

ಮಥುರಾ: ಅಹಮದಾಬಾದ್‌ನಲ್ಲಿ ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ 19ನೇ ಸೀಸನ್ನ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್(GT) ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಭರ್ಜರಿ ಗೆಲುವು ಸಾಧಿಸುವ ಮೂಲಕ ಸತತ ಎರಡನೇ ಬಾರಿ ಟ್ರೋಫಿ ಮುಡಿಗೇರಿಸಿಕೊಂಡಿದೆ.
ಈ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆರ್ ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಸೋಮವಾರ ವೃಂದಾವನದಲ್ಲಿರುವ ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿದರು.
ಸ್ಟಾರ್ ದಂಪತಿ, ವೃಂದಾವನದಲ್ಲಿರುವ ಪ್ರೇಮಾನಂದ ಮಹಾರಾಜ್ ಅವರ ರಾಧಾ ಕೇಲಿ ಕುಂಜ್ ಆಶ್ರಮಕ್ಕೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದರು. ಅವರ ಭೇಟಿಯ ಹಲವಾರು ಚಿತ್ರಗಳು ಮತ್ತು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಅಷ್ಟಕ್ಕೂ ಈ ಹೈ-ಪ್ರೊಫೈಲ್ ಜೋಡಿ ಪ್ರೇಮಾನಂದ್ ಗುರೂಜಿಯವರ ಸನ್ನಿಧಿಗೆ ಅಷ್ಟೊಂದು ಆಕರ್ಷಿತರಾಗಲು ಕಾರಣವೇನು ಎಂಬುದಕ್ಕೆ ಆಸಕ್ತಿದಾಯಕ ಸಂಗತಿ ಇಲ್ಲಿದೆ.
ಕೆಲವು ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ತಮ್ಮ ಕೆರಿಯರ್‌ನ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ಶತಕಗಳು ಬಾರದೆ, ಫಾರ್ಮ್ ಕಳೆದುಕೊಂಡು ತೀವ್ರ ಟೀಕೆಗೆ ಗುರಿಯಾಗಿದ್ದಾಗ ವಿರಾಟ್ ಕೊಹ್ಲಿ ಮಾನಸಿಕವಾಗಿ ಕುಗ್ಗಿದ್ದರು. ಆ ಸಮಯದಲ್ಲಿ ಅನುಷ್ಕಾ ಅವರೊಂದಿಗೆ ಬೃಂದಾವನಕ್ಕೆ ಭೇಟಿ ನೀಡಿ ಪ್ರೇಮಾನಂದ್ ಗುರೂಜಿಯವರ ಆಶೀರ್ವಾದ ಪಡೆದಿದ್ದರು. ಅದಾದ ಕೆಲವೇ ದಿನಗಳಲ್ಲಿ ವಿರಾಟ್ ಭರ್ಜರಿಯಾಗಿ ಫಾರ್ಮ್‌ಗೆ ಮರಳಿ ಬ್ಯಾಕ್-ಟು-ಬ್ಯಾಕ್ ಶತಕಗಳನ್ನು ಸಿಡಿಸಿದ್ದರು. ಅಂದಿನಿಂದ ಗುರೂಜಿಯವರ ಮೇಲಿನ ಇವರ ನಂಬಿಕೆ ಮತ್ತು ಭಕ್ತಿ ಮತ್ತಷ್ಟು ಹೆಚ್ಚಾಗಿದೆ.
Advertisement