

ಓಕ್ಲ್ಯಾಂಡ್: ಟಿ20 ಕ್ರಿಕೆಟ್ ಅಂದ್ರೆನೇ ಹೊಡಿ ಬಡಿ ಆಟ.. ಆದ್ರೆ ಇಲ್ಲೊಂದು ಪಂದ್ಯ ಚುಟುಕು ಕ್ರಿಕೆಟ್ ಇತಿಹಾಸದ ದಾಖಲೆಗಳನ್ನೆಲ್ಲಾ ನುಚ್ಚುನೂರು ಮಾಡಿದೆ.
ಹೌದು.. ಕೆಲವು ಪಂದ್ಯಗಳು ಕೇವಲ ಗೆಲುವು-ಸೋಲಿನ ಲೆಕ್ಕಾಚಾರವಾಗಿರುವುದಿಲ್ಲ. ಅವು ಒಂದು ತಂಡದ ಹೋರಾಟ, ಆಟಗಾರರ ಆತ್ಮವಿಶ್ವಾಸ ಮತ್ತು ಅಭಿಮಾನಿಗಳ ನಿರೀಕ್ಷೆಗಳ ಕಥೆಯಾಗಿರುತ್ತವೆ. ಮೇಜರ್ ಲೀಗ್ ಕ್ರಿಕೆಟ್ (MLC) 2026ರ ಎಲಿಮಿನೇಟರ್ ಪಂದ್ಯವೂ ಅಂತಹದ್ದೇ ಒಂದು ಕ್ಷಣಕ್ಕೆ ಸಾಕ್ಷಿಯಾಯಿತು.
ಓಕ್ಲ್ಯಾಂಡ್ ನ ಓಕ್ಲ್ಯಾಂಡ್ ಕೊಲಿಸಿಯಂ ಮೈದಾನದಲ್ಲಿ ನಡೆದ ಮೇಜರ್ ಲೀಗ್ ಕ್ರಿಕೆಟ್ 2026 ಟೂರ್ನಿಯ ವಾಷಿಂಗ್ಟನ್ ಫ್ರೀಡಂ ಮತ್ತು ಎಂಐ ನ್ಯೂಯಾರ್ಕ್ ನಡುವಿನ ಎಲಿಮಿನೇಟರ್ ಪಂದ್ಯ ಟಿ20 ಕ್ರಿಕೆಟ್ ಇತಿಹಾಸದ ಅತ್ಯಂತ ಹುಚ್ಚು ಪಂದ್ಯ ಎಂಬ ಖ್ಯಾತಿಗೆ ತುತ್ತಾಗಿದೆ. ಇದಕ್ಕೆ ಕಾರಣ ಈ ಪಂದ್ಯದಲ್ಲಿ ಹರಿದುಬಂದ ರನ್ ಹೊಳೆ.
ಈ ಪಂದ್ಯದಲ್ಲಿ ಟೂರ್ನಿಯುದ್ದಕ್ಕೂ ಏರಿಳಿತಗಳನ್ನು ಕಂಡಿದ್ದ ವಾಷಿಂಗ್ಟನ್ ಫ್ರೀಡಂ, ನಿರ್ಣಾಯಕ ಪಂದ್ಯದಲ್ಲಿ ಅತ್ಯುತ್ತಮ ಆಟವಾಡಿ ಎಂಐ ನ್ಯೂಯಾರ್ಕ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಫ್ರೀಡಂ ಪ್ರಶಸ್ತಿಯ ಕನಸನ್ನು ಜೀವಂತವಾಗಿರಿಸಿಕೊಂಡರೆ, ಮಾಜಿ ಚಾಂಪಿಯನ್ ಎಂಐ ನ್ಯೂಯಾರ್ಕ್ ಟೂರ್ನಿಗೆ ವಿದಾಯ ಹೇಳಬೇಕಾಯಿತು.
ಎಂಐ ನ್ಯೂಯಾರ್ಕ್ ಸಿಡಿಲಬ್ಬರದ ಬ್ಯಾಟಿಂಗ್
ಪಂದ್ಯ ಆರಂಭದಿಂದಲೇ ಎಂಐ ನ್ಯೂಯಾರ್ಕ್ ಬ್ಯಾಟರ್‌ಗಳು ಅಬ್ಬರಿಸಿದರು. ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ 24 ಎಸೆತಗಳಲ್ಲಿ 51 ರನ್ ಗಳಿಸಿ ವೇದಿಕೆ ಸಿದ್ಧಪಡಿಸಿದರೆ, ನಾಯಕ ನಿಕೋಲಸ್ ಪೂರನ್ ಕೇವಲ 33 ಎಸೆತಗಳಲ್ಲಿ 106 ರನ್ ಸಿಡಿಸಿ MLC ಇತಿಹಾಸದ ಅತಿ ವೇಗದ ಶತಕ ದಾಖಲಿಸಿದರು.
ಅವರ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಹಾಗೂ 13 ಭರ್ಜರಿ ಸಿಕ್ಸರ್‌ಗಳು ಸೇರಿದ್ದವು. ಮತ್ತೊಂದೆಡೆ ಅನುಭವಿ ಕೀರನ್ ಪೊಲಾರ್ಡ್ ಕೂಡ 25 ಎಸೆತಗಳಲ್ಲಿ 64 ರನ್ ಸಿಡಿಸಿ ತಂಡವನ್ನು 266/9 ಎಂಬ ಬೃಹತ್ ಮೊತ್ತಕ್ಕೆ ಕೊಂಡೊಯ್ದರು.
ವಾಷಿಂಗ್ಟನ್ ಫ್ರೀಡಂ ದಾಖಲೆಯ ಚೇಸಿಂಗ್
ಇನ್ನು 266 ರನ್ ಬೆನ್ನಟ್ಟುವುದು ಟಿ20 ಕ್ರಿಕೆಟ್‌ನಲ್ಲಿ ಅಸಾಧ್ಯವೆಂದೇ ಭಾವಿಸಲಾಗುತ್ತಿತ್ತು. ಆದರೆ ವಾಷಿಂಗ್ಟನ್ ಫ್ರೀಡಂ ಬ್ಯಾಟರ್‌ಗಳು ಅದನ್ನೇ ಸಾಧ್ಯವನ್ನಾಗಿ ಮಾಡಿದರು. ಬೃಹತ್ ಗುರಿ ಬೆನ್ನು ಹತ್ತಿದ ವಾಷಿಂಗ್ಟನ್ ಫ್ರೀಡಂ ತಂಡ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡರೂ ಕುಗ್ಗಲಿಲ್ಲ.
ನಾಯಕ ಸ್ಟೀವ್ ಸ್ಮಿತ್ 48 ಎಸೆತಗಳಲ್ಲಿ 110 ರನ್ ಬಾರಿಸಿದರೆ, ಮತ್ತೊಂದು ತುದಿಯಲ್ಲಿ ಆಂಡ್ರೀಸ್ ಗೌಸ್ ಕೇವಲ 51 ಎಸೆತಗಳಲ್ಲಿ ಅಜೇಯ 132 ರನ್ ಸಿಡಿಸಿ ಎಂಐ ಬೌಲರ್‌ಗಳ ಮೇಲೆ ದಾಳಿ ನಡೆಸಿದರು. ಗೌಸ್ ಅವರ ಇನ್ನಿಂಗ್ಸ್‌ನಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆಯೇ ಹರಿಯಿತು. ಕೊನೆಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಗೆಲುವಿನ ರನ್ ಗಳಿಸುತ್ತಿದ್ದಂತೆ ವಾಷಿಂಗ್ಟನ್ ಫ್ರೀಡಂ 18.4 ಓವರ್‌ಗಳಲ್ಲಿ 270/4 ದಾಖಲಿಸಿ ಅಸಾಧ್ಯ ಗುರಿಯನ್ನು ಸುಲಭವಾಗಿ ತಲುಪಿತು.
ದಾಖಲೆಯ ಚೇಸಿಂಗ್, ರನ್ ಸುರಿಮಳೆ
ಒಂದು ಕಡೆ ಕೇವಲ 33 ಎಸೆತಗಳಲ್ಲಿ ಸಿಡಿಲಿನ ಶತಕ ಸಿಡಿಸಿದ ನಿಕೋಲಸ್ ಪೂರನ್... ಮತ್ತೊಂದು ಕಡೆ ಸ್ಟೀವ್ ಸ್ಮಿತ್‌ನ ಅನುಭವ ಮತ್ತು ಆಂಡ್ರೀಸ್ ಗೌಸ್‌ನ ಅಬ್ಬರದ ಬ್ಯಾಟಿಂಗ್.
ಅಂತಿಮವಾಗಿ ಗೆದ್ದದ್ದು ವ್ಯಕ್ತಿಯಲ್ಲ, ತಂಡದ ಆಟ. ಮೇಜರ್ ಲೀಗ್ ಕ್ರಿಕೆಟ್ (MLC) 2026ರ ಎಲಿಮಿನೇಟರ್ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ವರ್ಷಗಳ ಕಾಲ ನೆನಪಿನಲ್ಲಿ ಉಳಿಯುವ ರೋಚಕ ಕ್ಷಣಗಳನ್ನು ಉಣಬಡಿಸಿತು.
ಕ್ಯಾಲಿಫೋರ್ನಿಯಾದ ಓಕ್‌ಲ್ಯಾಂಡ್ ಕೊಲಿಸಿಯಂನಲ್ಲಿ ನಡೆದ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ 6 ವಿಕೆಟ್‌ಗಳಿಂದ ಎಂಐ ನ್ಯೂಯಾರ್ಕ್ ತಂಡವನ್ನು ಮಣಿಸಿ ಕ್ವಾಲಿಫೈಯರ್-2ಗೆ ಲಗ್ಗೆಯಿಟ್ಟಿತು. ಅಂತೆಯೇ ಆಂಡ್ರೀಸ್ ಗೌಸ್ ಅವರ ಅಮೋಘ ಶತಕಕ್ಕೆ ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿ ಲಭಿಸಿತು.
ವಿಶ್ವದಾಖಲೆಗಳ ಸರಮಾಲೆ
ಈ ಗೆಲುವಿಗಿಂತಲೂ ಹೆಚ್ಚು ಚರ್ಚೆಯಾಗುತ್ತಿರುವುದು ಪಂದ್ಯದಲ್ಲಿ ನಿರ್ಮಾಣವಾದ ವಿಶ್ವದಾಖಲೆಗಳ ಸರಮಾಲೆ. ಈ ಪಂದ್ಯ ಟಿ20 ಕ್ರಿಕೆಟ್ ಇತಿಹಾಸದ ಅತೀ ದೊಡ್ಡ ಚೇಸಿಂಗ್ ಗೆ ವೇದಿಕೆಯಾಗಿತ್ತು.
ಟಿ20 ಕ್ರಿಕೆಟ್ ಇತಿಹಾಸದಲ್ಲೇ 267 ರನ್‌ಗಳ ಅತ್ಯಂತ ದೊಡ್ಡ ಮೊತ್ತವನ್ನು ಚೇಸ್ ಮಾಡಿ ಗೆದ್ದಿರುವುದು ಇದೇ ಮೊದಲು. ಅಂತೆಯೇ ಒಂದೇ ಪುರುಷರ ಟಿ20 ಪಂದ್ಯದಲ್ಲಿ ಮೂರು ಶತಕಗಳು ದಾಖಲಾದ ಮೊದಲ ಪಂದ್ಯ ಇದಾಗಿದೆ. ಈ ಪಂದ್ಯದಲ್ಲಿ ನಿಕೋಲಸ್ ಪೂರನ್, ಸ್ಟೀವ್ ಸ್ಮಿತ್ ಮತ್ತು ಆಂಡ್ರೀಸ್ ಗೌಸ್ ಶತಕ ಸಿಡಿಸಿದರು.
ಅಂತೆಯೇ ಈ ಪಂದ್ಯದ ಎರಡೂ ಇನ್ನಿಂಗ್ಸ್ ಗಳಿಂದ ಬರೊಬ್ಬರಿ 51 ಸಿಕ್ಸರ್ ಗಳು ಹರಿದುಬಂದಿದ್ದು, ಇದು ಟಿ20 ಇತಿಹಾಸದಲ್ಲೇ ಹೊಸ ದಾಖಲೆ ಕೂಡ ಆಗಿದೆ. ನಿಕೋಲಸ್ ಪೂರನ್ ಅವರ 31 ಎಸೆತಗಳ ಶತಕ MLC ಟೂರ್ನಿ ಇತಿಹಾಸದ ಅತಿ ವೇಗದ ಶತಕಗಳಲ್ಲಿ ಒಂದಾಗಿದೆ.
ಆಂಡ್ರೀಸ್ ಗೌಸ್ (132 ಅಜೇಯ) ಮತ್ತು ಸ್ಟೀವ್ ಸ್ಮಿತ್ (110) ಜೋಡಿ 249 ರನ್‌ಗಳ ಅಮೋಘ ಜೊತೆಯಾಟ ನಡೆಸಿ ಪಂದ್ಯದ ದಿಕ್ಕನ್ನೇ ಬದಲಿಸಿದರು. ಇದೂ ಕೂಡ ದೊಡ್ಡ ದಾಖಲೆಯಾಗಿದೆ.
ಉಳಿದಂತೆ ಈ ಒಂದು ಪಂದ್ಯದಲ್ಲಿ ಸೋತ ತಂಡದ ಬ್ಯಾಟರ್ ಶತಕ ಬಾರಿಸಿದರೂ, ಗೆದ್ದ ತಂಡದಲ್ಲಿ ಇಬ್ಬರು ಶತಕ ಸಿಡಿಸಿ ಇತಿಹಾಸ ನಿರ್ಮಿಸುವುದು ಅಪರೂಪ. ಆ ಕಾರಣಕ್ಕೇ ಈ ಎಲಿಮಿನೇಟರ್ ಪಂದ್ಯ ಕೇವಲ ಒಂದು ಪಂದ್ಯವಲ್ಲ; ಟಿ20 ಕ್ರಿಕೆಟ್‌ನ ಹೊಸ ಅಧ್ಯಾಯ ಎಂದು ಖ್ಯಾತಿ ಪಡೆದಿದೆ.