India vs Afghanistan: 6, 6, 6, ವಿಂಟೇಜ್ Rishab Pant ಈಸ್ ಬ್ಯಾಕ್, ಧೋನಿ, ಕಿರ್ಮಾನಿ ಇರುವ ಎಲೈಟ್ ಗ್ರೂಪ್ ಸೇರ್ಪಡೆ! LSG ಶ್ಲಾಘನೆ

ಭಾರತದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಶನಿವಾರ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದು, ಭಾರತ ಪರ 50 ಟೆಸ್ಟ್ ಪಂದ್ಯಗಳಾಡಿದ 3ನೇ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
Rishab Pant
ರಿಷಬ್ ಪಂತ್
Updated on

ಚಂಡೀಗಢ: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಅತ್ಯಪರೂಪದ ದಾಖಲೆಗೆ ಪಾತ್ರರಾಗಿದ್ದು, ಮಹೇಂದ್ರ ಸಿಂಗ್ ಧೋನಿ ಹಾಗೂ ಸೈಯದ್ ಕಿರ್ಮಾನಿರಂತಹ ದಿಗ್ಗಜರಿರುವ ಎಲೈಟ್ ಗ್ರೂಪ್ ಗೆ ಸೇರ್ಪಡೆಯಾಗಿದ್ದಾರೆ.

ಹೌದು.. ಭಾರತದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಶನಿವಾರ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದ್ದು, ಭಾರತ ಪರ 50 ಟೆಸ್ಟ್ ಪಂದ್ಯಗಳನ್ನು ಆಡಿದ ಕೇವಲ ಮೂರನೇ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ನ್ಯೂ ಚಂಡೀಗಢದ ಮುಲ್ಲಾನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಪಂತ್ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಕೇವಲ 28 ವರ್ಷದ ವಯಸ್ಸಿನಲ್ಲೇ ಪಂತ್, ಭಾರತ ಪರ ಕ್ರಮವಾಗಿ 90 ಟೆಸ್ಟ್ ಪಂದ್ಯಗಳನ್ನು ಆಡಿರುವ ಎಂ.ಎಸ್. ಧೋನಿ ಮತ್ತು 88 ಟೆಸ್ಟ್ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿರುವ ಸಯ್ಯದ್ ಕಿರ್ಮಾನಿ ಅವರ ಸಾಲಿಗೆ ಸೇರ್ಪಡೆಯಾಗಿದ್ದಾರೆ.

2018ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಎಡಗೈ ಬ್ಯಾಟರ್ ಪಂತ್, ಕಳೆದ ಕೆಲವು ವರ್ಷಗಳಲ್ಲಿ ಆಧುನಿಕ ಟೆಸ್ಟ್ ಕ್ರಿಕೆಟ್‌ನ ಅತ್ಯಂತ ಪ್ರಭಾವಿ ಪಂದ್ಯ ವಿಜೇತರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.

Rishab Pant
India vs Afghanistan: KL Rahul, ನಾಯಕ ಶುಭ್ ಮನ್ ಗಿಲ್ ಭರ್ಜರಿ ಶತಕ; ಬೃಹತ್ ಮೊತ್ತದತ್ತ ಭಾರತ, ದಿನದಾಟ ಅಂತ್ಯಕ್ಕೆ 368/3

6, 6, 6, ವಿಂಟೇಜ್ Rishab Pant ಈಸ್ ಬ್ಯಾಕ್

ಇನ್ನು ಈ ಪಂದ್ಯದಲ್ಲಿ ಭಾರತದ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ರಿಷಬ್ ಪಂತ್ 70 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿ ಸಹಿತ ಅಜೇಯ 50 ರನ್ ಗಳಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯವಾದ ಐಪಿಎಲ್ 2026ರ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ಪಂತ್ ಅಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ತೋರಿರಲಿಲ್ಲ.

ಅವರ ತಂಡ ಕೂಡ ಟೂರ್ನಿಯಿಂದ ಬೇಗನೇ ಹೊರಬಿದ್ದು ನಿರಾಶೆ ಮೂಡಿಸಿತ್ತು. ಇದು ರಿಷಬ್ ಪಂತ್ ಅವರ ಕ್ರಿಕೆಟ್ ವೃತ್ತಿ ಜೀವನ ತೂಗುಯ್ಯಾಲೆಯಲ್ಲಿರುವಂತೆ ಮಾಡಿತು.

ಆದರೆ ಇಂದು ಆಪ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅವರು ಮತ್ತೆ ತಾವಿನ್ನೂ ವಿಂಟೇಜ್ ರಿಷಬ್ ಪಂತ್ ಎಂಬುದನ್ನು ಸಾಬೀತು ಪಡಿಸಿದರು. ಇಂದು ಪಂತ್ 70 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿ ಸಹಿತ ಅಜೇಯ 50 ರನ್ ಗಳಿಸಿದ್ದಾರೆ.

ಈ ಪೈಕಿ ಅಫ್ಘಾನಿಸ್ತಾನದ ಸ್ಪಿನ್ನರ್ ಮಲ್ಲಿಕ್ ಬೌಲಿಂಗ್ ನಲ್ಲಿ ಒಂದೇ ಓವರ್ ನಲ್ಲಿ ಮೂರು ಸಿಕ್ಸರ್ ಸಿಡಿಸಿ ಪಂತ್ ತಮ್ಮಲ್ಲಿನ್ನೂ ಪವರ್ ಇದೆ ಎಂಬುದುನ್ನು ಸಾಬೀತು ಪಡಿಸಿದರು.

ಟೆಸ್ಟ್ ಕ್ರಿಕೆಟ್‌ ಸ್ಪೆಷಲಿಸ್ಟ್

ಇತ್ತೀಚಿನ ದಿನಗಳಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನದ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದರೂ, ಟೆಸ್ಟ್ ಮಾದರಿಯಲ್ಲಿ ಪಂತ್ ಅವರ ಸಾಧನೆ ಪ್ರಶ್ನಾತೀತವಾಗಿದೆ.

50ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಅವರು 49 ಪಂದ್ಯಗಳಲ್ಲಿ 3,476 ರನ್‌ಗಳನ್ನು 42.91ರ ಸರಾಸರಿಯಲ್ಲಿ ಗಳಿಸಿದ್ದರು. ಇದರಲ್ಲಿ ಎಂಟು ಶತಕಗಳು ಹಾಗೂ ವಿದೇಶಿ ನೆಲದಲ್ಲಿ ಭಾರತದ ಗೆಲುವಿಗೆ ಕಾರಣವಾದ ಹಲವು ಅಮೋಘ ಇನ್ನಿಂಗ್ಸ್‌ಗಳು ಸೇರಿವೆ.

ಇದರ ಜೊತೆಗೆ, 50ನೇ ಟೆಸ್ಟ್ ಪಂದ್ಯಕ್ಕೆ ಕಾಲಿಡುವ ವೇಳೆಗೆ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ 94 ಸಿಕ್ಸರ್‌ಗಳನ್ನು ಸಿಡಿಸಿ ಮತ್ತೊಂದು ವಿಶೇಷ ಸಾಧನೆಯ ಅಂಚಿನಲ್ಲಿದ್ದರು. ಇದೀಗ ಮತ್ತೆ ಮೂರು ಸಿಕ್ಸರ್ ಗಳನ್ನು ಸಿಡಿಸಿ ತಮ್ಮ ಸಿಕ್ಸರ್ ಗಳ ಸಂಖ್ಯೆಯನ್ನು 97ಕ್ಕೆ ಏರಿಕೆ ಮಾಡಿಕೊಂಡಿದ್ದಾರೆ.

ಪಂತ್ ಬ್ಯಾಟಿಂಗ್ ಕುರಿತು LSG ಶ್ಲಾಘನೆ

ಇನ್ನು ರಿಷಬ್ ಪಂತ್ ಬ್ಯಾಟಿಂಗ್ ಕುರಿತು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಶ್ಲಾಘನೆ ವ್ಯಕ್ತಪಡಿಸಿದೆ.

ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನದ ಹೊರತಾಗಿಯೂ ರಾಷ್ಟ್ರೀಯ ತಂಡದಲ್ಲಿ ಪಂತ್ ಉತ್ತಮ ಪ್ರದರ್ಶನ ನೀಡುತ್ತಿರುವುದು ಲಕ್ನೋ ತಂಡಕ್ಕೆ ಖುಷಿ ತಂದಿದೆ.

ಇದೇ ವಿಚಾರವಾಗಿ ಎಲ್ ಎಸ್ ಜಿ ಟ್ವೀಟ್ ಮಾಡಿದ್ದು, ಟೀಕೆಗಳು ಬರುತ್ತವೆ ಮತ್ತು ಹೋಗುತ್ತವೆ. ಆದರೆ ಕ್ಲಾಸ್ ಶಾಶ್ವತವಾಗಿ ಉಳಿಯುತ್ತದೆ. ಕಠಿಣ ಐಪಿಎಲ್‌ನಲ್ಲಿ ಋತುವಿನಿಂದ ಹಿಡಿದು ಭಾರತದ ಟೆಸ್ಟ್ ಪಂದ್ಯದ ನಿರ್ಣಾಯಕ ಬ್ಯಾಟಿಂಗ್‌ವರೆಗೆ, ರಿಷಭ್ ಪಂತ್ ತನಗೆ ತಿಳಿದಿರುವ ಅತ್ಯುತ್ತಮ ರೀತಿಯಲ್ಲಿ ರನ್‌ಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com