

ಇಂದೋರ್: ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಇಂದಿನ ಪಂದ್ಯದಲ್ಲಿ ಕೊಹ್ಲಿ ಅವರ ಬ್ಯಾಟಿಂಗ್ ಮೇಲೆ ಎಲ್ಲರ ಗಮನ ಕೇಂದ್ರೀಕರಿಸಿದೆ.
ಹೌದು.. ಇಂದೋರ್ ನ ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯದ ನಡೆಯುತ್ತಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದು ಸರಣಿ ಸಮಬಲ ಸಾಧಿಸಿದೆ. ಇಂದಿನ ಅಂತಿಮ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಳ್ಳಲು ಉಭಯ ತಂಡಗಳು ಹವಣಿಸುತ್ತಿವೆ.
ತಂಡದಲ್ಲಿ ಒಂದು ಬದಲಾವಣೆ
ಇನ್ನು ಇಂದಿನ ಪಂದ್ಯದಲ್ಲಿ ನಾಯಕ ಶುಭ್ ಮನ್ ಗಿಲ್ ಒಂದು ಬದಲಾವಣೆ ಮಾಡಿದ್ದು ಕನ್ನಡಿಗ ಪ್ರಸಿದ್ಧ್ ಕೃಷ್ಣ ಬದಲಿಗೆ ಎಡಗೈ ವೇಗಿ ಅರ್ಶ್ ದೀಪ್ ಸಿಂಗ್ ರನ್ನು ತಂಡಕ್ಕೆ ಸೇರ್ಪಡೆಗೊಳಿಸಿದ್ದಾರೆ.
ಅಲ್ಲದೆ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡ ನಾಯಕ ಶುಭ್ ಮನ್ ಗಿಲ್, ಹೆಚ್ಚು ಇಬ್ಬನಿ ಇಲ್ಲ. ಬೋರ್ಡ್‌ನಲ್ಲಿ ರನ್‌ಗಳು ನಮಗೆ ಉತ್ತಮವಾಗಿ ಬೆನ್ನಟ್ಟಲು ಅನುವು ಮಾಡಿಕೊಡುತ್ತದೆ. ಮಧ್ಯಮ ಓವರ್‌ಗಳಲ್ಲಿ ನಮ್ಮ ಲೆಂಗ್ತ್ ಅನ್ನು ಬದಲಾಯಿಸಬೇಕಾಗಿದೆ, ಅದನ್ನೇ ನಾವು ಮಾಡಲು ಬಯಸುತ್ತೇವೆ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣು
ಇನ್ನು ಇಂದಿನ ಪಂದ್ಯದಲ್ಲಿ ಭಾರತ ರನ್ ಮೆಷಿನ್ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣಿದ್ದು, ಇತ್ತೀಚೆಗಷ್ಟೇ ಏಕದಿನ ಬ್ಯಾಟರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದ ಕೊಹ್ಲಿ, ತಮ್ಮ ಅಗ್ರಸ್ಥಾನ ಉಳಿಸಿಕೊಳ್ಳಲು ಈ ಪಂದ್ಯದಲ್ಲಿ ಶತಕ ಸಿಡಿಸಲೇ ಬೇಕಿದೆ.
ಕೊಹ್ಲಿ 785 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, 784 ಅಂಕಗಳನ್ನು ಹೊಂದಿರುವ ಇದೇ ನ್ಯೂಜಿಲೆಂಡ್ ತಂಡದ ಡರಿಲ್ ಮಿಚೆಲ್ 2ನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಇಬ್ಬರ ನಡುವೆ ಕೇವಲ ಒಂದೇ ಒಂದು ಅಂಕದ ಅಂತರವಿದ್ದು, ಇಂದಿನ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿದರೆ ಅವರ ಅಂಕಗಳಿಕೆ ಹೆಚ್ಚಾಗಿ ಅವರ ಅಗ್ರಸ್ಥಾನ ಅಬಾಧಿತವಾಗಲಿದೆ.
ಒಂದು ವೇಳೆ ಕೊಹ್ಲಿ ಈ ಪರೀಕ್ಷೆಯಲ್ಲಿ ವಿಫಲರಾದರೆ ಡರೆಲ್ ಮಿಚೆಲ್ ಅಗ್ರಸ್ಥಾನಕ್ಕೇರಲಿದ್ದಾರೆ.
ತಂಡಗಳು ಇಂತಿವೆ
ನ್ಯೂಜಿಲೆಂಡ್ : ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ವಿಲ್ ಯಂಗ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಹೇ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್ (ನಾಯಕ), ಜಕಾರಿ ಫೌಲ್ಕ್ಸ್, ಕೈಲ್ ಜೇಮಿಸನ್, ಕ್ರಿಸ್ಟಿಯನ್ ಕ್ಲಾರ್ಕ್, ಜೇಡೆನ್ ಲೆನ್ನಾಕ್ಸ್
ಭಾರತ : ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್
Advertisement