

ಕಳೆದ ವರ್ಷ ಐಪಿಎಲ್ 2026ರ ಹರಾಜಿನಿಂದ ಹಿಂದೆ ಸರಿದಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ತಾರೆ ಗ್ಲೆನ್ ಮ್ಯಾಕ್ಸ್‌ವೆಲ್ ಮುಂದಿನ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದಿಂದ ಬಿಡುಗಡೆಯಾದ ನಂತರ ಶ್ರೀಮಂತ ಲೀಗ್‌ನ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸದಿರಲು ಆಲ್‌ರೌಂಡರ್ ನಿರ್ಧರಿಸಿದ್ದರು. ಇದೀಗ, ಮ್ಯಾಕ್ಸ್‌ವೆಲ್ ಪೆಶಾವರ್ ಝಲ್ಮಿ ಪರ 4.5 ಕೋಟಿ (₹1.47 ಕೋಟಿ) ಬೆಲೆಗೆ ಆಡಲಿದ್ದಾರೆ.
ಪೇಶಾವರ್ ಝಲ್ಮಿ ತಂಡ ಮ್ಯಾಕ್ಸ್‌ವೆಲ್ ಅವರನ್ನು ₹1.47 ಕೋಟಿಗೆ ಖರೀದಿಸಿದ್ದು, ಮುಂದಿನ ಆವೃತ್ತಿಯ ಪಿಎಸ್‌ಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್ 2025ನೇ ಆವೃತ್ತಿಯಲ್ಲಿ ಕಳಪೆ ಪ್ರದರ್ಶನದಿಂದಾಗಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮಿನಿ-ಹರಾಜಿಗೆ ಮುಂಚಿತವಾಗಿ ಅವರನ್ನು ಬಿಡುಗಡೆ ಮಾಡಿತ್ತು. ಬಳಿಕ ಆಸ್ಟ್ರೇಲಿಯಾದ ಆಲ್‌ರೌಂಡರ್ ಐಪಿಎಲ್‌ನಿಂದ ಪಿಎಸ್‌ಎಲ್‌ನತ್ತ ಪಯಣ ಬೆಳೆಸಿದ್ದಾರೆ.
2012ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಮ್ಯಾಕ್ಸ್‌ವೆಲ್, ತಮ್ಮ ಆಕರ್ಷಕ ಹೊಡೆತದ ಸಾಮರ್ಥ್ಯದಿಂದ ಬಿಗ್ ಶೋ ಎಂಬ ಅಡ್ಡಹೆಸರನ್ನು ಗಳಿಸಿದರು. ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಅವರು ತಮ್ಮ ಖ್ಯಾತಿಗೆ ತಕ್ಕಂತೆ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಅವರ ಅತ್ಯುತ್ತಮ ಐಪಿಎಲ್ ಸೀಸನ್ 2014 ರಲ್ಲಿ ಬಂದಿತು. ಅಲ್ಲಿ ಅವರು 542 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ನಂತರ 2017 ರಲ್ಲಿ 310 ರನ್‌ಗಳು, 2021 ರಲ್ಲಿ 513, 2022 ರಲ್ಲಿ 301 ಮತ್ತು 2023 ರಲ್ಲಿ 400 ರನ್‌ಗಳನ್ನು ಗಳಿಸಿದರು. ಐಪಿಎಲ್ 2025ರ ಮೆಗಾ ಹರಾಜಿಗೂ ಮೊದಲು ಆರ್‌ಸಿಬಿ ಅವರನ್ನು ಬಿಡುಗಡೆ ಮಾಡಿತು ಮತ್ತು ಪಿಬಿಕೆಎಸ್ ₹4.20 ಕೋಟಿಗೆ ಅವರನ್ನು ಖರೀದಿಸಿತು.
ಐಪಿಎಲ್ 2025 ರಲ್ಲಿ ಮ್ಯಾಕ್ಸ್‌ವೆಲ್ ಆಡಿದ 9 ಪಂದ್ಯಗಳಲ್ಲಿ ಕೇವಲ 78 ರನ್ ಗಳಿಸಿ 4 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಮಧ್ಯದ ಬೆರಳಿನ ಮೂಳೆ ಮುರಿತದಿಂದಾಗಿ ಅವರು ಲೀಗ್‌ನ ಮಧ್ಯದಲ್ಲಿಯೇ ಹೊರಗುಳಿದರು. ಅವರ ಕಳಪೆ ಪ್ರದರ್ಶನವನ್ನು ಪರಿಗಣಿಸಿ, ಪಿಬಿಕೆಎಸ್ ತಂಡ ಅವರನ್ನು ಬಿಡುಗಡೆ ಮಾಡಿತು.
Advertisement