

ವಡೋದರಾ: ಮುಂಬೈ ಇಂಡಿಯನ್ಸ್ (ಎಂಐ) ತಂಡದ ವಿಕೆಟ್ ಕೀಪರ್-ಬ್ಯಾಟರ್ ಜಿ ಕಮಲಿನಿ ಅವರು ಗಾಯದ ಕಾರಣದಿಂದಾಗಿ ಡಬ್ಯುಪಿಎಲ್ 2026ನೇ ಆವೃತ್ತಿಯಿಂದಲೇ ಹೊರಗುಳಿದಿದ್ದಾರೆ. ಹಾಲಿ ಚಾಂಪಿಯನ್ ಎಂಐ, ಉಳಿದ ಪಂದ್ಯಗಳಿಗೆ ಭಾರತದ ಸ್ಪಿನ್ನರ್ ವೈಷ್ಣವಿ ಶರ್ಮಾ ಅವರನ್ನು ಬದಲಿಯಾಗಿ ಆಯ್ಕೆ ಮಾಡಿದೆ. ಹದಿನೇಳು ವರ್ಷದ ಕಮಲಿನಿ ಗಾಯದ ಕಾರಣದಿಂದಾಗಿ ಪಂದ್ಯಾವಳಿಯಿಂದ ಹೊರಗುಳಿದಿದ್ದು, ಈ ಆವೃತ್ತಿಯಲ್ಲಿ 5 ಪಂದ್ಯಗಳನ್ನು ಆಡಿದ್ದರು.
'ಮುಂಬೈ ಇಂಡಿಯನ್ಸ್ (ಎಂಐ) 2026ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನ ಉಳಿದ ಪಂದ್ಯಗಳಿಗೆ ಜಿ ಕಮಲಿನಿ ಅವರ ಬದಲಿಗೆ ವೈಷ್ಣವಿ ಶರ್ಮಾ ಅವರನ್ನು ಆಯ್ಕೆ ಮಾಡಿದೆ. ವೈಷ್ಣವಿ ಶರ್ಮಾ ₹30 ಲಕ್ಷ ಬೆಲೆಗೆ ಮುಂಬೈ ತಂಡ ಸೇರಲಿದ್ದಾರೆ' ಎಂದು WPL ಪ್ರಕಟಣೆಯಲ್ಲಿ ತಿಳಿಸಿದೆ.
ಕಮಲಿನಿ ಈ ಬಾರಿಯ WPL ಆವೃತ್ತಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಮುಂಬೈ ಪರ ಆರಂಭಿಕರಾಗಿ ಆಡಿದರು. 97.40 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 75 ರನ್‌ಗಳನ್ನು ಗಳಿಸಿದರು.
2025ರಲ್ಲಿ ಭಾರತದ U-19 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ವೈಷ್ಣವಿ, ಕಳೆದ ತಿಂಗಳು ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ T20I ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಭಾರತ 5-0 ಅಂತರದಲ್ಲಿ ಸರಣಿ ಗೆದ್ದಿತ್ತು. 20 ವರ್ಷದ ವೈಷ್ಣವಿ ಭಾರತ ಪರ 5 ಟಿ20 ಪಂದ್ಯಗಳನ್ನು ಆಡಿದ್ದು, ಐದು ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡವು ಸದ್ಯದ ಆವೃತ್ತಿಯಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಹಾಲಿ ಚಾಂಪಿಯನ್‌ಗಳು ಸದ್ಯ ತಮ್ಮ ಅತ್ಯುತ್ತಮ ನೆಟ್ ರನ್-ರೇಟ್‌ನಿಂದಾಗಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ಲೇಆಫ್‌ಗೆ ಇನ್ನೂ ಮೂರು ಲೀಗ್ ಪಂದ್ಯಗಳು ಬಾಕಿ ಇರುವಾಗ, ಮಂಗಳವಾರ ಕೋಟಂಬಿಯ ಬಿಸಿಎ ಕ್ರೀಡಾಂಗಣದಲ್ಲಿ ಕೊನೆಯ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಸೆಣಸಬೇಕಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧದ T20I ಸರಣಿಯಲ್ಲಿ ಆಡಿದ್ದ ಕಮಲಿನಿ ಮತ್ತು ಎಡಗೈ ಸ್ಪಿನ್ನರ್ ವೈಷ್ಣವಿ ಇದೀಗ ಮೊದಲ ಬಾರಿಗೆ ODI ತಂಡಕ್ಕೆ ಆಯ್ಕೆಯಾಗಿದ್ದಾರೆ. ಮುಂಬರುವ ವೈಟ್-ಬಾಲ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡದೊಂದಿಗೆ ಇರಲಿದ್ದಾರೆ.
ಫೆಬ್ರುವರಿ 15 ರಿಂದ ಮಾರ್ಚ್ 1 ರವರೆಗೆ ಭಾರತ ಮೂರು ಟಿ20 ಪಂದ್ಯಗಳು ಮತ್ತು ಅಷ್ಟೇ ಸಂಖ್ಯೆಯ ಏಕದಿನ ಪಂದ್ಯಗಳನ್ನು ಆಡಲಿದ್ದು, ಮಾರ್ಚ್ 6 ರಿಂದ 9 ರವರೆಗೆ ಪರ್ತ್‌ನಲ್ಲಿ ಏಕೈಕ ಟೆಸ್ಟ್ ಪಂದ್ಯ ನಡೆಯಲಿದೆ. ಏಕೈಕ ಟೆಸ್ಟ್‌ಗೆ ತಂಡವನ್ನು ಇನ್ನೂ ಹೆಸರಿಸಲಾಗಿಲ್ಲ.
Advertisement