'ಸುಮ್ಮನೆ ಕುಳಿತು ಚಪ್ಪಾಳೆ ತಟ್ಟುವುದು ಮಾತ್ರ ನನ್ನ ಕೈಯಲ್ಲಿತ್ತು; ಭಾರತೀಯ ಕ್ರಿಕೆಟಿಗನಾಗಿರುವುದರ ವಿಶೇಷತೆಯೇ ಇದು': ಸಂಜು ಸ್ಯಾಮ್ಸನ್

ಇಶಾನ್ ಕಿಶನ್ ಟಿ20 ವಿಶ್ವಕಪ್ ಸರಣಿಯುದ್ದಕ್ಕೂ ಪರಿಣಾಮಕಾರಿ ಆಟದ ಮೂಲಕ ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರೆ, ಸ್ಯಾಮ್ಸನ್ ಕಳಪೆ ಫಾರ್ಮ್‌ನಿಂದಾಗಿ ಪರದಾಡಿದರು.
Sanju Samson
ಸಂಜು ಸ್ಯಾಮ್ಸನ್
Updated on

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿನ ನಿರಾಶಾದಾಯಕ ಪ್ರದರ್ಶನದ ಬಳಿಕ, ಐಸಿಸಿ ಪುರುಷರ ಟಿ20 ವಿಶ್ವಕಪ್ ತಂಡದ ಅಂತಿಮ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ತಪ್ಪಿದ್ದನ್ನು ತಾವು ಹೇಗೆ ಸ್ವೀಕರಿಸಿದೆ ಎಂಬುದನ್ನು ಭಾರತದ ವಿಕೆಟ್-ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಬಹಿರಂಗಪಡಿಸಿದ್ದಾರೆ. ಆಯ್ಕೆ ಪ್ರಕ್ರಿಯೆಯಲ್ಲಿ ಇಶಾನ್ ಕಿಶನ್ ಅವರ ಹೆಸರು ಮುಂದಕ್ಕೆ ಬಂದಾಗ ತಮ್ಮ ಅವಕಾಶದ ಭರವಸೆಗಳು ಮುಗಿದುಹೋದವು ಎಂಬುದು ತಮಗೆ ಅರಿವಿತ್ತು. ಕಿಶನ್ ತಮ್ಮ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಾಗ ಆಯ್ಕೆಗಾರರ ​​ಚಿಂತನೆಯಲ್ಲಿ ಬದಲಾವಣೆಯಾಗುತ್ತಿರುವುದನ್ನು ತಾವು ಗಮನಿಸಿದ್ದಾಗಿ ಸ್ಯಾಮ್ಸನ್ ಒಪ್ಪಿಕೊಂಡಿದ್ದಾರೆ.

'ಆ ನಂತರ ಇಶಾನ್ ಕಿಶನ್ ಬಂದರು ಮತ್ತು ಅವರ ಕಥೆಯೇ ಸಂಪೂರ್ಣ ಭಿನ್ನವಾಗಿತ್ತು. ಅವರು ಆರಂಭದಲ್ಲಿ ತಂಡದಲ್ಲಿಯೂ ಇರಲಿಲ್ಲ. ಆದರೆ, ಬಹುತೇಕ ಏಕಾಂಗಿಯಾಗಿಯೇ ಜಾರ್ಖಂಡ್‌ಗೆ 'ಸೈಯದ್ ಮುಷ್ತಾಕ್ ಅಲಿ ಟ್ರೋಫಿ'ಯನ್ನು ಗೆದ್ದುಕೊಟ್ಟರು; ನಂತರ ಭಾರತೀಯ ತಂಡಕ್ಕೆ ಸೇರ್ಪಡೆಗೊಂಡು ಅತ್ಯುನ್ನತ ಮಟ್ಟದ ಬ್ಯಾಟಿಂಗ್ ಪ್ರದರ್ಶಿಸಿದರು. ತಂಡದ ಆಯ್ಕೆ ಶ್ರೇಣಿಯಲ್ಲಿ ಇಶಾನ್ ನನ್ನನ್ನು ಹಿಂದಿಕ್ಕಿ ಮುಂದಕ್ಕೆ ಸಾಗುತ್ತಿದ್ದಾರೆ ಎಂಬುದು ನನಗೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು' ಎಂದು ಸ್ಯಾಮ್ಸನ್ 'ಜಿಯೋಸ್ಟಾರ್'ಗೆ ತಿಳಿಸಿದರು.

ಕಿಶನ್ ಸರಣಿಯುದ್ದಕ್ಕೂ ಪರಿಣಾಮಕಾರಿ ಆಟದ ಮೂಲಕ ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರೆ, ಸ್ಯಾಮ್ಸನ್ ಕಳಪೆ ಫಾರ್ಮ್‌ನಿಂದಾಗಿ ಪರದಾಡಿದರು. ಇದರಿಂದಾಗಿ, ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ತಮ್ಮ ಪ್ರಯತ್ನವು ವಾಸ್ತವವಾಗಿ ಅಂತ್ಯಗೊಂಡಿದೆ ಎಂಬ ನಿರ್ಧಾರಕ್ಕೆ ಕೇರಳದ ಈ ಬ್ಯಾಟರ್ ಬಂದಿದ್ದರು.

'ನೀವು ಐದು ಪಂದ್ಯಗಳಲ್ಲಿ 24, 6, 6, 10 ಮತ್ತು 0 ರನ್ ಗಳಿಸುತ್ತೀರಿ; ಆಗ ಇನ್ನೊಬ್ಬ ಆಟಗಾರ ಬಂದು ತಕ್ಷಣವೇ 70ರ ಆಸುಪಾಸಿನಲ್ಲಿ ರನ್ ಗಳಿಸಿ, ಸರಣಿಯ ನಂತರದ ಹಂತದಲ್ಲಿ ಶತಕವನ್ನೂ ಬಾರಿಸುತ್ತಾನೆ. ಇತ್ತ, ಮುಂದಿನ ಪಂದ್ಯ ನೇರವಾಗಿ ಟಿ20 ವಿಶ್ವಕಪ್‌ನದ್ದೇ ಆಗಿರುತ್ತದೆ. ಅಂಥ ಸಂದರ್ಭದಲ್ಲಿ ಯಾರಾದರೂ ಫಾರ್ಮ್‌ನಲ್ಲಿರುವ ಬ್ಯಾಟರ್‌ಗೇ ಆದ್ಯತೆ ನೀಡುತ್ತಾರೆ. ವಿಶ್ವಕಪ್‌ನಲ್ಲಿ ನನ್ನ ಪಾತ್ರ ಮುಗಿದುಹೋಗಿದೆ ಎಂಬುದು ಸ್ಪಷ್ಟವಾಗಿತ್ತು. ಆಗಬೇಕಾದ್ದೆಲ್ಲ ಆಗಿಹೋಗಿತ್ತು; ಹೀಗಾಗಿ, ಸುಮ್ಮನೆ ಕುಳಿತು ಚಪ್ಪಾಳೆ ತಟ್ಟುವುದು ಮಾತ್ರವೇ ನನ್ನ ಕೈಯಲ್ಲಿದ್ದ ಏಕೈಕ ಕೆಲಸವಾಗಿತ್ತು' ಎಂದು ಅವರು ಹೇಳಿದರು.

Sanju Samson
'ಸಂಜು ಸ್ಯಾಮ್ಸನ್, ವೈಭವ್ ಸೂರ್ಯವಂಶಿ ಬಳಿಕ ಕೆ.ಎಲ್ ರಾಹುಲ್‌ಗೆ ಅನ್ಯಾಯ': ಗೌತಮ್ ಗಂಭೀರ್‌ ವಿರುದ್ಧ ಕ್ರಿಸ್ ಶ್ರೀಕಾಂತ್ ಕಿಡಿ

ಅದ್ಭುತ ಫಾರ್ಮ್‌ನೊಂದಿಗೆ ಭಾರತದ ಟಿ20 ಅಂತರರಾಷ್ಟ್ರೀಯ (T20I) ತಂಡದಲ್ಲಿ ಅಂತಿಮವಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದೇನೆ ಎಂದು ಭಾವಿಸಿದ್ದ ಸಮಯದಲ್ಲೇ ಈ ನಿರಾಶೆ ಎದುರಾಗಿದ್ದರಿಂದ, ಅದು ತಮಗೆ ಹೆಚ್ಚು ನೋವುಂಟುಮಾಡಿತು ಎಂದು 31 ವರ್ಷದ ಆಟಗಾರ ಹೇಳಿದರು.

'ವಾಸ್ತವವಾಗಿ, ಭಾರತೀಯ ಕ್ರಿಕೆಟಿಗನಾಗಿರುವುದರ ವಿಶೇಷತೆಯೇ ಇದಾಗಿದೆ. ಒಂದೇ ದಿನದಲ್ಲಿ ಎಲ್ಲವೂ ಬದಲಾಗಬಹುದು. ನನ್ನ ವಿಷಯದಲ್ಲೂ ಅದೇ ನಡೆಯಿತು. ನನಗೆ ಆ ಏಳು ಪಂದ್ಯಗಳ ಅವಕಾಶ ಸಿಕ್ಕಾಗ, ಆ ಪಂದ್ಯಗಳಲ್ಲಿ ನಾನು ಮೂರು ಶತಕಗಳನ್ನು ಬಾರಿಸುತ್ತೇನೆ ಎಂದು ನಾನೇ ಊಹಿಸಿರಲಿಲ್ಲ' ಎಂದರು.

ತನ್ನ ಯಶಸ್ಸು ತಂಡದಲ್ಲಿ ತನ್ನ ಸ್ಥಾನ ಭದ್ರವಾಗಿದೆ ಎಂದು ಅನೇಕರಿಗೆ ಮನವರಿಕೆ ಮಾಡಿಕೊಟ್ಟಿತ್ತಾದರೂ, ತಾನು ಎಂದಿಗೂ ಆ ರೀತಿ ಭಾವಿಸಲಿಲ್ಲ. ಸಿದ್ಧತೆ ಮತ್ತು ಮಾನಸಿಕ ಸ್ವಾಸ್ಥ್ಯದ ನಡುವೆ ಸಮತೋಲನ ಕಾಯ್ದುಕೊಳ್ಳುವ ವಿಚಾರದಲ್ಲಿನ ಹಿನ್ನಡೆಯು ತನಗೆ ಒಂದು ಪ್ರಮುಖ ಪಾಠವನ್ನು ಕಲಿಸಿತು ಎಂಬುದನ್ನೂ ಈ ವಿಕೆಟ್-ಕೀಪರ್ ಬ್ಯಾಟರ್ ಒಪ್ಪಿಕೊಂಡರು.

'ನಾನು ಆ ರನ್‌ಗಳನ್ನು ಗಳಿಸಿದಾಗ, 'ಈಗ ನಿನ್ನ ಸ್ಥಾನ ಭದ್ರವಾಗಿದೆ, ನೀನು ತಂಡದಲ್ಲಿ ನೆಲೆ ಕಂಡುಕೊಂಡಿದ್ದೀಯಾ. T20I ತಂಡದಲ್ಲಿ ನಿನ್ನ ಸ್ಥಾನ ಖಚಿತವಾಗಿದೆ' ಎಂದು ಜನರು ಹೇಳುತ್ತಿದ್ದರು. ಆದರೆ ನನ್ನ ಮನಸ್ಸಿಗೆ ಅದನ್ನು ನಂಬಲು ಸಾಧ್ಯವಾಗುತ್ತಿರಲಿಲ್ಲ. ಅದು ನಿಜವಾಗಿಯೂ ಹಾಗೆಯೇ ಆಗಿತ್ತೇ? ನಂತರ ನ್ಯೂಜಿಲೆಂಡ್ ವಿರುದ್ಧದ ಸರಣಿ ನಡೆಯಿತು. T20 ಮಾದರಿಯು ನಿಜಕ್ಕೂ ವಿಚಿತ್ರವಾದ ಆಟ. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಗುರಿ ನನ್ನ ಕಣ್ಣ ಮುಂದೆಯೇ ಇತ್ತು; ಅದಕ್ಕಾಗಿ ನಾನು ನನ್ನ ಸರ್ವಸ್ವವನ್ನೂ ಧಾರೆಯೆರೆದೆ ಮತ್ತು ಹುಚ್ಚನಂತೆ ಅಭ್ಯಾಸ ಮಾಡಿದೆ. ಆದರೆ, ಅಷ್ಟೆಲ್ಲಾ ಶ್ರಮಪಟ್ಟ ನಂತರವೂ, ಐದು ಪಂದ್ಯಗಳಲ್ಲಿ ನನ್ನ ಗರಿಷ್ಠ ಸ್ಕೋರ್ ಕೇವಲ 24 ಆಗಿತ್ತು' ಎಂದು ಹೇಳಿದರು.

'ನಾನು ಅತಿಯಾಗಿ ಶ್ರಮಿಸುತ್ತಿದ್ದೆ ಎಂಬುದು ನನಗೆ ಅರಿವಾಯಿತು; ಗಂಟೆಗಟ್ಟಲೆ ಅಭ್ಯಾಸ ಮಾಡುವುದಕ್ಕಿಂತಲೂ ಸಂತೋಷವಾಗಿರುವುದು ಮತ್ತು ಮಾನಸಿಕವಾಗಿ ಉತ್ತಮ ಸ್ಥಿತಿಯಲ್ಲಿರುವುದು ಹೆಚ್ಚು ಮುಖ್ಯ ಎಂಬ ನನ್ನ ಪತ್ನಿಯ ಮಾತು ಸರಿಯಾಗಿತ್ತು. ನ್ಯೂಜಿಲೆಂಡ್ ಸರಣಿಯು ನನಗೆ ಆ ಪಾಠವನ್ನು ಕಲಿಸಿತು' ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com