರಿ 13 ರಂದು ವಿದರ್ಭ ವಿರುದ್ಧದ ವಿಜಯ್ ಹಜಾರೆ ಟ್ರೋಫಿ (ವಿಎಚ್‌ಟಿ) ಕ್ವಾರ್ಟರ್ ಫೈನಲ್‌ನಲ್ಲಿ ಅವರು ದೆಹಲಿಯನ್ನು ಮುನ್ನಡೆಸಬೇಕಿತ್ತು. ಆದರೆ, ಈಗ ಅವರು ರಾಜ್‌ಕೋಟ್‌ನಲ್ಲಿ ಸೀನಿಯರ್ ತಂಡವನ್ನು ಸೇರಬೇಕಾಗಿದೆ. ಬದಲಿಗೆ ನಿತೀಶ್ ರಾಣಾ ಗೆಲ್ಲಲೇಬೇಕಾದ ಪಂದ್ಯದಲ್ಲಿ ದೆಹಲಿಯನ್ನು ಮುನ್ನಡೆಸುವ ಸಾಧ್ಯತೆಯಿದೆ.
ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡ
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ಉಪನಾಯಕ), ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೇಲ್ (ವಿಕೆಟ್ ಕೀಪರ್), ಆಯುಷ್ ಬದೋನಿ.
Advertisement