

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮಾಜಿ ಸ್ಪಿನ್ನರ್ ಕೆಸಿ ಕಾರಿಯಪ್ಪ ಸೋಮವಾರ ತಮ್ಮ 31ನೇ ವಯಸ್ಸಿನಲ್ಲಿ ಬಿಸಿಸಿಐ ಕ್ರಿಕೆಟ್‌ನ ಎಲ್ಲ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ್ದಾರೆ. ಮಿಸ್ಟರಿ ಸ್ಪಿನ್ನರ್ ಆಗಿದ್ದ ಕಾರಿಯಪ್ಪ ಅವರನ್ನು 2015 ರಲ್ಲಿ ಆಗಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಾಲಿ ಚಾಂಪಿಯನ್ಸ್ ಕೆಕೆಆರ್ ₹2.40 ಕೋಟಿಗೆ ಖರೀದಿಸಿತ್ತು. ಕಾರಿಯಪ್ಪ ತಮ್ಮ ದೇಶೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಕರ್ನಾಟಕ ಮತ್ತು ಮಿಜೋರಾಂ ಅನ್ನು ಪ್ರತಿನಿಧಿಸಿದರು. ಎಲ್ಲ ಸ್ವರೂಪಗಳಲ್ಲಿ ಒಟ್ಟು 157 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಹೃತ್ಪೂರ್ವಕ ಪೋಸ್ಟ್‌ನೊಂದಿಗೆ ತಮ್ಮ ನಿರ್ಧಾರವನ್ನು ತಿಳಿಸಿದರು.
'ಬೀದಿಗಳಲ್ಲಿ ಆಟವಾಡುವುದರಿಂದ ಹಿಡಿದು ದೀಪಗಳ ನಡುವೆ ಮತ್ತು ಹೆಮ್ಮೆಯಿಂದ ಜರ್ಸಿಯನ್ನು ತೊಟ್ಟು ಕ್ರೀಡಾಂಗಣದಲ್ಲಿ ಆಡುವವರೆಗೆ, ನಾನು ಒಮ್ಮೆ ಕಲ್ಪಿಸಿಕೊಂಡಿದ್ದ ಕನಸನ್ನು ನನಸಾಗಿಸಿದೆ. ಇಂದು, ನಾನು ಅಧಿಕೃತವಾಗಿ ಬಿಸಿಸಿಐ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ' ಎಂದು ಕಾರಿಯಪ್ಪ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ.
'ಈ ಪ್ರಯಾಣ ನನಗೆ ಎಲ್ಲವನ್ನೂ ನೀಡಿತು. ನನಗೆ ನಗು ತರಿಸಿದ ವಿಜಯಗಳು, ನನ್ನನ್ನು ನೋವಿಗೆ ದೂಡಿದ ಸೋಲುಗಳು ಮತ್ತು ನನ್ನನ್ನು ರೂಪಿಸಿದ ಪಾಠಗಳು. ನಾನು ಒತ್ತಡ, ನೋವು ಅನುಭವಿಸಿದ್ದೇನೆ ಮತ್ತು ತ್ಯಾಗ ಮಾಡಿದ್ದೇನೆ. ಜೊತೆಗೆ ಕ್ರಿಕೆಟ್ ಮಾತ್ರ ನೀಡಬಹುದಾದ ಸಂತೋಷವನ್ನು ಸಹ ಅನುಭವಿಸಿದ್ದೇನೆ' ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮತ್ತು ಮಿಜೋರಾಂ ಕ್ರಿಕೆಟ್ ಅಸೋಸಿಯೇಷನ್‌ಗೆ ಕಾರ್ಯಪ್ಪ ಕೃತಜ್ಞತೆ ಸಲ್ಲಿಸಿದರು. ಕಾರ್ಯಪ್ಪ ಅವರು ಪ್ರಥಮ ದರ್ಜೆಯ 14 ಪಂದ್ಯಗಳಲ್ಲಿ 23.20 ಸರಾಸರಿಯಲ್ಲಿ 75 ವಿಕೆಟ್‌ಗಳನ್ನು ಪಡೆದಿದ್ದಾರೆ.
'ನನ್ನನ್ನು ಬೆಳೆಸಿದ್ದಕ್ಕಾಗಿ, ಮಾರ್ಗದರ್ಶನ ನೀಡಿದ್ದಕ್ಕಾಗಿ ಮತ್ತು ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮತ್ತು ಮಿಜೋರಾಂ ಕ್ರಿಕೆಟ್ ಸಂಸ್ಥೆಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ನನ್ನನ್ನು ನಂಬಿ ಕುಟುಂಬದಂತೆ ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು' ಎಂದು ಕಾರಿಯಪ್ಪ ಬರೆದಿದ್ದಾರೆ.
'ನನ್ನ 7 ವರ್ಷಗಳ ಐಪಿಎಲ್ ಪ್ರಯಾಣ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತದೆ. ಕೋಲ್ಕತ್ತಾ ನೈಟ್ ರೈಡರ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ರಾಜಸ್ಥಾನ್ ರಾಯಲ್ಸ್ ತಂಡಗಳನ್ನು ಪ್ರತಿನಿಧಿಸಿದ್ದಕ್ಕೆ ಹೆಮ್ಮೆಯಿದೆ' ಎಂದು ಬರೆದಿದ್ದಾರೆ.
'ಪ್ರತಿಯೊಬ್ಬ ಆಯ್ಕೆದಾರ, ತರಬೇತುದಾರ, ತಂಡದ ಸಹ ಆಟಗಾರ, ಸಹಾಯಕ ಸಿಬ್ಬಂದಿ ಮತ್ತು ಪ್ರತಿಯೊಬ್ಬ ಅಭಿಮಾನಿಗಳಿಗೆ ಧನ್ಯವಾದಗಳು. ನೀವು ನನ್ನ ಆಟವನ್ನು ಬೆಂಬಲಿಸಿದ್ದಲ್ಲದೆ... ನನ್ನ ಕನಸನ್ನು ಬೆಂಬಲಿಸಿದ್ದೀರಿ. ನಾನು ಇಂದು ಬಿಸಿಸಿಐ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿರಬಹುದು ಆದರೆ, ಈ ಆಟವನ್ನು ಪ್ರೀತಿಸುವುದರಿಂದ ನಾನು ಎಂದಿಗೂ ನಿವೃತ್ತಿ ಹೊಂದುವುದಿಲ್ಲ' ಎಂದು ಕಾರಿಯಪ್ಪ ಹೇಳಿದರು.
ಭಾರಿ ಬೆಲೆಗೆ ಖರೀದಿಯ ಹೊರತಾಗಿಯೂ, ಕಾರಿಯಪ್ಪ ಐಪಿಎಲ್ 2015ನೇ ಆವೃತ್ತಿಯಲ್ಲಿ ಕೆಕೆಆರ್ ಪರ ಕೇವಲ ಒಂದು ಪಂದ್ಯವನ್ನು ಆಡಿದ್ದರು. ಐಪಿಎಲ್‌ನಲ್ಲಿ ಅವರು ಪಡೆದ ಮೊದಲ ವಿಕೆಟ್ ಎಬಿ ಡಿವಿಲಿಯರ್ಸ್ ಅವರದ್ದಾಗಿತ್ತು. ನಂತರ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಖರೀದಿಸಿತು. 2016 ಮತ್ತು 2017ರ ಐಪಿಎಲ್ ಆವೃತ್ತಿಗಳ ಒಂಬತ್ತು ಪಂದ್ಯಗಳಲ್ಲಿ ಏಳು ವಿಕೆಟ್‌ಗಳನ್ನು ಕಬಳಿಸಿದರು.
Advertisement