'ಇಲ್ಲಿಯೇ ಸಂತೋಷವಾಗಿದ್ದೇನೆ': ಇಂಗ್ಲೆಂಡ್ ಟೆಸ್ಟ್ ಕೋಚ್ ಹುದ್ದೆ ತಿರಸ್ಕರಿಸಿದ ಆಂಡಿ ಫ್ಲವರ್; RCBಯಲ್ಲೇ ಮುಂದುವರಿಯಲು ನಿರ್ಧಾರ!

ಇಸಿಬಿ ವ್ಯವಸ್ಥಾಪಕ ನಿರ್ದೇಶಕ ರಾಬ್ ಕೀ ಅವರೊಂದಿಗೆ ಚರ್ಚೆ ನಡೆಸಿದ್ದರೂ, ಅದನ್ನು ತಿರಸ್ಕರಿಸಿರುವ ಫ್ಲವರ್ ತಮ್ಮ ಸದ್ಯದ ಸೆಟಪ್‌ನ ಸಂತೋಷವನ್ನು ಉಲ್ಲೇಖಿಸಿ ತಮ್ಮ ಯಶಸ್ವಿ ಫ್ರಾಂಚೈಸಿ ಕೋಚಿಂಗ್ ಪಾತ್ರಗಳನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
Andy Flower
ಆಂಡಿ ಫ್ಲವರ್
Updated on

ಇತ್ತೀಚೆಗೆ ಇಂಗ್ಲೆಂಡ್‌ನ ಟೆಸ್ಟ್ ಮುಖ್ಯ ಕೋಚ್ ಹುದ್ದೆಯಿಂದ ಬ್ರೆಂಡನ್ ಮೆಕಲಮ್ ಬಿಡುಗಡೆಯಾದ ನಂತರ ಆಂಡಿ ಫ್ಲವರ್ ಇಂಗ್ಲೆಂಡ್‌ನ ಹೊಸ ಟೆಸ್ಟ್ ಮುಖ್ಯ ಕೋಚ್ ಆಗಲಿದ್ದಾರೆ ಎನ್ನುವ ವರದಿಗಳು ಕೇಳಿಬಂದಿದ್ದವು. ಇದೀಗ ಈ ವರದಿಯನ್ನು ತಿರಸ್ಕರಿಸಿರುವ ಆಂಡಿ ಫ್ಲವರ್ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ದಿ ಹಂಡ್ರೆಡ್‌ನಲ್ಲಿ ಲಂಡನ್ ಸ್ಪಿರಿಟ್‌ಗೆ ತರಬೇತಿ ನೀಡುವುದನ್ನು ಮುಂದುವರಿಸಲು ಆಯ್ಕೆ ಮಾಡಿಕೊಂಡಿದ್ದಾರೆ.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ವ್ಯವಸ್ಥಾಪಕ ನಿರ್ದೇಶಕ ರಾಬ್ ಕೀ ಅವರೊಂದಿಗೆ ಚರ್ಚೆ ನಡೆಸಿದ್ದರೂ, ಅದನ್ನು ತಿರಸ್ಕರಿಸಿರುವ ಫ್ಲವರ್ ತಮ್ಮ ಸದ್ಯದ ಸೆಟಪ್‌ನ ಸಂತೋಷವನ್ನು ಉಲ್ಲೇಖಿಸಿ ತಮ್ಮ ಯಶಸ್ವಿ ಫ್ರಾಂಚೈಸಿ ಕೋಚಿಂಗ್ ಪಾತ್ರಗಳನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. 2009 ರಿಂದ 2014 ರವರೆಗೆ ಇಂಗ್ಲೆಂಡ್‌ಗೆ ಯಶಸ್ವಿಯಾಗಿ ಮಾರ್ಗದರ್ಶನ ನೀಡಿದ ಫ್ಲವರ್, ಮೆಕಲಮ್ ಬದಲಿಗೆ ಪ್ರಾಥಮಿಕ ಸ್ಪರ್ಧಿಯಾಗಿದ್ದರು. ಆದಾಗ್ಯೂ, ಲಂಡನ್ ಸ್ಪಿರಿಟ್‌ಗಾಗಿ ನಡೆದ ಮಾಧ್ಯಮ ದಿನದಂದು ಅವರು ತಮ್ಮ ಸದ್ಯದ ಬದ್ಧತೆಗಳನ್ನು ಬಿಡಲು ಆಸಕ್ತಿ ಹೊಂದಿಲ್ಲ ಎಂದು ದೃಢಪಡಿಸಿದರು.

ತಮ್ಮ ಹೆಸರನ್ನು ಪರಿಗಣನೆಯಿಂದ ಕೈಬಿಟ್ಟಿದ್ದೀರಾ ಎಂದು ಕೇಳಿದಾಗ, 'ಹೌದು, ಹಾಗೆ ಮಾಡಿದ್ದೇನೆ. ನಾನು ಇಸಿಬಿ (ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ) ಜೊತೆ ಮಾತನಾಡಿದ್ದೇನೆ. ಇಂಗ್ಲೆಂಡ್ ರಾಷ್ಟ್ರೀಯ ತಂಡದ ಮುಖ್ಯ ತರಬೇತುದಾರರ ಹುದ್ದೆ ಖಾಲಿ ಇರುವುದರ ಬಗ್ಗೆ ನನಗೆ ತಿಳಿದಿದೆ' ಎಂದು ಫ್ಲವರ್ ಸೇರಿಸಿದರು.

'ಈ ವಿಷಯದ ಕುರಿತು ನಾನು ಇಸಿಬಿ (ECB) ಯ ಪುರುಷರ ಕ್ರಿಕೆಟ್ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ರಾಬ್ (ಕೀ) ಅವರೊಂದಿಗೆ ಮಾತನಾಡಿದ್ದೇನೆ. ನನ್ನ ಮಟ್ಟಿಗೆ ಹೇಳುವುದಾದರೆ, ಸದ್ಯ ನಾನು ಮಾಡುತ್ತಿರುವ ಕೆಲಸದ ಬಗ್ಗೆ ನನಗೆ ತುಂಬಾ ಸಂತೋಷವಿದೆ' ಎಂದರು.

Andy Flower
'RCB ಮುಖ್ಯ ಕೋಚ್ ಆಂಡಿ ಫ್ಲವರ್ ಕರೆತರಲು ಏನು ಬೇಕಾದರೂ ಮಾಡುತ್ತೇನೆ': ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್

'ನಾನು ಕೆಲವು ಅತ್ಯುತ್ತಮ ಸಂಸ್ಥೆಗಳೊಂದಿಗೆ ಹಾಗೂ ಉತ್ತಮ ತಂಡಗಳೊಂದಿಗೆ ಕೆಲಸ ಮಾಡುತ್ತಿದ್ದೇನೆ ಮತ್ತು ಸದ್ಯ ನಾನು ಮಾಡುತ್ತಿರುವ ಕೆಲಸದ ಬಗ್ಗೆ ನನಗೆ ಸಂಪೂರ್ಣ ತೃಪ್ತಿಯಿದೆ. ಪಿಎಲ್ (IPL) ಟೂರ್ನಿಯು ಇಂಗ್ಲಿಷ್ ಕ್ರಿಕೆಟ್‌ನ ಬೇಸಿಗೆಯ ಆರಂಭಿಕ ತಿಂಗಳುಗಳೊಂದಿಗೆ ಏಕಕಾಲದಲ್ಲಿ ನಡೆಯುವುದರಿಂದ, ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಸಂಬಂಧಿಸಿದ ಜವಾಬ್ದಾರಿಯೊಂದಿಗೆ ಐಪಿಎಲ್ ಅನ್ನು ನಿಭಾಯಿಸುವುದು ಕಷ್ಟಕರ' ಎಂದು ಅವರು ತಿಳಿಸಿದರು.

'ವೈಯಕ್ತಿಕವಾಗಿ ಹೇಳುವುದಾದರೆ, ಎರಡನ್ನೂ ಏಕಕಾಲದಲ್ಲಿ ನಿಭಾಯಿಸಲು ನನಗೆ ಸಾಧ್ಯವಾಗುತ್ತದೆ ಎಂದು ನಾನು ಭಾವಿಸುವುದಿಲ್ಲ; ಇಂಗ್ಲೆಂಡ್‌ನ ಟೆಸ್ಟ್ ಕ್ರಿಕೆಟ್ ಆವೃತ್ತಿಯ ಆರಂಭದ ಸಮಯದಲ್ಲೇ ಐಪಿಎಲ್ (IPL) ನಡೆಯುವುದರಿಂದ, ಇಂಗ್ಲೆಂಡ್ ಟೆಸ್ಟ್ ತಂಡದೊಂದಿಗೆ ಪೂರ್ಣಕಾಲಿಕ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ಕಷ್ಟಕರವಾಗಿರುತ್ತದೆ' ಎಂದು ಅವರು ಹೇಳಿದರು.

'ನಾನು ಈ ಹಿಂದೆ ಇಂಗ್ಲೆಂಡ್ ತಂಡದೊಂದಿಗೆ ಕೆಲಸ ಮಾಡಿದ್ದೇನೆ ಮತ್ತು ಆ ಸಮಯವು ಅತ್ಯುತ್ತಮವಾಗಿತ್ತು. ಕೆಲವು ವರ್ಷಗಳ ಹಿಂದೆ ಇಂಗ್ಲೆಂಡ್ ತಂಡದ ಮುಖ್ಯ ತರಬೇತುದಾರನಾಗಿ (head coach) ಕಾರ್ಯನಿರ್ವಹಿಸುವ ಮತ್ತು ತಂಡವನ್ನು ಪ್ರತಿನಿಧಿಸುವ ಸೌಭಾಗ್ಯ ನನಗೆ ಸಿಕ್ಕಿತ್ತು; ಆ ದಿನಗಳನ್ನು ನಾನು ಬಹಳ ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಟೆಸ್ಟ್ ತಂಡದ ಕೋಚ್ ಆಗುವುದು ನನಗಾಗಲಿ ಅಥವಾ ಬೇರೆ ಯಾರಿಗಾಗಲಿ ಒಂದು ಗೌರವದ ವಿಷಯವಾಗಿರುತ್ತದೆ. ಸದ್ಯಕ್ಕೆ, ನಾನು ಮಾಡುತ್ತಿರುವ ಕೆಲಸದ ಬಗ್ಗೆ ನನಗೆ ಸಂಪೂರ್ಣ ತೃಪ್ತಿಯಿದೆ ಮತ್ತು ಅದನ್ನೇ ಮುಂದುವರಿಸಲು ಬಯಸುತ್ತೇನೆ' ಎಂದರು.

ಫ್ಲವರ್ ಅವರು ಹಿಂದೆ ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಆಗಿದ್ದಾಗ, ತಂಡವನ್ನು ವಿಶ್ವದ ನಂ.1 ಸ್ಥಾನಕ್ಕೇರಿಸಿದ್ದರು ಮತ್ತು ಮೂರು ಬಾರಿ ಆಶಸ್ (Ashes) ಸರಣಿಯನ್ನು ಗೆದ್ದುಕೊಟ್ಟಿದ್ದರು. ಜಿಂಬಾಬ್ವೆಯವರಾದ ಅವರು ಇದೀಗ 'ದಿ ಹಂಡ್ರೆಡ್' (The Hundred) ಟೂರ್ನಿಯಲ್ಲಿ ಲಂಡನ್ ಸ್ಪಿರಿಟ್ ತಂಡವನ್ನು ನಿರ್ವಹಿಸುತ್ತಿದ್ದಾರೆ. ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಕೋಚ್ ಆಗಿದ್ದು, ಮೇ ತಿಂಗಳಲ್ಲಿ ಆ ತಂಡದೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com